ಜಿಬಿಎ ಪಾಲಿಕೆಗಳಲ್ಲಿ ಶೇ.50ರಷ್ಟು ಮಹಿಳಾ ಕಾರ್ಪೊರೇಟರ್ : ಡಿ.ಕೆ.ಶಿವಕುಮಾರ್
ಬೆಂಗಳೂರು, ಅ.8: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯಲ್ಲಿ ಶೇ.50ರಷ್ಟು ಟಿಕೆಟ್ ಅನ್ನು ಮಹಿಳೆಯರಿಗೆ ನೀಡಲಾಗುವುದು. ಆ ಮೂಲಕ ಮುಂದಿನ ದಿನಗಳಲ್ಲಿ ಬೆಂಗಳೂರಿನ ಪಾಲಿಕೆಗಳಿಗೆ ಅರ್ಧದಷ್ಟು ಮಹಿಳಾ ಕಾರ್ಪೊರೇಟರ್ ಗಳು ಆಯ್ಕೆಯಾಗಿ ಬರುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ಬುಧವಾರ ನಗರದಲ್ಲಿ ಬಿ.ಪ್ಯಾಕ್ ಸಂಸ್ಥೆಯು ಆಯೋಜಿಸಿದ್ದ ‘ನಮ್ಮ ಬೆಂಗಳೂರಿನ ಉತ್ತಮ ಆಡಳಿತಕ್ಕೊಂದು ದೃಷ್ಟಿಕೋನ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವಾರು ದಶಕಗಳಿಂದ ನಗರದಲ್ಲಿ ಅನೇಕ ಸವಾಲುಗಳಿವೆ. ಶಿಕ್ಷಣ, ಉದ್ಯೋಗ ಹಾಗೂ ಉತ್ತಮ ಜೀವನ ಕಟ್ಟಿಕೊಳ್ಳುವ ಆಸೆಯಿಂದ ಜನ ಬೆಂಗಳೂರಿಗೆ ವಲಸೆ ಬರುತ್ತಿದ್ದಾರೆ. ಯಾವುದೇ ನಗರದ ಜನಸಂಖ್ಯೆ ಹೆಚ್ಚಿದಾಗ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದರು.
ಶಿಕ್ಷಣದ ವಿಚಾರದಲ್ಲಿ ಬೆಂಗಳೂರು ದೇಶದ ಇತರೇ ನಗರಗಳಿಗಿಂತ ಉತ್ತಮವಾಗಿದೆ. ಬೆಂಗಳೂರಿನಲ್ಲಿ 25 ಲಕ್ಷ ಐಟಿ ಉದ್ಯೋಗಿಗಳು ಇದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಈಗ ಅದು 1.40 ಕೋಟಿಗೆ ಏರಿದೆ ಎಂದು ಅವರು ಹೇಳಿದರು.
ನಗರದ ಹೊರ ವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕಟ್ಟಡ ತ್ಯಾಜ್ಯ ಸುರಿಯುತ್ತಿದ್ದಾರೆ. ಹೀಗಾಗಿ ಈ ರೀತಿ ಕಸ ಎಸೆಯುವ ಎಲ್ಲ ವಾಹನ ಮಾಲಕರಿಗೆ ನೋಟೀಸ್ ನೀಡುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎರಡೂವರೆ ವರ್ಷಗಳಿಂದ ನಾನು ಕಸ ವಿಲೇವಾರಿ ವಿಚಾರದಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಕಸದ ಮಾಫಿಯಾ ನನ್ನ ಪ್ರಯತ್ನವನ್ನು ತಡೆಯುತ್ತಿವೆ. ಕೋರ್ಟ್‍ನಲ್ಲಿ ಪಿಐಎಲ್ ಹಾಕಿ ನಮ್ಮನ್ನು ತಡೆಯುತ್ತಿದ್ದಾರೆ ಎಂದು ಅವರು ವಿವರಿಸಿದರು.
ನಗರದ ಆಸ್ತಿಗಳ ಸಮೀಕ್ಷೆ ಮಾಡುತ್ತಿದ್ದು, ಯಾರು ಎಷ್ಟು ಆಸ್ತಿ ಹೊಂದಿದ್ದಾರೆ ಎಂದು ಪತ್ತೆ ಮಾಡುತ್ತಿದ್ದೇವೆ. ದಿಲ್ಲಿಯಲ್ಲಿ ಕೇವಲ 2 ಸಾವಿರ ಕೋಟಿ ರೂ. ತೆರಿಗೆ ಮೂಲಕ ಆದಾಯ ಸಂಗ್ರಹವಾಗುತ್ತಿದೆ. ಆದರೆ ನಮ್ಮ ಸರಕಾರ ಬೆಂಗಳೂರಿನಲ್ಲಿ ಓಟಿಎಸ್ ಅನ್ನು ಜಾರಿ ಮಾಡಿ, 7 ಸಾವಿರ ಕೋಟಿ ರೂ.ವರೆಗೆ ತೆರಿಗೆ ಸಂಗ್ರಹ ಮಾಡಿದ್ದೇವೆ. ನಗರದಲ್ಲಿ ರಸ್ತೆಗುಂಡಿ ವಿಚಾರವಾಗಿ ಸಾಕಷ್ಟು ಟೀಕೆ ಮಾಡುತ್ತಾರೆ. ಆದರೆ ದಿಲ್ಲಿಯಲ್ಲಿರುವ ನನ್ನ ಮನೆ ಮುಂದಿನ ರಸ್ತೆಯಲ್ಲಿ 100 ಮೀಟರ್ ವ್ಯಾಪ್ತಿಯಲ್ಲೇ 70 ರಸ್ತೆಗುಂಡಿಗಳಿವೆ. ಆದರೂ ದಿಲ್ಲಿ ಹಾಗೂ ಇತರೆ ನಗರಗಳಲ್ಲಿರುವ ರಸ್ತೆಗುಂಡಿಗಳು ಸುದ್ದಿಯಾಗುವುದಿಲ್ಲ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ 1.25 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳನ್ನು ಮಾಡಲು ಮುಂದಾಗಿದ್ದೇವೆ. ಟನಲ್ ರಸ್ತೆಗೆ 35-40 ಸಾವಿರ ಕೋಟಿ ರೂ., ಮೇಲ್ಸೇತುವೆಗೆ ಸುಮಾರು 14 ಸಾವಿರ ಕೋಟಿ ರೂ., ಡಬಲ್ ಡೆಕ್ಕರ್ ರಸ್ತೆಗೆ 10 ಸಾವಿರ ಕೋಟಿ ರೂ., 16,100 ಕೋಟಿ ರೂ., ಬಫರ್ ಜೋನ್ ರಸ್ತೆಗೆ 4 ಸಾವಿರ ಕೋಟಿ ರೂ. ಅನುದಾನದ ಅಗತ್ಯವಿದೆ. ಕೇವಲ ಒಂದೆರಡು ವರ್ಷಗಳಲ್ಲಿ ಎಲ್ಲವನ್ನು ಸರಿಪಡಿಸಲು ಸಾಧ್ಯವಿಲ್ಲ. ಟನಲ್ ಹೊರತಾಗಿ ಉಳಿದ ಎಲ್ಲ ಯೋಜನೆಗಳು ಮೂರ್ನಾಲ್ಕು ವರ್ಷಗಳಲ್ಲಿ ಮುಕ್ತಾಯವಾಗಲಿದ್ದು, ಟನಲ್ ರಸ್ತೆಗೆ ನಾಲ್ಕು ವರ್ಷಕ್ಕಿಂತ ಹೆಚ್ಚಿನ ಕಾಲಾವಕಾಶ ಬೇಕಾಗಿದೆ ಎಂದು ಅವರು ವಿವರಿಸಿದರು.
ಕಾಂಗ್ರೆಸ್ ತಂದಿರುವ ಕಾನೂನು, ಯೋಜನೆಗಳನ್ನು ಬದಲಿಸಲು ಸಾಧ್ಯವಿಲ್ಲ: ಈ ದೇಶದಲ್ಲಿ ಕಾಂಗ್ರೆಸ್ ಸರಕಾರ ತಂದಿರುವ ಕಾನೂನು, ಯೋಜನೆಗಳನ್ನು ಬೇರೆ ಯಾವುದೇ ಸರಕಾರಗಳು ಬದಲಾಯಿಸಲು ಸಾಧ್ಯವಾಗಿಲ್ಲ. ಶೈಕ್ಷಣಿಕ ಹಕ್ಕು, ಆಹಾರ ಭದ್ರತೆ, ಉದ್ಯೋಗ ಖಾತ್ರಿ, ಬ್ಯಾಂಕುಗಳ ರಾಷ್ಟ್ರೀಕರಣ, ಆಧಾರ್, ಭೂ ಸುಧಾರಣೆ ಕಾಯ್ದೆ ಯಾವುದೇ ಆಗಿರಲಿ ನಮ್ಮ ಯೋಜನೆಯನ್ನು ಬೇರೆಯವರು ಬದಲಿಸಲು ಆಗುವುದಿಲ್ಲ. ನಾವು ಯಾವುದೇ ತೀರ್ಮಾನ ಮಾಡಿದರೂ ಕಾನೂನಾತ್ಮಕವಾಗಿ ಹಾಗೂ ದೂರದೃಷ್ಟಿಯಿಂದ ಮಾಡಿರುತ್ತೇವೆ. ಹೀಗಾಗಿ ಬೇರೆ ಸರಕಾರಗಳು ಬದಲಾಯಿಸಲು ಆಗುವುದಿಲ್ಲ. ಜಿಬಿಎ ಮಾಡುವಾಗಲೂ ನಾನು ಸಮಿತಿ ಮಾಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ ನಂತರವೇ ಮುಂದುವರೆದಿದ್ದೇನೆ.
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ