ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿ ಬಳಕೆಯಾಗಲಿ : ಕೆ.ಎಂ.ಶಿವಲಿಂಗೇಗೌಡ
"ಗೋವಾದಿಂದ ಬರುತ್ತಿರುವ ಅಕ್ರಮ ಮದ್ಯಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕಬೇಕು"
ಬೆಂಗಳೂರು : ಸಿಎಸ್‌ಆರ್ ನಿಧಿಯನ್ನು ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಶಾಲಾ-ಕಾಲೇಜು, ಆಸ್ಪತ್ರೆ, ವೈದ್ಯಕೀಯ ಉಪಕರಣ ಖರೀದಿಗೆ ಬಳಕೆ ಮಾಡಬೇಕು. ಇದರಿಂದ ಸಿಎಸ್‌ಆರ್ ನಿಧಿ ಸಮರ್ಪಕವಾಗಿ ಬಳಕೆಯಾಗಲು ಸಾಧ್ಯ ಎಂದು ಅಬಕಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಸಲಹೆ ನೀಡಿದರು.
ಹಾಸನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಿವಲಿಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಸಿಎಸ್‌ಆರ್ ನಿಧಿಯಡಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿ ಇಂದು ವಿಕಾಸಸೌಧದಲ್ಲಿ ಡಿಸ್ಟಿಲರಿ ಮಾಲೀಕರು ಹಾಗೂ ಅಧಿಕಾರಿಗಳ ವರ್ಗದ ಜೊತೆಗೆ ಮಹತ್ವದ ಸಭೆ ನಡೆಯಿತು.
ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮದ್ಯ ವಿತರಣೆಯಾಗಬೇಕು. ಅಕ್ರಮ ಮದ್ಯ ಉತ್ಪಾದನೆ ಮತ್ತು ಪೂರೈಕೆ ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮವಹಿಸಬೇಕು. ತೆರಿಗೆ ವಂಚಿಸುತ್ತಿರುವವರನ್ನು ಪತ್ತೆ ಹಚ್ಚಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಗೋವಾದಿಂದ ಎ ಕ್ಲಾಸ್ ಮದ್ಯ ತಂದು ಕರ್ನಾಟಕದಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.