2027ರ ಮಾರ್ಚ್ ವೇಳೆಗೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ಕುಡಿಯುವ ನೀರು ಪೂರೈಕೆ : ಡಿ.ಕೆ.ಶಿವಕುಮಾರ್
ಬೆಂಗಳೂರು, ಆ.11: ಕೋಲಾರ, ಚಿಕ್ಕಬಳ್ಳಾಪುರಕ್ಕೆ 2027ರ ಮಾರ್ಚ್ ವೇಳೆಗೆ ಎತ್ತಿನಹೊಳೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸೋಮವಾರ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ವೆಂಕಟಶಿವಾರೆಡ್ಡಿ ಮಂಡಿಸಿದ್ದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಸ್ಥಗಿತಗೊಂಡಿತ್ತು. ನಾವು ವಿಶೇಷ ಆದ್ಯತೆ ನೀಡಿ ನೀರನ್ನು ಹೊರಕ್ಕೆ ತಂದಿದ್ದೇವೆ. ಅವರ ನಾಯಕರು(ಎಚ್.ಡಿ.ಕುಮಾರಸ್ವಾಮಿ) ಈ ಯೋಜನೆಯಲ್ಲಿ ನೀರು ಬರುವುದೇ ಇಲ್ಲ ಎಂದು ಹೇಳುತ್ತಿದ್ದರು ಎಂದರು.
ಆದರೆ, ನಾವು ನೀರು ತಂದಿದ್ದೇವೆ. ಈಗ ತುಮಕೂರಿನವರೆಗೂ ಈ ನೀರನ್ನು ತರಬೇಕಾಗಿದ್ದು, ಅಲ್ಲಿ ಸಮತೋಲಿತ ಜಲಾಶಯ ನಿರ್ಮಿಸಬೇಕಾಗಿದೆ. ಇದಕ್ಕೆ ಅರಣ್ಯ ಇಲಾಖೆಗೆ ಬದಲಿ ಜಮೀನು ನೀಡುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಸಿ ತುಮಕೂರಿನವರೆಗೂ ನೀರು ತರುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.
ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ತೆಗೆದುಕೊಂಡು ಹೋಗುವ ಕಾಮಗಾರಿಗಳು ಬಾಕಿ ಇದ್ದವು. ಇಲ್ಲಿಯೂ ಪೈಪ್ ಅಳವಡಿಕೆಗೆ ಅನುಮತಿ ನೀಡಿದ್ದೇವೆ. ನಮ್ಮ ನಾಯಕರು ಸೇರಿದಂತೆ ಸ್ಥಳೀಯ ಶಾಸಕರು ಸೇರಿ ಅಲ್ಲಿ ಪೂಜೆ ಸಲ್ಲಿಸಿ ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು. ಈ ಮಧ್ಯೆ ಕೊರಟಗೆರೆಯಲ್ಲಿ ಆಕ್ಷೇಪ ಇದ್ದ ಕಾರಣ ಪರಮೇಶ್ವರ್ ಅವರ ಜೊತೆ ಚರ್ಚಿಸಿ ಅದನ್ನು ಬಗೆಹರಿಸಿದ್ದೇವೆ ಎಂದು ಅವರು ವಿವರಿಸಿದರು.
ಈ ವೇಳೆ ಮಾತನಾಡಿದ ವೆಂಕಟಶಿವಾರೆಡ್ಡಿ, ಮೊದಲು ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ನಮಗೆ ಆದ್ಯತೆ ನೀಡಿ, ಆನಂತರ ಹಾಸನ, ತುಮಕೂರಿಗೆ ನೀರು ನೀಡಿ” ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಹಾಸನ ಹಾಗೂ ತುಮಕೂರಿನವರೂ ಈಗಲೆ ನೀರು ಕೇಳುತ್ತಿಲ್ಲ. ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಿ, ಆನಂತರ ನಮಗೆ ನೀಡಿ ಎನ್ನುತ್ತಿದ್ದಾರೆ. ಈ ಯೋಜನೆಯಲ್ಲಿ ಚಿಕ್ಕಬಳ್ಳಾಪುರ ಹಾಗೂ ಕೋಲಾರ ನಮ್ಮ ಮೊದಲ ಆದ್ಯತೆ ಎಂದು ತಿಳಿಸಿದರು.
ಎತ್ತಿನಹೊಳೆ ಯೋಜನೆಯ ಮೂಲ ಉದ್ದೇಶದಂತೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಭಾಗಗಳಿಗೆ ಯಶಸ್ವಿಯಾಗಿ ನೀರನ್ನು ಹರಿಸಲು ಅನುಕೂಲವಾಗುವಂತೆ ಕೋಲಾರ ಗುರುತ್ವ ಪೈಪ್‍ಲೈನ್ ಪ್ಯಾಕೇಜ್-2 ಮತ್ತು 4, ಕೋಲಾರ ಫೀಡರ್ ಪೈಪ್‍ಲೈನ್ ಪ್ಯಾಕೇಜ್-5 ಮತ್ತು 6, ಶ್ರೀನಿವಾಸಪುರ ಫೀಡರ್ ಪೈಪ್‍ಲೈನ್ ಪ್ಯಾಕೇಜ್-1 ರಿಂದ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಲು ಮೇ 16ರಂದು ಅನುಮೋದನೆ ನೀಡಲಾಗಿದೆ. ಈ 7 ಪ್ಯಾಕೇಜ್ ಕಾಮಗಾರಿಗಳಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದ್ದು, ಪ್ಯಾಕೇಜ್ ಕಾಮಗಾರಿಗಳನ್ನು ಮುಂದಿನ ಅಕ್ಟೋಬರ್ ನಲ್ಲಿ ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಶಿವಕುಮಾರ್ ವಿವರಿಸಿದರು.