ಕಡೂರು | ಗ್ರಾಪಂ ಸದಸ್ಯನ ಹತ್ಯೆ: ಬಜರಂಗದಳದ ಐವರು ಕಾರ್ಯಕರ್ತರ ಬಂಧನ
ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ
ಗಣೇಶ್ ಗೌಡ
ಚಿಕ್ಕಮಗಳೂರು: ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ, ಗ್ರಾಪಂ ಸದಸ್ಯರೊಬ್ಬರು ಬರ್ಬರವಾಗಿ ಹತ್ಯೆಯಾದ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಶುಕ್ರವಾರ ರಾತ್ರಿ 10:30ರ ಸುಮಾರಿಗೆ ನಡೆದಿದೆ.
ಗಣೇಶ್ ಗೌಡ(38) ಕೊಲೆಯಾದವರು. ಇವರು ಸಖರಾಯಪಟ್ಟಣ ಗ್ರಾಪಂ ಸದಸ್ಯರಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಸಂಜಯ್, ಭೂಷಣ್, ಮಿಥುನ್ ಎಂಬವರು ಸೇರಿದಂತೆ ಬಿಜೆಪಿ, ಬಜರಂಗದಳದ ಐವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಸಖರಾಯಪಟ್ಟಣದಲ್ಲಿ ಎರಡು ದಿನಗಳ ಹಿಂದೆ ದತ್ತ ಜಯಂತಿಯ ಬ್ಯಾನರ್ ತೆರವು ವಿಚಾರವಾಗಿ ಎರಡು ತಂಡಗಳ ಮಧ್ಯೆ ಗಲಾಟೆ ನಡೆದಿತ್ತು. ಇದೇ ವಿಚಾರವಾಗಿ ಈ ತಂಡಗಳ ಮಧ್ಯೆ ಶುಕ್ರವಾರ ರಾತ್ರಿಯೂ ಸಖರಾಯಪಟ್ಟಣ ಬಾರ್ ಬಳಿ ಗಲಾಟೆ ನಡೆದಿತ್ತು. ಇದಾಗಿ ಅರ್ಧ ಗಂಟೆಯ ಬಳಿಕ ಸಖರಾಪಟ್ಟಣದ ಸಮೀಪದ ಕಲ್ಮುರುಡೇಶ್ಚರ ಮಠದ ಬಳಿ ಗಣೇಶ್ ಗೌಡರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಕಲ್ಮರಡಿ ಮಠದ ರಸ್ತೆಯಲ್ಲಿ ಗಣೇಶ್ ಗೌಡ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕಿನಲ್ಲಿ ಅಡ್ಡಗಟ್ಟಿದ ಎಂಟು ಮಂದಿಯಿದ್ದ ಹಂತಕರ ತಂಡ ಅವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ದಾಳಿ ಮಾಡಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯಲ್ಲಿ ಆರೋಪಿಗಳಲ್ಲಿ ಸಂಜಯ್ ಎಂಬಾತನಿಗೂ ಗಾಯವಾಗಿದ್ದು, ಆತನನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚನೆ: ಎಸ್ಪಿ
ಕೊಲೆ ನಡೆದಿರುವ ಸಖರಾಯಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಐವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ.