Mysuru | ದಸರಾ ಯುವ ಸಂಭ್ರಮಕ್ಕೆ ವರ್ಣರಂಜಿತ ಚಾಲನೆ
ಮೈಸೂರು : ಮಾನಸ ಗಂಗೋತ್ರಿಯ ಕುವೆಂಪು ಬಯಲು ರಂಗಮಂದಿರದಲ್ಲಿ 2026ರ ನಾಡಹಬ್ಬ ಮೈಸೂರು ದಸರಾಗೆ ಮುನ್ನಡಿ ಬರೆಯುವ ಯುವ ಸಂಭ್ರಮಕ್ಕೆ ಸೋಮವಾರ ಸಂಜೆ ವರ್ಣರಂಜಿತ ಚಾಲನೆ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗಾಯಕ ವಿಜಯ್ ಪ್ರಕಾಶ್, ನಟಿ ಸಪ್ತಮಿ ಗೌಡ ಅವರು ಡೊಳ್ಳು, ಕಂಸಾಳೆ ನುಡಿಸುವ ಮೂಲಕ ಯುವ ಸಂಭ್ರಮ ಉದ್ಘಾಟಿಸಿದರು. ನೆರೆದಿದ್ದ ಸಾವಿರಾರು ಯುವಕ ಯುವತಿಯರು ಜೈಕಾರ ಮೊಳಗಿಸಿ ಸಂಭ್ರಮ ವ್ಯಕ್ತಪಡಿಸಿದರು.
ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ʼದಸರಾ ನಾಡಿನ ಬಹು ದೊಡ್ಡ ಹಬ್ಬ. ನಮ್ಮ ಸಂಸ್ಕೃತಿ, ಪರಂಪರೆ ಪರಿಚಯಿಸುತ್ತೇವೆʼ ಎಂದರು.
ಶಾಸಕರಾದ ಜಿ.ಟಿ ದೇವೇಗೌಡ, ಕೆ. ಹರೀಶ್ ಗೌಡ, ತನ್ವಿರ್ ಸೇಠ್, ಅನಿಲ್ ಚಿಕ್ಕಮಾದು, ನಿಗಮ ಮಂಡಳಿ ಅಧ್ಯಕ್ಷರಾದ ಅಯೂಬ್ ಖಾನ್, ರಂಗಸ್ವಾಮಿ, ಗಣೇಶ್, ರಾಮಪ್ಪ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಮುಂತಾದವರಿದ್ದರು.
ಸಭಾ ಕಾರ್ಯಕ್ರಮದ ನಂತರ 10ಕ್ಕೂ ಹೆಚ್ಚು ಕಾಲೇಜುಗಳ ತಂಡಗಳು ಕಾರ್ಯಕ್ರಮ ನೀಡಿದರು.