ಸಿಹಿ ತಿಂಡಿ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: 5.99 ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥ ವಶ
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ರಾಜ್ಯದ ವಿವಿಧೆಡೆ ಸಿಹಿ ತಿಂಡಿ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದ್ದು, ಸುಮಾರು 5.99 ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದೆ.
ಸೋಮವಾರ ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಮೈಸೂರು, ದಕ್ಷಿಣ ಕನ್ನಡ, ಬೆಳಗಾವಿ, ಕಲಬುರಗಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸಿಹಿ ತಿಂಡಿ ತಯಾರಿಕಾ ಘಟಕಗಳಲ್ಲಿ ತಪಾಸಣೆ ನಡೆಸಲಾಗಿದೆ. ಒಟ್ಟು 16 ಸಿಹಿ ತಿಂಡಿ ತಯಾರಿಕಾ ಘಟಕಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಹಿ ತಿಂಡಿಗಳು, ಅಡುಗೆ ಎಣ್ಣೆ, ತಾಜಾ ಎಣ್ಣೆ, ಮೊಸರು, ಬೇಳೆ, ಕಡಲೆ, ಜಿಲೇಬಿ, ಕೋವಾ ಹಾಗೂ ಟೀ ಪೌಡರ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಅವಧಿ ಮೀರಿದ ಮೊಸರು ಪತ್ತೆ: ತಪಾಸಣೆ ವೇಳೆ 5 ಲೀಟರ್ ಅವಧಿ ಮೀರಿದ ನಂದಿನಿ ಮೊಸರು, ತಪ್ಪಾದ ಲೇಬಲಿಂಗ್ ಹೊಂದಿದ್ದ ಚಾಕೊಲೇಟ್ ಅಲಂಕಾರ ಪದಾರ್ಥಗಳ ದೊಡ್ಡ ಗಾತ್ರದ 13 ಹಾಗೂ ಸಣ್ಣ ಗಾತ್ರದ 6 ಪ್ಯಾಕೆಟ್‍ಗಳು, ಇದರೊಂದಿಗೆ 10 ಕೆ.ಜಿ. ಚಾಕೊಲೇಟ್ ಫ್ಲೇವರ್ ಮತ್ತು 5 ಕೆ.ಜಿ. ರಸಗುಲ್ಲಾ ವಶಪಡಿಸಿಕೊಳ್ಳಲಾಗಿದೆ.
ಲೇಬಲ್ ಇಲ್ಲದೆ ಮಾರಾಟ: ಬನಾನ ಚಿಪ್ಸ್, ಚಕ್ಲಿ ಮಸಾಲ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಸುಮಾರು 60 ಕೆ.ಜಿ. ಪ್ಯಾಕೆಟ್‍ಗಳಲ್ಲಿ ತಯಾರಕರ ಹೆಸರು ಮತ್ತು ವಿಳಾಸ, ಎಫ್‍ಎಸ್‍ಎಸ್‍ಎಐ ಪರವಾನಗಿ ಸಂಖ್ಯೆ ಸೇರಿದಂತೆ ಕಡ್ಡಾಯ ಲೇಬಲ್ ವಿವರಗಳನ್ನು ನಮೂದಿಸದಿರುವುದು ಪತ್ತೆಯಾಗಿದೆ. ಹೀಗಾಗಿ ಅವುಗಳನ್ನು ತಪ್ಪು ಬ್ರ್ಯಾಂಡಿಂಗ್ ಎಂದು ಪರಿಗಣಿಸಿ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ 367 ಕೆ.ಜಿ. ರೆಡಿ-ಟು-ಈಟ್-ಸೇವೊರೀಸ್, 4 ಕೆ.ಜಿ. ಕೊಕೊವಾ ಪೌಡರ್, 4.5 ಕೆ.ಜಿ. ಕ್ರಾಕಡ್ ಕೊಕೊಚಾ ಬೀನ್ಸ್, 6 ಕೆ.ಜಿ. ಖೋವಾ ಹಾಗೂ 196 ಕೆ.ಜಿ. ಸೋಂಪಾಪುಡಿ ಕೂಡ ಅಧಿಕಾರಿಗಳ ವಶವಾಗಿದೆ.
ವಶಪಡಿಸಿಕೊಂಡ ಆಹಾರ ಪದಾರ್ಥಗಳ ಕುರಿತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ಅದರಡಿ ರೂಪಿಸಲಾದ ನಿಯಮಾವಳಿಗಳ ಅನ್ವಯ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಪ್ರಕಟನೆಯಲ್ಲಿ ಮಾಹಿತಿ ನೀಡಿದೆ.