×
Ad

ನೀರಾವರಿ ವಿಚಾರದಲ್ಲಿ ದೆಹಲಿ ಪ್ರವಾಸ ಫಲಪ್ರದ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-07-11 16:57 IST

ಡಿ.ಕೆ.ಶಿವಕುಮಾರ್

ಬೆಂಗಳೂರು: “ನೀರಾವರಿ ಯೋಜನೆಗಳ ವಿಚಾರವಾಗಿ ದೆಹಲಿ ಪ್ರವಾಸ ಬಹುತೇಕ ಫಲಪ್ರದವಾಗಿದ್ದು, ಎತ್ತಿನಹೊಳೆ ಯೋಜನೆ ಸಂಬಂಧ ನಮ್ಮ ಮನವಿಯನ್ನು ಪುರಸ್ಕರಿಸುವುದಾಗಿ ಹೇಳಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಶುಕ್ರವಾರ ನಗರದಲ್ಲಿ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ದೆಹಲಿ ಪ್ರವಾಸದ ಬಗ್ಗೆ ಮಾಧ್ಯಮಗಳು ಕೇಳಿದಾಗ, “ದೆಹಲಿ ಪ್ರವಾಸದಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್ ಪಾಟೀಲ್, ಭೂಪೇಂದರ್ ಯಾದವ್, ಸೋಮಣ್ಣ ಹಾಗೂ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿದ್ದೆ. ಈ ಭೇಟಿ ವೇಳೆ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಸಂಬಂಧ ಅಧಿಸೂಚನೆ ಹೊರಡಿಸುವುದು, ಮೆಕೆದಾಟು ಯೋಜನೆ ಅಪ್ರೈಸಲ್ ವರದಿ ಬಗ್ಗೆ ಚರ್ಚಿಸಲಾಗಿದೆ. ಕೃಷ್ಣಾ ನದಿ ವಿಚಾರವಾಗಿ ನಾವು ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ಮನದಟ್ಟು ಮಾಡಿದ್ದೇವೆ. ಹೀಗಾಗಿ ಮುಂದೂಡಲಾಗಿರುವ ಸಭೆಯನ್ನು ಶೀಘ್ರದಲ್ಲೇ ಕರೆಯುವುದಾಗಿ ತಿಳಿಸಿದ್ದಾರೆ ಎಂದರು.

ಅರಣ್ಯ ಸಚಿವರ ಬಳಿ ಕಳಸಾ ಬಂಡೂರಿ ವಿಚಾರವಾಗಿ ಚರ್ಚೆ ಮಾಡಲಾಗಿದೆ. ಈ ವಿಚಾರವಾಗಿ ಪ್ರಹ್ಲಾದ್ ಜೋಷಿ ಅವರ ಜತೆಗೂ ಮಾತನಾಡಿದ್ದೇನೆ ಎರಡು ರಾಜ್ಯಗಳ ನಡುವೆ ರಾಜಿಗೆ ಸಲಹೆ ನೀಡಿದ್ದಾರೆ. ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ವಿಚಾರದಲ್ಲಿ ಕೆಲವು ತಾಂತ್ರಿಕ ಅಂಶಗಳಿವೆ. ಈ ಬಗ್ಗೆ ಕಾನೂನು ತಜ್ಞರ ಜೊತೆ ಸಭೆ ಮಾಡಿದ್ದೇನೆ. ಗೋವಾದವರು ನಮಗೆ ಶೋಕಾಸ್ ನೋಟೀಸ್ ನೀಡಿರುವುದು ಸರಿಯಲ್ಲ ಎಂದು ಹೇಳಿದ್ದು, ಕಾನೂನು ತಜ್ಞರ ಜೊತೆ ಚರ್ಚೆ ಮಾಡಲಾಗಿದೆ” ಎಂದರು.

“ಜೊತೆಗೆ ಹೊಸದಾಗಿ 6 ಯೋಜನೆಗಳಿಗೆ ಮನವಿ ಸಲ್ಲಿಸಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ಕೇಂದ್ರ ಘೋಷಿಸಿದ್ದ ಅನುದಾನದ ಬಗ್ಗೆಯೂ ಮನವಿ ಸಲ್ಲಿಸಿದ್ದೇನೆ. ಸಂಸತ್ ಅಧಿವೇಶನ ಸಂದರ್ಭದಲ್ಲಿ ಮತ್ತೊಮ್ಮೆ ದೆಹಲಿಗೆ ಹೋಗಿ, ರಾಜ್ಯದ ಸಂಸದರ ಜೊತೆ ಚರ್ಚೆ ನಡೆಸಿ ಒಟ್ಟಾಗಿ ಒತ್ತಾಯ ಹೇರಲು ಮನವಿ ಮಾಡಲಾಗುವುದು. ನಾನು, ಮುಖ್ಯಮಂತ್ರಿಗಳು, ಬೃಹತ್ ಕೈಗಾರಿಕಾ ಸಚಿವರು ಸೇರಿ ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಡಿಫೆನ್ಸ್ ಕಾರಿಡಾರ್ ಹಾಗೂ ಬೆಂಗಳೂರಿನಲ್ಲಿ ವಿವಿಧ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಬಿಟ್ಟುಕೊಡಬೇಕು ಎಂದು ಮನವಿ ಮಾಡಿದ್ದೇವೆ” ಎಂದು ತಿಳಿಸಿದರು.

ಎತ್ತಿನಹೊಳೆ ಯೋಜನೆ ಸಂಬಂಧ ಲಕ್ಕೇನಹಳ್ಳಿಯಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಕೇಳಿದಾಗ, “ನೀವು ರಸ್ತೆ, ಅಣೆಕಟ್ಟು ಸೇರಿದಂತೆ ಯಾವುದೇ ಯೋಜನೆ ಮಾಡಬೇಕಾದರೂ ವಿರೋಧ ವ್ಯಕ್ತವಾಗುತ್ತದೆ. ಕುಡಿಯುವ ನೀರು ಪೂರೈಸಲೇಬೇಕು. ಈ ನೀರನ್ನು ಎಲ್ಲಾದರೂ ಸಂಗ್ರಹ ಮಾಡಿಕೊಳ್ಳಬೇಕು. ಲಕ್ಕೇನಹಳ್ಳಿ ಮಾತ್ರವಷ್ಟೇ ಅಲ್ಲ, ಕೊರಟಗೆರೆ ಭಾಗದಲ್ಲಿ ಕೆಲವು ಪ್ರದೇಶ ಬಳಸಿಕೊಳ್ಳಬೇಕು ಎಂದು ಆಲೋಚಿಸಿದ್ದೆವು. ನೀರು ಹೇಗೆ ಹರಿಯುತ್ತದೆ ಹೇಳಲು ಸಾಧ್ಯವಿಲ್ಲ. ಈ ವಿಚಾರವಾಗಿ ಪರಮೇಶ್ವರ್ ಅವರ ಜತೆ ಚರ್ಚಿಸಿ, ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು” ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News