×
Ad

ಬೆಂಗಳೂರು-ಗ್ವಾಲಿಯರ್ ನಡುವೆ ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳ ಪರಿಚಯ

Update: 2025-06-26 22:23 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ಕರ್ನಾಟಕ ಮತ್ತು ಮಧ್ಯಪ್ರದೇಶದ ನಡುವೆ ನೇರ ರೈಲು ಸಂಪರ್ಕವನ್ನು ಹೆಚ್ಚಿಸುವ ಉದ್ದೇಶದಿಂದ, ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಮಧ್ಯಪ್ರದೇಶದ ಗ್ವಾಲಿಯರ್ ನಿಲ್ದಾಣಗಳ ನಡುವೆ ಹೊಸ ಸಾಪ್ತಾಹಿಕ ಎಕ್ಸ್‌ ಪ್ರೆಸ್ ರೈಲು ಸೇವೆಯನ್ನು ರೈಲ್ವೆ ಮಂಡಳಿ ಸಂಚರಿಸಲು ಘೋಷಿಸಿದೆ.

ಈ ಸೇವೆಯು ರೈಲು ಸಂಖ್ಯೆ 11085/11086 ಎಸ್‍ಎಂವಿಟಿ ಬೆಂಗಳೂರು–ಗ್ವಾಲಿಯರ್–ಎಸ್‍ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ ಪ್ರೆಸ್ ಆಗಿ ಕಾರ್ಯನಿರ್ವಹಿಸಲಿದೆ. ರೈಲು ಸಂಖ್ಯೆ 11085 ಎಸ್‍ಎಂವಿಟಿ ಬೆಂಗಳೂರು–ಗ್ವಾಲಿಯರ್ ಸಾಪ್ತಾಹಿಕ ಎಕ್ಸ್‌ ಪ್ರೆಸ್ ಜೂ.29ರಿಂದ ಪ್ರತಿ ರವಿವಾರ ಮಧ್ಯಾಹ್ನ 3:50ಕ್ಕೆ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‍ನಿಂದ ಹೊರಟು ಮಂಗಳವಾರ ಬೆಳಗ್ಗೆ 10:25ಕ್ಕೆ ಗ್ವಾಲಿಯರ್ ಜಂಕ್ಷನ್‍ಗೆ ತಲುಪಲಿದೆ.

ಮರಳಿ, ರೈಲು ಸಂಖ್ಯೆ 11086 ಗ್ವಾಲಿಯರ್–ಎಸ್‍ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ ಪ್ರೆಸ್ ಜು.4 ರಿಂದ ಪ್ರತಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಗ್ವಾಲಿಯರ್‍ನಿಂದ ಹೊರಟು ರವಿವಾರ ಬೆಳಗ್ಗೆ 07.35ಕ್ಕೆ ಎಸ್‍ಎಂವಿಟಿ ಬೆಂಗಳೂರಿಗೆ ಆಗಮಿಸಲಿದೆ.

ಈ ರೈಲು ಸೇವೆಯು 22 ಆಧುನಿಕ ಎಲ್‍ಎಚ್‍ಬಿ ಬೋಗಿಗಳನ್ನು ಒಳಗೊಂಡಿರಲಿದೆ. ಇವುಗಳಲ್ಲಿ 2 ಎಸಿ ಟು ಟೈರ್, 4 ಎಸಿ ತ್ರೀ ಟೈರ್, 3 ಎಸಿ ತ್ರೀ ಟೈರ್ ಎಕಾನಮಿ, 7 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್, 1 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಅಂಗವಿಕಲ ಸ್ನೇಹಿ ಕಂಪಾರ್ಟ್‍ಮೆಂಟ್, ಮತ್ತು 1 ಲಗೇಜ್, ಜನರೇಟರ್ ಮತ್ತು ಬ್ರೇಕ್ ವ್ಯಾನ್ ಕೋಚ್ ಸೇರಿವೆ.

ಈ ರೈಲು ಎರಡೂ ಮಾರ್ಗಮಧ್ಯದಲ್ಲಿ, ಯಲಹಂಕ ಜಂಕ್ಷನ್, ಹಿಂದೂಪುರ, ಧರ್ಮಾವರಂ ಜಂಕ್ಷನ್, ಅನಂತಪುರ, ಧೋನೆ ಜಂಕ್ಷನ್, ಕರ್ನೂಲ್ ಸಿಟಿ, ಗದ್ವಾಲ್ ಜಂಕ್ಷನ್, ಮಹಬೂಬ್‍ನಗರ, ಕಾಚೆಗುಡ, ಕಾಜಿಪೇಟ್ ಜಂಕ್ಷನ್, ಬೆಲ್ಲಂಪಳ್ಳಿ, ಸಿರ್ಪುರ್ ಕಾಘಜ್‍ನಗರ, ಬಲ್ಹರ್ಷಾ, ಚಂದ್ರಪುರ್, ಸೇವಾಗ್ರಾಮ್, ನಾಗ್ಪುರ, ಬೇತುಲ್, ಭೋಪಾಲ್ ಜಂಕ್ಷನ್, ವಿದಿಶಾ, ಬೀನಾ ಜಂಕ್ಷನ್, ಅಶೋಕ್ ನಗರ, ಗುಣ, ಮತ್ತು ಶಿವಪುರಿ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ.

ಈ ಹೊಸ ರೈಲು ಸೇವೆಯು ದಕ್ಷಿಣ ಮತ್ತು ಮಧ್ಯ ಭಾರತದ ನಡುವೆ ಪ್ರಯಾಣದ ಅನುಕೂಲತೆಯನ್ನು ಗಣನೀಯವಾಗಿ ಸುಧಾರಿಸುವ ನಿರೀಕ್ಷೆಯಿದೆ ಮತ್ತು ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುತ್ತದೆ. ವಿವರವಾದ ಆಗಮನ ಮತ್ತು ನಿರ್ಗಮನದ ಸಮಯಗಳು, ದರ, ಸೀಟುಗಳ ಲಭ್ಯತೆ ಮತ್ತು ಇತರ ಬುಕಿಂಗ್-ಸಂಬಂಧಿತ ಮಾಹಿತಿಗಾಗಿ, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್‍ಸೈಟ್ www.irctc.co.in ಗೆ ಭೇಟಿ ನೀಡಬಹುದು ಅಥವಾ ಎನ್‍ಟಿಇಎಸ್/ಮೊಬೈಲ್ ಅಪ್ಲಿಕೇಶನ್‍ಗಳನ್ನು ಬಳಸಬಹುದು ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News