×
Ad

ಕೃಷ್ಣಾ ಮೇಲ್ದಂಡೆ ಯೋಜನೆ | ಜೂ.18ಕ್ಕೆ ಜಲಶಕ್ತಿ ಸಚಿವಾಲಯದಿಂದ ಎಲ್ಲಾ ರಾಜ್ಯಗಳ ಸಚಿವರ ಸಭೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-06-08 23:55 IST

 ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಹೊಸದಿಲ್ಲಿ : "ಇದೇ ತಿಂಗಳು 18ರಂದು ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಕೇಂದ್ರ ಜಲಶಕ್ತಿ ಸಚಿವರು ಎಲ್ಲಾ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಈ ವಿಚಾರವಾಗಿ ಒಂದು ತೀರ್ಮಾನಕ್ಕೆ ಬರುವ ಭರವಸೆ ಇದೆ" ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ನವದೆಹಲಿಯಲ್ಲಿ ಭಾನುವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.

ಘನತ್ಯಾಜ್ಯ ವಿಲೇವಾರಿ ಪರಿಶೀಲನೆ :

ದಿಲ್ಲಿ ಭೇಟಿ ವಿಚಾರವಾಗಿ ಮಾಧ್ಯಮಗಳು ಕೇಳಿದಾಗ "ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಬಳಸಲಾಗುತ್ತಿರುವ ತಂತ್ರಜ್ಞಾನವನ್ನು ವೀಕ್ಷಿಸಲು ನಾನು ಹಾಗೂ ಬೆಂಗಳೂರು ಪಾಲಿಕೆಯಿಂದ ಸುಮಾರು 15 ಸದಸ್ಯರ ತಂಡ ಇಲ್ಲಿಗೆ ಆಗಮಿಸಿದ್ದೇವೆ. ಇಲ್ಲಿ ನಗರದ ಹೊರಭಾಗದಲ್ಲಿ ವಾಸನೆರಹಿತವಾಗಿ ತ್ಯಾಜ್ಯ ವಿಲೇವಾರಿ ಕೇಂದ್ರ ಮಾಡಿದ್ದಾರೆ ಎಂದು ಕೇಳಿದ್ದೇನೆ ಎಂದರು.

"ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಂಬಂಧ ಟೆಂಡರ್ ಕರೆಯಲಾಗಿದ್ದು, ಕಸದಿಂದ ಇಂಧನ, ಅನಿಲ ಉತ್ಪಾದನೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಈಗಾಗಲೇ ಹೈದರಾಬಾದ್ ಹಾಗೂ ಚೆನ್ನೈಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ್ದೇನೆ. ದಿಲ್ಲಿಯಲ್ಲಿನ ತಂತ್ರಜ್ಞಾನ ಅಳವಡಿಕೆ ಬಗ್ಗೆ ನಮಗೆ ಪ್ರಸ್ತಾವನೆ ಬಂದಿದ್ದು, ಹೀಗಾಗಿ ಅದನ್ನು ವೀಕ್ಷಣೆ ಮಾಡುತ್ತೇವೆ" ಎಂದು ಹೇಳಿದರು.

ಸುಹಾಸ್ ಶೆಟ್ಟಿ ಪ್ರಕರಣ ಎನ್ಐಎಗೆ ವಹಿಸಿರುವ ಬಗ್ಗೆ ಕೇಳಿದಾಗ, "ನನಗೆ ಈ ವಿಚಾರ ಗೊತ್ತಿಲ್ಲ. ಈ ಸಂಬಂಧ ಗೃಹ ಸಚಿವರನ್ನು ಕೇಳಿ" ಎಂದು ಹೇಳಿದರು.

ನಾವು ಕಡಿಮೆ ಮಾತನಾಡುವುದು ಉತ್ತಮ :

ಡಿಸಿಪಿಗಳ ಪತ್ರ ವೈರಲ್ ಆಗುತ್ತಿದೆ ಎಂದು ಕೇಳಿದಾಗ, "ಈ ಬಗ್ಗೆ ಗೃಹಮಂತ್ರಿಗಳನ್ನು ಕೇಳಿ. ಈ ಪ್ರಕರಣದಲ್ಲಿ ತನಿಖೆ ಆರಂಭವಾಗಿದ್ದು, ನಾವು ಈ ಪ್ರಕರಣದ ಬಗ್ಗೆ ಮಾತನಾಡುವುದನ್ನು ಕಡಿಮೆ ಮಾಡುವುದು ಉತ್ತಮ. ವಿರೋಧ ಪಕ್ಷಗಳು ಏನು ಬೇಕಾದರೂ ಮಾತನಾಡಬಹುದು. ಆದರೆ ಕುನ್ಹಾ ಅವರ ಸಮಿತಿ ತನಿಖೆ ಮಾಡುತ್ತಿರುವುದರಿಂದ ನಮ್ಮ ಮಾತುಗಳು ತನಿಖೆ ಮೇಲೆ ಪರಿಣಾಮ ಬೀರಬಾರದು" ಎಂದು ಸ್ಪಷ್ಟನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News