ಸಾಂದರ್ಭಿಕ ಚಿತ್ರ | PC : Image by magnific

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ 4ನೆ ಹಂತದಲ್ಲಿ ಏಳು ಜಿಲ್ಲೆಗಳ 11 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರಕಾರ ಘೋಷಿಸಿದ್ದು, ಈ ಮೂಲಕ ಬರಪೀಡಿತ ತಾಲೂಕುಗಳ ಸಂಖ್ಯೆ 188ಕ್ಕೆ ಏರಿಕೆಯಾಗಿದೆ.

ಮೊದಲ ಹಂತದಲ್ಲಿ 101 ಹಾಗೂ ಎರಡನೆ ಹಂತದಲ್ಲಿ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಮೂರನೆ ಹಂತದಲ್ಲಿ 53 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ಆದೇಶ ಹೊರಡಿಸಲಾಗಿತ್ತು. ಆ ಪೈಕಿ 51 ತಾಲೂಕುಗಳು ತೀವ್ರ ಹಾಗೂ 2 ತಾಲೂಕುಗಳು ಸಾಧಾರಣ ಬರಪೀಡಿತವಾಗಿವೆ.

ಇದರ ಜೊತೆಗೆ, ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಸ್ಥಿತಿ ಸೇರಿದಂತೆ ವಿವಿಧ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ನಾಲ್ಕನೆ ಹಂತದಲ್ಲಿ 7 ಜಿಲ್ಲೆಗಳ 11 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಇದರೊಂದಿಗೆ ಬರಪೀಡಿತ ಎಂದು ಘೋಷಿಸಲಾದ ತಾಲೂಕುಗಳ ಸಂಖ್ಯೆ 188ಕ್ಕೆ ಏರಿಕೆಯಾಗಿದೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಬರ ಹಿನ್ನೆಲೆ ವೈಜ್ಞಾನಿಕ ಪರಿಶೀಲನೆ, ಪಾರದರ್ಶಕ ಸಮೀಕ್ಷೆ ಮತ್ತು ನಿಖರ ವರದಿಯ ಆಧಾರದಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮುಂಗಾರು ಹಂಗಾಮು ಮುಗಿಯುವವರೆಗೂ ಬರ ಪರಿಸ್ಥಿತಿಯ ಮೇಲ್ವಿಚಾರಣೆ ಮುಂದುವರಿಯಲಿದ್ದು, ಅಗತ್ಯ ಕಂಡುಬಂದಲ್ಲಿ ಮುಂದಿನ ಹಂತದಲ್ಲಿಯೂ ಹೆಚ್ಚುವರಿ ತಾಲೂಕುಗಳನ್ನು ಗ್ರೌಂಡ್ ಟ್ರೂಥಿಂಗ್‍ಗೆ ಸೇರಿಸಲಾಗುವುದು. ಬೆಳೆ ಹಾನಿಯ ನೈಜ ಚಿತ್ರಣ ಆಧರಿಸಿ, ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನಿಯಮಾನುಸಾರ ಅಗತ್ಯ ನೆರವು ತಲುಪಿಸಲು ನಾವು ಬದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

 ‘ಬರ ಪಟ್ಟಿಗೆ ಸೇರಿದ ತಾಲೂಕುಗಳು’: ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ, ಜಗಳೂರು, ಪಿರಿಯಾಪಟ್ಟಣ, ಕುಷ್ಟಗಿ, ತಾಳಿಕೋಟೆ, ಗದಗ, ಮುಂಡರಗಿ, ರೋಣ, ಹಿರೇಕೆರೂರು ತಾಲೂಕುಗಳನ್ನು ಹೊಸದಾಗಿ ಬರ ಪಟ್ಟಿಗೆ ಸೇರಿಸಿ ಘೋಷಿಸಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor