Hassan | ಜಾನುವಾರುಗಳ ಮೈತೊಳೆಯಲು ಕೆರೆಗೆ ಇಳಿದಿದ್ದ ಇಬ್ಬರು ನೀರುಪಾಲು
ಹಾಸನ : ಜಾನುವಾರುಗಳಿಗೆ ಮೈತೊಳೆಯಲು ಕೆರೆಗೆ ಇಳಿದಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹೊಳೆನರಸೀಪುರ ತಾಲೂಕಿನ ಬಂಡಿಶೆಟ್ಟಿಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಮೃತರನ್ನು ಗ್ರಾಮದ ನಿವಾಸಿಗಳಾದ ಕೆಂಗೇಗೌಡ (60) ಹಾಗೂ ಕುಮಾರ (30) ಎಂದು ಗುರುತಿಸಲಾಗಿದೆ. ಜಾನುವಾರುಗಳನ್ನು ತೊಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮುಳುಗಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದರು. ಮೃತದೇಹಗಳನ್ನು ಹೊರತೆಗೆಯಲು ಕಾರ್ಯಾಚರಣೆ ಮುಂದುವರಿದಿದೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.