ಇಸ್ರೇಲ್ ರಾಜತಾಂತ್ರಿಕರ ಭೇಟಿ; ಸಾಮಾಜಿಕ ಜಾಲತಾಣಗಳಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ತೀವ್ರ ಟೀಕೆ
ಬೆಂಗಳೂರು : ದಕ್ಷಿಣ ಭಾರತದಲ್ಲಿ ಇಸ್ರೇಲ್ ಡೆಪ್ಯೂಟಿ ಕಾನ್ಸಲ್ ಜನರಲ್ ಇನ್ಬಲ್ ಸ್ಟೋನ್ ಅವರು ಜೂ.5ರಂದು ನಡೆಯಲಿರುವ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಮಗೆ ಆಹ್ವಾನ ನೀಡಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಕಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಜನರನ್ನು ಕೆರಳಿಸಿದೆ.
ಮಂಗಳವಾರ ವಿಧಾನಸೌಧದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಇನ್ಬಲ್ ಸ್ಟೋನ್, ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು. ಈ ಬಗ್ಗೆ ಇನ್ಬಲ್ ಸ್ಟೋನ್ ಅವರೊಂದಿಗೆ ಭೇಟಿಯ ಭಾವಚಿತ್ರವನ್ನು ಹಾಕಿಕೊಂಡು, ಕರ್ನಾಟಕ ಮತ್ತು ಇಸ್ರೇಲ್ ನಡುವಿನ ಸಂಬಂಧಗಳನ್ನು, ವಿಶೇಷವಾಗಿ ನಾವೀನ್ಯತೆ, ತಂತ್ರಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಬಲಪಡಿಸುವ ಬಯಕೆಯನ್ನು ಶಿವಕುಮಾರ್ ವ್ಯಕ್ತಪಡಿಸಿದ್ದಾರೆ.
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣದ ಬಗ್ಗೆ ಜಾಗತಿಕವಾಗಿ ಟೀಕೆಗಳನ್ನು ಎದುರಿಸುತ್ತಿರುವಾಗ, ನೀವು ಅವರೊಂದಿಗೆ ಸುಸ್ಥಿರ ಅಭಿವೃದ್ಧಿಯನ್ನು ಬಲಪಡಿಸುವ ಬಯಕೆ ವ್ಯಕ್ತಪಡಿಸಲು ಇದು ಸೂಕ್ತ ಸಮಯವಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಲವಾರು ಅಂತರ್‌ರಾಷ್ಟ್ರೀಯ ವೀಕ್ಷಕರು ಇಸ್ರೇಲ್‍ನ ಕಾರ್ಯಾಚರಣೆಯನ್ನು ನರಮೇಧ, ಹತ್ಯಾಕಾಂಡ, ಮಾನವೀಯ ಬಿಕ್ಕಟ್ಟು ಎಂದು ಕರೆದಿರುವ ನಡುವೆಯೂ ಇಸ್ರೇಲ್‍ನೊಂದಿಗೆ ರಾಜತಾಂತ್ರಿಕವಾಗಿ ಸಂಬಂಧಗಳನ್ನು ಮುಂದುವರೆಸಿರುವ ಬಗ್ಗೆ ಕಾಂಗ್ರೆಸ್ ನಾಯಕರ ನೈತಿಕತೆಯನ್ನು ಅನೇಕರು ಪ್ರಶ್ನಿಸಿದ್ದಾರೆ.
ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ನೀವು ಹಾಜರಾದರೆ, ಸ್ವತಂತ್ರ ಫೆಲೆಸ್ತೀನ್ ಪರವಾಗಿ ಮಾತನಾಡಲು ಮತ್ತು ಗಾಝಾದಲ್ಲಿ ನಡೆಯುತ್ತಿರುವ ನರಮೇಧ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತೀರಿ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ ಎಂದು ಒಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಕ್ಷಣದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಇಸ್ರೇಲ್‍ನ ಅಧಿಕಾರಿಯನ್ನು ಭೇಟಿಯಾಗುವುದನ್ನು ನೋಡುವುದು ತೀವ್ರ ನಿರಾಶಾದಾಯಕವಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು, ಗಾಝಾದಲ್ಲಿ ಇಸ್ರೇಲ್‍ನ ಕ್ರಮಗಳನ್ನು ಜಾಗತಿಕ ಮಾನವ ಹಕ್ಕುಗಳ ಧ್ವನಿಗಳು ನರಮೇಧ ಎಂದು ಕರೆಯುತ್ತಿರುವ ಸಮಯದಲ್ಲಿ, ಈ ಮೌನ ಅನುಮೋದನೆಯು ಅಪಾಯಕಾರಿ ಸಂದೇಶವನ್ನು ರವಾನಿಸುತ್ತದೆ. ಶಿವಕುಮಾರ್ ರಾಜಕೀಯ ದೃಷ್ಟಿಕೋನಕ್ಕಿಂತ ನ್ಯಾಯ ಮತ್ತು ಮಾನವೀಯತೆಗೆ ಆದ್ಯತೆ ನೀಡಬೇಕು ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಕಾಂಗ್ರೇಸ್ ಸರಕಾರವೇ,ನೀವು ಜಿಯೋನಿಸ್ಟ್ ಇಸ್ರೇಲನ್ನು ಬೆಂಬಲಿಸುವ ಫ್ಯಾಶಿಸ್ಟ್ ಬಿಜೆಪಿಗಿಂತ ಭಿನ್ನವಾಗಿದ್ದರೆ.ಇಸ್ರೇಲ್ ಸ್ವಾತಂತ್ರ್ಯ ದಿನದ ಆಹ್ವಾನ ತಿರಸ್ಕರಿಸಿ. ಸ್ವತಂತ್ರ ಪ್ಯಾಲೇಸ್ತಿನನ್ನು ಬೆಂಬಲಿಸಿ ಎಂದು ಚಿಂತಕ ಶಿವಸುಂದರ್ ಅವರು ಆಗ್ರಹಿಸಿದ್ದಾರೆ.
ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಲಿ ಅಥವಾ ಫೆಲೆಸ್ತೀನ್ ಪರವಾಗಿ ಸದಾ ಬೆಂಬಲ ವ್ಯಕ್ತಪಡಿಸಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷವಾಗಲಿ ಯಾವುದೇ ಪ್ರತಿಕ್ರಿಯೆಯನ್ನು ಈ ವರೆಗೆ ನೀಡಿಲ್ಲ.