×
Ad

ಸಂಜೆ 7 ಗಂಟೆ ಬಳಿಕ ಯಾವುದೇ ವ್ಯಾಪಾರ ಚಟುವಟಿಕೆಗಳು ಇಲ್ಲದೆ ಮಂಗಳೂರು ಸತ್ತು ಹೋಗಿದೆ : ಡಿ.ಕೆ.ಶಿವಕುಮಾರ್

Update: 2025-08-19 21:35 IST

ಬೆಂಗಳೂರು, ಆ.19: ಮಂಗಳೂರು ದೊಡ್ಡ ನಗರವಾಗಿ ಗುರುತಿಸಿಕೊಂಡಿದ್ದರೂ ಸಂಜೆ ಏಳು ಗಂಟೆ ಬಳಿಕ ಯಾವುದೇ ವ್ಯಾಪಾರ-ವಾಹಿವಾಟು ಚಟುವಟಿಕೆಗಳು ಇಲ್ಲದೆ ಸತ್ತು ಹೋಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮಂಗಳವಾರ ಶಾಸನ ರಚನಾ ಕಲಾಪದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಅವರು ಮಂಡಿಸಿದ ಕೆರೆಗಳ ಸಂರಕ್ಷಣೆ ಹಿನ್ನೆಲೆ 2025ನೆ ಸಾಲಿನ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕದ ಚರ್ಚೆಯಲ್ಲಿ ಉಪಮುಖ್ಯಮಂತ್ರಿ ಮಾತನಾಡಿದರು.

ಮಂಗಳೂರಿನಲ್ಲಿ ಅತಿ ಹೆಚ್ಚು ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳಿವೆ. ಆದರೆ ಒಂದೇ ಒಂದು ಪಂಚತಾರ ಹೋಟೆಲ್‍ಗಳಿಲ್ಲ. ಏರ್‌ ಪೋರ್ಟ್ ಇದ್ದರು ಅಲ್ಲಿ ಹೋಟೆಲ್ ನಿರ್ಮಾಣಕ್ಕೆ ಬಂಡವಾಳ ಹೂಡಲು ಹೆದರುತ್ತಿದ್ದಾರೆ. ಅಲ್ಲದೆ, ನಾನು ಗ್ರಾನೈಟ್ ವ್ಯವಹಾರ ಮಾಡುತ್ತಿದ್ದ ವೇಳೆ ಮಂಗಳೂರಿಗೆ ಕಲ್ಲು ಸರಬರಾಜು ಮಾಡುತ್ತಿದ್ದೆ. ಆಗ ತುಂಬಾ ನಗರ ಚಟುವಟಿಕೆಯಿಂದ ಕೂಡಿತ್ತು. ಆದರೆ ಈಗ ಸಂಪೂರ್ಣ ಸತ್ತು ಹೋಗಿದೆ, ಚಟುವಟಿಕೆಗಳೆ ಇಲ್ಲ ಎಂದು ತಿಳಿಸಿದರು.

ನಾವೆಲ್ಲರೂ ಕಳಕಳಿಯಿಂದ ಕೆಲಸ ಮಾಡುತ್ತಿದ್ದೇವೆ. ಕರಾವಳಿಯ ಜನರ ಬಗ್ಗೆ ನಮಗೆ ಕಾಳಜಿಯಿದೆ ಏಕೆಂದರೆ ಕೆರೆ ಬಫರ್ ವಲಯದ ಕಾರಣಕ್ಕೆ ಅವರ ಬದುಕಿಗೆ ಕಷ್ಟವಾಗುತ್ತದೆ. ಮನೆಗಳನ್ನು ಕಟ್ಟಿಕೊಳ್ಳಲು ಆಗುವುದೇ ಇಲ್ಲ. ಕೇರಳ, ಗೋವಾದವರು ಎನ್‍ಜಿಟಿ, ಕೇಂದ್ರ ಸರಕಾರ ಹೀಗೆ ಎಲ್ಲರಿಂದಲೂ ಅನುಮತಿ ಪಡೆದಿದ್ದಾರೆ. ಆದರೆ ನಾವು ಒದ್ದಾಡುತ್ತಿದ್ದೇವೆ. ಸಿಆರ್‍ಜೆಡ್ ನಿಂದಲೂ ಕರಾವಳಿಯವರು ತೊಂದರೆಗೆ ಒಳಗಾಗುತ್ತಿದ್ದಾರೆ. ಇದನ್ನು ಮೀರಿ ಕೆಲಸ ಮಾಡುವುದು ಹೇಗೆ ಎನ್ನುವುದರ ಬಗ್ಗೆ ನಾನು ಆಲೋಚಿಸಿದ್ದೇನೆ ಎಂದು ಉಲ್ಲೇಖಿಸಿದರು.

ಮೊದಲು ಇದರ ಬಗ್ಗೆ ಪ್ರಾಥಮಿಕ ಸಭೆ ನಡೆಸಿದ ಮೇಲೆ ಮಂಗಳೂರಿಗೆ ತೆರಳಿ ಉಡುಪಿ ಸೇರಿದಂತೆ ಕರಾವಳಿ ಭಾಗದ ಎಲ್ಲರನ್ನು ಕರೆಸಿ ಚರ್ಚೆ ನಡೆಸೋಣ. ಏಕೆಂದರೆ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಜನರು ಮುಂಬೈ, ಗೋವಾಗಳಿಗೆ ತೆರಳುವುದು ತಪ್ಪಬೇಕು ಎಂದು ಅವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News