ಸಾಂದರ್ಭಿಕ ಚಿತ್ರ | PC : Image by magnific

ಬೆಂಗಳೂರು : ರಾಜ್ಯದಲ್ಲಿನ ಬರಪೀಡಿತ ತಾಲೂಕುಗಳ ರೈತರ ನೆರವಿಗೆ ಧಾವಿಸಿರುವ ‘ಬ್ಯಾಂಕರ್‌ಗಳ ರಾಜ್ಯ ಮಟ್ಟದ ಸಮಿತಿ’(ಎಸ್‍ಎಲ್‍ಬಿಸಿ), ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಮರುಪಾವತಿಗೆ ಸಂಬಂಧಿಸಿದಂತೆ ವಿಶೇಷ ಪರಿಹಾರ ಯೋಜನೆಯನ್ನು ಪ್ರಕಟಿಸಿದೆ.

ಬುಧವಾರ ನಗರದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಮಾಡಲಾಗಿದ್ದು, ಸಾಲ ಮರುಪಾವತಿಗೆ 12 ತಿಂಗಳ ಕಾಲಾವಕಾಶ (ಮೊರಟೋರಿಯಂ)ನೀಡುವುದರ ಜೊತೆಗೆ, ಒಟ್ಟು ಸಾಲ ಮರುಪಾವತಿಯ ಅವಧಿಯನ್ನು ವಿಸ್ತರಿಸಿ ರೈತರಿಗೆ ನೆರವಾಗಲು ನಿರ್ಧರಿಸಲಾಗಿದೆ.

ಬರಪೀಡಿತ ತಾಲೂಕುಗಳ ವರ್ಗೀಕರಣ: ರಾಜ್ಯದ 24 ಜಿಲ್ಲೆಗಳ ಒಟ್ಟು 101 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಸರಕಾರ ಘೋಷಿಸಿದೆ. ಆ ಪೈಕಿ 89 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 12 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಲಾಗಿದೆ.

ಮರುಪಾವತಿ ಅವಧಿ ವಿಸ್ತರಣೆ: ಕಿಸಾನ್ ಕ್ರೆಡಿಟ್ ಕಾರ್ಡ್ (KCC), ಕೃಷಿ ಸಾಲಗಳು, ಹೈನುಗಾರಿಕೆ, ರೇಷ್ಮೆ ಹಾಗೂ ಮೀನುಗಾರಿಕೆ ಸೇರಿದಂತೆ ಇತರ ಕೃಷಿ ಸಂಬಂಧಿತ ಸಾಲಗಳಿಗೆ 12ತಿಂಗಳ ಮೊರಟೋರಿಯಂ ನೀಡಲಾಗುತ್ತದೆ. ಸಾಧಾರಣ ಬರಪೀಡಿತ ತಾಲೂಕುಗಳಲ್ಲಿ ಸಾಲ ಮರುಪಾವತಿ ಅವಧಿಯನ್ನು 36 ತಿಂಗಳಿಗೆ (3 ವರ್ಷ) ಹಾಗೂ ತೀವ್ರ ಬರಪೀಡಿತ ತಾಲೂಕುಗಳಲ್ಲಿ 60 ತಿಂಗಳಿಗೆ (5 ವರ್ಷ) ವಿಸ್ತರಿಸಲಾಗಿದೆ.

ಹೊಸ ಸಾಲ ಸೌಲಭ್ಯ: ಕೇವಲ ಹಳೆಯ ಸಾಲ ಮರುಪಾವತಿ ಮುಂದೂಡುವುದು ಮಾತ್ರವಲ್ಲದೆ, ರೈತರ ತುರ್ತು ಅಗತ್ಯಕ್ಕೆ ಅನುಗುಣವಾಗಿ ಬ್ಯಾಂಕುಗಳು ತಮ್ಮ ನಿಯಮಾವಳಿಗಳ ಅನ್ವಯ ರೈತರಿಗೆ ಹೊಸ ಸಾಲಗಳನ್ನು ವಿತರಿಸಲಿವೆ.

ಸ್ವಯಂಚಾಲಿತ ಅನ್ವಯ: ಸರಕಾರವು ಮುಂದೆ ಮತ್ತೆ ಯಾವುದೇ ಹೊಸ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದರೆ, ಈ ಪರಿಹಾರದ ಚೌಕಟ್ಟು ಪ್ರತ್ಯೇಕ ಎಸ್‍ಎಲ್‍ಬಿಸಿ ಸಭೆಯ ಅಗತ್ಯವಿಲ್ಲದೇ ಸ್ವಯಂಚಾಲಿತವಾಗಿ ಅನ್ವಯವಾಗಲಿದೆ. ಪರಿಹಾರ ಯೋಜನೆಯನ್ನು 2026ರ ಅಕ್ಟೋಬರ್ 11ರೊಳಗೆ (ಬರ ಘೋಷಣೆಯಾದ 45 ದಿನಗಳ ಒಳಗೆ) ಜಾರಿಗೆ ತರಲಾಗುತ್ತದೆ.

ಸಂಪೂರ್ಣ ಜಾರಿಯ ದಿನಾಂಕ: ಪರಿಹಾರದ ಸಂಪೂರ್ಣ ಪ್ರಕ್ರಿಯೆಯನ್ನು 2027ರ ಜನವರಿ 9 ರೊಳಗೆ (135 ದಿನಗಳ ಒಳಗೆ) ಪೂರ್ಣಗೊಳಿಸಲು ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಕೆನರಾ ಬ್ಯಾಂಕ್ (ಎಸ್‍ಎಲ್‍ಬಿಸಿ)ಸಭೆಯ ಅಂತಿಮ ನಡಾವಳಿಗಳನ್ನು 2026ರ ಸೆಪ್ಟೆಂಬರ್ 26 ರೊಳಗೆ ಸಂಬಂಧಪಟ್ಟ ಪೋರ್ಟಲ್‍ಗಳಲ್ಲಿ ಅಪ್‍ಲೋಡ್ ಮಾಡಲಿದೆ.

ರೈತರಿಗೆ ನೇರ ಜಾಗೃತಿ: ಜಿಲ್ಲಾಧಿಕಾರಿಗಳು, ಸಿಇಒಗಳು ಮತ್ತು ಜಿಲ್ಲಾ ಪ್ರಮುಖ ಬ್ಯಾಂಕ್ ವ್ಯವಸ್ಥಾಪಕರ ಜೊತೆಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ದುರಂತ ನಿರ್ವಹಣೆ ಇಲಾಖೆಗಳ ಕಾರ್ಯದರ್ಶಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ರೈತರಿಗೆ ಯೋಜನೆಗಳ ಮಾಹಿತಿ ತಲುಪಿಸಲಿದ್ದಾರೆ.

ಸಾಲ ಸೌಲಭ್ಯ: ಸಹಕಾರ ಬ್ಯಾಂಕುಗಳ ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ನಬಾರ್ಡ್ ಹಾಗೂ ರಾಜ್ಯ ಸರಕಾರದ ಹಂತದಲ್ಲಿ ಚರ್ಚಿಸಿ ಶೀಘ್ರದಲ್ಲೇ ಸೂಕ್ತ ಪರಿಹಾರ ರೂಪಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದ್ದಾರೆ.

ಬಲವಂತದ ವಸೂಲಾತಿಗೆ ನಿಷೇಧ: ‘ಈ ವರ್ಷ ರೈತರಿಂದ ಯಾವುದೇ ರೀತಿಯ ಬಲವಂತದ ಸಾಲ ವಸೂಲಾತಿ ಮಾಡದಂತೆ ಕಟ್ಟುನಿಟ್ಟಿನ ‘ಝೀರೋ ಟಾಲರೆನ್ಸ್' ನೀತಿಯನ್ನು ಜಾರಿಗೆ ತರಲಾಗಿದೆ. ರೈತರಿಂದ ಬರುವ ದೂರುಗಳಿಗೆ ಜಿಲ್ಲಾಡಳಿತ ತಕ್ಷಣವೇ ಸ್ಪಂದಿಸಬೇಕು ಮತ್ತು ಯಾವುದೇ ವಸೂಲಾತಿ ಪ್ರಕ್ರಿಯೆಗೂ ಮುನ್ನ ಬ್ಯಾಂಕುಗಳನ್ನು ಸಂಪರ್ಕಿಸಬೇಕು’ ಎಂದು ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor