ಬೆಂಗಳೂರು : ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಅವರ ಆರೋಗ್ಯದಲ್ಲಿ ದಿಢೀರ್ ಏರು-ಪೇರು ಕಂಡುಬಂದಿದ್ದು, ಆನಂತರ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು.

ಮಂಗಳವಾರ ಬೆಳಗ್ಗೆ ನಗರದಲ್ಲಿ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಯೋಜಿಸಿದ್ದ ಇಂಡಿಯಾ ಇಂಟರ್‌ ನ್ಯಾಷನಲ್ ಚಾಲೆಂಜ್-2026 ಬ್ಯಾಡ್ಮಿಂಟನ್ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಡಾ.ಜಿ.ಪರಮೇಶ್ವರ್ ಅವರಿಗೆ ಹೃದಯ ಬಡಿತ ಹೆಚ್ಚು ಕಂಡ ಬಂದಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಅವರು ಅಗತ್ಯವಿರುವ ಎಲ್ಲ ತಪಾಸಣೆಗಳಿಗೆ ಒಳಗಾಗಿ ವಿಶ್ರಾಂತಿ ಪಡೆದರು.

ಉಪಮುಖ್ಯಮಂತ್ರಿ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿದ ತಕ್ಷಣವೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಚಿಕಿತ್ಸೆಯ ಮಾಹಿತಿ ಪಡೆದುಕೊಂಡರು.

ಭೇಟಿ ಬಳಿಕ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್, ಪರಮೇಶ್ವರ್ ಅವರ ಆರೋಗ್ಯ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ಖುದ್ದು ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ಯಾರೂ ಆತಂಕ ಪಡುವ ಅಗತ್ಯವಿಲ್ಲ. ದೇವರ ದಯೆಯಿಂದ ನನ್ನ ಆರೋಗ್ಯವೀಗ ಸ್ಥಿರವಾಗಿದೆ. ಆಸ್ಪತ್ರೆಯಲ್ಲಿರುವ ಇತರೆ ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನನ್ನನ್ನು ಭೇಟಿ ಮಾಡಲು ದಯವಿಟ್ಟು ಆಸ್ಪತ್ರೆ ಬಳಿ ಬರಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor