ಬೆಂಗಳೂರು : ಪೆಟ್ರೋಲ್‍ನಲ್ಲಿ ಮಿತಿಮೀರಿದ ಎಥೆನಾಲ್ ಮಿಶ್ರಣ ಸಂಬಂಧ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿಗೆ ರಾಜ್ಯದ ಗ್ರಾಹಕ ವ್ಯವಹಾರಗಳ ಸಚಿವ ರಿಝ್ವಾನ್ ಅರ್ಷದ್ ಪತ್ರ ಬರೆದಿದ್ದಾರೆ.

ಈ ಪತ್ರದಲ್ಲಿ ಎಥೆನಾಲ್ ಮಿಶ್ರಣದ ಕುರಿತು ರಾಜ್ಯ ಸರಕಾರ ಪರಿಶೀಲನೆ ನಡೆಸಿದ ವರದಿ ಬಗ್ಗೆ ಉಲ್ಲೇಖಿಸಿದ್ದು, ಎಥೆನಾಲ್ ಮಿಶ್ರಣ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅತಿಯಾದ ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಹಾನಿ ಆಗುತ್ತಿದೆ. ವಾಹನಗಳ ಮೈಲೇಜ್ ಕುಸಿಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್‍ನಲ್ಲಿ ರಾಜ್ಯದ ವಿವಿಧ ಪೆಟ್ರೋಲ್ ಬಂಕ್‍ಗಳಿಂದ ಮಾದರಿ ಸಂಗ್ರಹಿಸಿ ಅವನ್ನು ಎನ್‍ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗಿದೆ. 14 ಮಾದರಿಗಳ ಪೈಕಿ 11 ಮಾದರಿಗಳು ಶೇ.20ಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಆಗಿರುವುದು ಪತ್ತೆಯಾಗಿದೆ. ಎಥೆನಾಲ್ ಪ್ರಮಾಣ ಒಂದೇ ಸಮನಾಗಿಲ್ಲದೆ ಶೇ.13.5ರಿಂದ 31.2ರವರೆಗೆ ಇದೆ ಎಂದು ಪತ್ರದಲ್ಲಿ ಸಚಿವ ರಿಝ್ವಾನ್ ವಿವರಿಸಿದ್ದಾರೆ.

ಪೆಟ್ರೋಲ್ ಬಂಕ್‍ಗಳಲ್ಲಿ ಎಥೆನಾಲ್ ಶೇಕಡಾವಾರು ಪ್ರಮಾಣ ಪ್ರದರ್ಶಿಸುವ ಜೊತೆಗೆ ಗ್ರಾಹಕರಿಗೆ ನೀಡುವ ಬಿಲ್‍ನಲ್ಲಿ ಎಥೆನಾಲ್ ಶೇಕಡಾವಾರು ನಮೂದಿಸಬೇಕು. ಎಥೆನಾಲ್ ಮಿಶ್ರಣದಿಂದ ವಾಹನ ಹಾನಿಗೊಳಗಾದರೆ ಪರಿಹಾರ ನೀಡಲು ಪ್ರತ್ಯೇಕ ನಿಧಿ ರಚಿಸಬೇಕು ಎಂದು ಪತ್ರದಲ್ಲಿ ರಿಝ್ವಾನ್ ಒತ್ತಾಯಿಸಿದ್ದಾರೆ.

ಶೇ.90ರಷ್ಟು ಪೆಟ್ರೋಲ್ ಬಂಕ್‍ಗಳ ನಳಿಕೆಗಳಲ್ಲಿ ವ್ಯತ್ಯಾಸ ಇರುವುದು ಪತ್ತೆಯಾಗಿದ್ದು, ಗ್ರಾಹಕರಿಗೆ ಕಡಿಮೆ ಇಂಧನ ಸಿಗುತ್ತಿರುವುದೂ ಸಹ ಸಾಬೀತಾಗಿದೆ ಎಂದು ಪತ್ರದಲ್ಲಿ ರಿಝ್ವಾನ್ ಅವರು ಕೇಂದ್ರ ಸಚಿವರ ಗಮನ ಸೆಳೆದಿದ್ದಾರೆ.

ಅಲ್ಲದೆ, ಪೆಟ್ರೋಲ್ ಡಿಸ್ಪೆನ್ಸರ್‍ಗಳ ಪರಿಶೀಲನೆ 12 ತಿಂಗಳಿಂದ 24 ತಿಂಗಳಿಗೆ ಹೆಚ್ಚಳ ಸಂಬಂಧ ಕೇಂದ್ರದ ಅಧಿಸೂಚನೆಗೆ ರಾಜ್ಯ ಸರಕಾರದ ವಿರೋಧವಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor