Budget Session 2026 | ಮಲೆನಾಡು-ಕರಾವಳಿ ಭಾಗದಲ್ಲಿ ಬಂದೂಕು ಪರವಾನಗೆ ನೀಡಲು ಒಕ್ಕೊರಲ ಆಗ್ರಹ
ಅಶೋಕ್ ರೈ/ಅರಗ ಜ್ಞಾನೇಂದ್ರ
ಬೆಂಗಳೂರು : ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಬಂದೂಕು ಪರವಾನಗೆ ನವೀಕರಣಕ್ಕೆ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಒಕ್ಕೊರಲ ಆಗ್ರಹ ಮಾಡಿದರು.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅಶೋಕ್ ರೈ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದೂಕುಗಳ ಪರವಾನಿಗೆ ನವೀಕರಣಕ್ಕೆ ಪೊಲೀಸ್ ಅಧಿಕಾರಿಗಳು ತಕರಾರು ತೆಗೆಯುತ್ತಿದ್ದಾರೆ. ಕಾಡುಪ್ರಾಣಿಗಳು ಬೆಳೆನಾಶ ಮಾಡಿ, ಅದಕ್ಕೆ ಅರಣ್ಯ ಅಧಿಕಾರಿಗಳು ಪರಿಹಾರ ನೀಡಿದ್ದರೆ ಮಾತ್ರ ಅಂತಹ ಪ್ರಕರಣಗಳನ್ನು ಬಂದೂಕು ಪರವಾನಗಿ ನವೀಕರಣಕ್ಕೆ ಪರಿಗಣಿಸುವುದಾಗಿ ಹೇಳುತ್ತಿದ್ದಾರೆ. ಇದು ಸರಿಯಲ್ಲ, ಮಂಗಗಳು ಕೃತಕ ಬಂದೂಕಿಗೆ ಎದುರುತ್ತಿಲ್ಲ. ಕಾಡು ಹಂದಿ ಬೆಳೆ ನಾಶ ಮಾಡುತ್ತಿವೆ. ಆನೆ ದಾಳಿಯಿಂದ ಮೂರು ಜನ ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಿದರು.
ಇದಕ್ಕೂ ಮುನ್ನ ಮತ್ತೊಂದು ಪ್ರಶ್ನೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಈ ಮೊದಲು ದಾರಿ ತಿಳಿಯದೆ ನಮ್ಮ ಭಾಗದಲ್ಲಿ ಕಳ್ಳತನಕ್ಕೆ ಬರಲು ಹೆದುರುತ್ತಿದ್ದರು. ಇತ್ತೀಚೆಗೆ ಬಂದೂಕುಗಳ ಪರವಾನಗಿಗಳ ನವೀಕರಣಕ್ಕೆ ಕಡಿವಾಣ ಹಾಕಲಾಗಿದೆ. ಇದರಿಂದಾಗಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಹೇಳಿದರು.
ಸದಸ್ಯರಾದ ಚನ್ನಬಸಪ್ಪ, ಹರೀಶ್ ಪೂಂಜಾ, ಭಾಗೀರಥಿ ಮುರುಳ್ಯಾ, ಸಿಮೆಂಟ್ ಮಂಜು ಸೇರಿದಂತೆ ಹಲವಾರು ಶಾಸಕರು ಬಂದೂಕುಗಳ ಪರವಾನಗಿಯ ನವೀಕರಣಕ್ಕೆ ಬಗ್ಗೆ ಒತ್ತಡ ಹೇರಿದರು.
ಬಳಿಕ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಿಯಮ ಬದ್ಧವಾಗಿದ್ದರೆ ಅಂತಹ ಬಂದೂಕು ಪರವಾನಗಿ ಅರ್ಜಿಗಳಿಗೆ ಪೊಲೀಸರು ನಿರಪೇಕ್ಷಣಾ ಪತ್ರ ನೀಡುತ್ತಾರೆ. ಪರವಾನಗಿಯನ್ನು ನವೀಕರಣ ಮಾಡಿಕೊಡುವುದು ಜಿಲ್ಲಾಧಿಕಾರಿಗಳ ಜವಾಬ್ದಾರಿ ಎಂದು ಸ್ಪಷ್ಟನೆ ನೀಡಿದರು.
ಕ್ರಿಮಿನಲ್ ಹಿನ್ನೆಲೆ ಇದ್ದವರಿಗೆ, ಜಮೀನು ಬಿಟ್ಟು ಬೇರೆ ಕಡೆ ವಾಸ ಇರುವವರಿಗೆ, ವಯಸ್ಸಾದವರಿಗೆ ಮತ್ತು ಮಾನಸಿಕ ಸೀಮಿತ ಇಲ್ಲದವರಿಗೆ ಬಂದೂಕು ಪರವಾನಿಗೆ ನವೀಕರಣ ಮಾಡಿಕೊಡುವುದಿಲ್ಲ. ಉಳಿದಂತೆ ಯಾವುದೇ ತಕರಾರುಗಳು ಇಲ್ಲ. ಒಂದು ವೇಳೆ ನಿಯಮದ ಅನುಸಾರವಿದ್ದು, ಎಲ್ಲಿಯಾದರೂ ಅರ್ಜಿಗಳು ತಿರಸ್ಕಾರವಾಗಿದ್ದರೆ ಅಂತಹ ಪ್ರಕರಣಗಳನ್ನು ಪುನರ್ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಕ್ರಮ: ಕುಂದಾಪುರದಲ್ಲಿರುವ ಅಗ್ನಿಶಾಮಕ ಠಾಣೆಯನ್ನು ನಗರ ಪ್ರದೇಶದ ವ್ಯಾಪ್ತಿಯೊಳಗೆ ಆರಂಭಿಸಲು ನಿವೇಶನ ಲಭ್ಯತೆ ಆಧರಿಸಿ ಕ್ರಮ ಕೈಗೊಳ್ಳುವುದಾಗಿ ಸದಸ್ಯ ಕಿರಣ್ ಕುಮಾರ್ ಕೊಡ್ಗಿ ಅವರ ಪ್ರಶ್ನೆಗೆ ಸಚಿವರು ಇದೇ ವೇಳೆ ಉತ್ತರಿಸಿದರು.
ಮಲೆನಾಡಿನಲ್ಲಿ ಚಡ್ಡಿ ಗ್ಯಾಂಗ್ ಇದೆ: ಈ ಚರ್ಚೆ ವೇಳೆ ಬಿಜೆಪಿ ಶಾಸಕ ಚನ್ನಬಸಪ್ಪ ಮಧ್ಯಪ್ರವೇಶಿಸಿ, ‘ಮಲೆನಾಡಿನಲ್ಲಿ ಚಡ್ಡಿ ಗ್ಯಾಂಗ್ ಇದೆ. ಆ ಗ್ಯಾಂಗ್ ಬಹಳಷ್ಟು ಆತಂಕಕಾರಿ ಇದೆ’ ಎಂದು ಗಮನ ಸೆಳೆದ ಪ್ರಸಂಗ ನಡೆಯಿತು.