ʼಗೃಹಲಕ್ಷ್ಮಿ ಹಣ ಸಾಲಕ್ಕೆ ಕಡಿತ ಬೇಡʼ: ಬ್ಯಾಂಕುಗಳಿಗೆ ಸೂಚಿಸಲು ಮುಖ್ಯ ಕಾರ್ಯದರ್ಶಿಗೆ ಸಿಎಂ ಡಿ.ಕೆ.ಶಿವಕುಮಾರ್ ಆದೇಶ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯಡಿ ಮಹಿಳೆಯರ ಖಾತೆಗೆ ಜಮೆಯಾಗುವ ಮಾಸಿಕ 2 ಸಾವಿರ ರೂಪಾಯಿ ಹಣವನ್ನು ಯಾವುದೇ ಕಾರಣಕ್ಕೂ ಸಾಲದ ಕಂತು ಅಥವಾ ಬಡ್ಡಿಗೆ ಕಡಿತ ಮಾಡಿಕೊಳ್ಳದಂತೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನ ನೀಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಲ್ಲಿಸಿದ ಮನವಿ ಪತ್ರಕ್ಕೆ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸುವಂತೆ ಸೂಚನೆ ನೀಡಿದ್ದಾರೆ.
‘ಬ್ಯಾಂಕ್ ಆಡಳಿತ ಮಂಡಳಿಗೆ ಪತ್ರ ಬರೆಯಿರಿ, ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಯಿಂದ ಹಣವನ್ನು ಸಾಲದ ಕಂತಿಗೆ ಕಡಿತಗೊಳಿಸದಂತೆ ಸ್ಪಷ್ಟವಾಗಿ ತಿಳಿಸಿ’ ಎಂದು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.
ಮನವಿ ಪತ್ರದಲ್ಲೇನಿದೆ?:
ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಗೃಹಲಕ್ಷ್ಮಿ ಹಣ ಕಡಿತದಿಂದ ಬಡ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದಕ್ಕೆ ಕೈಗೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮಗಳ ಕುರಿತು ವಿಸ್ತøತವಾಗಿ ಮಾಹಿತಿ ನೀಡಿದ್ದಾರೆ.
1.ಮೂಲ ಉದ್ದೇಶಕ್ಕೆ ಧಕ್ಕೆ: ಪ್ರತಿ ತಿಂಗಳು 1.24 ಕೋಟಿ ಕುಟುಂಬದ ಯಜಮಾನಿಯರ ಖಾತೆಗೆ ಜಮೆಯಾಗುತ್ತಿರುವ 2 ಸಾವಿರ ರೂ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ನಿತ್ಯದ ಅಗತ್ಯಗಳು, ಮಕ್ಕಳ ಶಿಕ್ಷಣ ಹಾಗೂ ಮಹಿಳೆಯರ ಸ್ವಾವಲಂಬನೆಗೆ ದೊಡ್ಡ ಆಸರೆಯಾಗಿದೆ. ಆದರೆ, ವಾಣಿಜ್ಯ ಬ್ಯಾಂಕುಗಳು, ಖಾಸಗಿ ಫೈನಾನ್ಸ್ ಕಂಪನಿಗಳು ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಣ ಜಮೆಯಾದ ತಕ್ಷಣವೇ ಹಳೆಯ ಸಾಲದ ಬಾಕಿ ಅಥವಾ ಬಡ್ಡಿಯ ನೆಪವೊಡ್ಡಿ ಹಣ ಕಡಿತಗೊಳಿಸುತ್ತಿವೆ. ಫಲಾನುಭವಿಗಳ ಗಮನಕ್ಕೂ ತರದೆ ಕಡಿತ ಮಾಡಿಕೊಳ್ಳುತ್ತಿರುವುದರಿಂದ ಯೋಜನೆಯ ಮೂಲ ಆಶಯಕ್ಕೆ ಧಕ್ಕೆ ಉಂಟಾಗುತ್ತಿದೆ.
2. ಡಿಎಲ್‍ಆರ್‍ಸಿ ಸಭೆಗಳ ನಿರ್ಣಯ: ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್‍ಗಳ ಪರಿಶೀಲನಾ ಸಮಿತಿ ಸಭೆಗಳಲ್ಲೂ ಜಿಲ್ಲಾಡಳಿತಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ‘ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಹಣವನ್ನು ಸಾಲದ ಕಂತು ಅಥವಾ ಬಡ್ಡಿಗೆ ಮುಟ್ಟುಗೋಲು ಹಾಕಿಕೊಳ್ಳಬಾರದು’ ಎಂದು ಈಗಾಗಲೇ ಸ್ಪಷ್ಟಪಡಿಸಿವೆ.
3. ಬ್ಯಾಂಕುಗಳಿಗೆ ಸರಕಾರದ ಕಠಿಣ ಆದೇಶ ಅಗತ್ಯ: ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಬ್ಯಾಂಕುಗಳು ಗೃಹಲಕ್ಷ್ಮಿ ಅನುದಾನವನ್ನು ಫಲಾನುಭವಿಯ ಹಳೆಯ ಸಾಲ, ಕೃಷಿಯೇತರ ಸಾಲ ಅಥವಾ ಬಡ್ಡಿಗೆ ಜಮೆ ಮಾಡಿಕೊಳ್ಳದಂತೆ ಮತ್ತು ಮಹಿಳೆಯರು ಕುಟುಂಬ ನಿರ್ವಹಣೆಗೆ ಹಣವನ್ನು ಮುಕ್ತವಾಗಿ ಡ್ರಾ ಮಾಡಲು ಅವಕಾಶ ನೀಡುವಂತೆ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ಮೂಲಕ ಕಠಿಣ ಸುತ್ತೋಲೆ ಹೊರಡಿಸಬೇಕು.
4. ಮೈಕ್ರೋ ಫೈನಾನ್ಸ್ ಹಾವಳಿಗೆ ಬ್ರೇಕ್: ಫಲಾನುಭವಿಗಳ ಖಾತೆಗೆ ಹಣ ಬರುತ್ತಿದ್ದಂತೆ ಸ್ಥಳದಲ್ಲೇ ಬಲವಂತವಾಗಿ ವಸೂಲಿ ಮಾಡುವ ಅಥವಾ ಬೆದರಿಕೆ ಒಡ್ಡುವ ಖಾಸಗಿ ಫೈನಾನ್ಸ್ ಕಂಪನಿಗಳು ಮತ್ತು ಏಜೆಂಟರ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿ, ಅವರ ಪರವಾನಗಿ ರದ್ದುಪಡಿಸುವಂತಹ ಕಠಿಣ ಎಚ್ಚರಿಕೆ ನೀಡಬೇಕು.
5. ಕಡಿತವಾದ ಹಣ ತಕ್ಷಣ ಮರುಪಾವತಿ: ಮಹಿಳೆಯರ ಸ್ಪಷ್ಟ ಲಿಖಿತ ಒಪ್ಪಿಗೆಯಿಲ್ಲದೆ ಈಗಾಗಲೇ ಸಾಲದ ಬಾಕಿಗೆ ಕಡಿತಗೊಳಿಸಲಾಗಿರುವ ಹಣವನ್ನು ತಕ್ಷಣವೇ ಆಯಾ ಮಹಿಳೆಯರ ಖಾತೆಗೆ ಮರುಜಮೆ ಮಾಡಿಸಲು ಬ್ಯಾಂಕುಗಳಿಗೆ ತಾಕೀತು ಮಾಡುವಂತೆ ಜಿಲ್ಲಾ ಪಂಚಾಯಿತಿಗಳ ಸಿಇಒಗಳಿಗೆ ಸೂಚನೆ ನೀಡಬೇಕು.
6. ಜಿಲ್ಲಾಡಳಿತದಿಂದ ಮೇಲುಸ್ತುವಾರಿ ಹಾಗೂ ಪರಿಶೀಲನೆ: ಅಕ್ರಮ ಹಣ ಕಡಿತ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ನಿರಂತರ ಮೇಲುಸ್ತುವಾರಿ ವಹಿಸಬೇಕು. ಜೊತೆಗೆ, ವಿವಿಧ ಇಲಾಖೆಗಳು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳು ನಡೆಸುವ ನಿಯಮಿತ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಈ ವಿಷಯವನ್ನು ಕಡ್ಡಾಯವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.