ನೇಪಾಳ ಪ್ರವಾಸಕ್ಕೆ ಹೋಗಿದ್ದ 13 ಮಂದಿ ಕನ್ನಡಿಗರು ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ: ಡಿ.ಕೆ.ಶಿವಕುಮಾರ್
ಬೆಂಗಳೂರು : ನೇಪಾಳ ಪ್ರವಾಸಕ್ಕೆ ಹೋಗಿದ್ದ 13 ಮಂದಿ ಕನ್ನಡಿಗರ ಸಂಪರ್ಕ ಇನ್ನೂ ಸಿಕ್ಕಿಲ್ಲ. ಪತ್ತೆ ಕಾರ್ಯ ಚುರುಕುಗೊಳಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ಸರಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಲ್ಲದೆ, ರಾಜ್ಯದ ಪ್ರತಿನಿಧಿಗಳನ್ನೂ ನೇಪಾಳಕ್ಕೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಸೋಮವಾರ ನಗರದ ನೆಹರು ತಾರಾಲಯದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.
ನಾಪತ್ತೆಯಾದವರಲ್ಲಿ ಒಂದು ತಂಡವನ್ನು ಗುರುತಿಸಲು ಇನ್ನೂ ಸಾಧ್ಯವಾಗಿಲ್ಲ. ಕೆಲವು ಕನ್ನಡಿಗರೊಂದಿಗೆ ನಾವು ಈಗಾಗಲೇ ಮಾತನಾಡಿದ್ದೇವೆ. ಕೆಲಸದ ನಿಮಿತ್ತ ರವಿವಾರ(ಆ.30) ಹೊಸದಿಲ್ಲಿಗೆ ಹೋಗಿದ್ದಾಗಲೂ, ಈ ವಿಷಯದ ಕುರಿತು ಸಂಬಂಧಪಟ್ಟವರ ಜೊತೆ ಚರ್ಚೆ ನಡೆಸಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಹುದ್ದೆಯಲ್ಲಿ ಭ್ರಷ್ಟಾ ಚಾರ ಆರೋಪ ಸಂಬಂಧ ಬೀದರ್ ನ ಬಾಲ್ಕಿ ಮೂಲದ ಮಧ್ಯವರ್ತಿ ಹಾಗೂ ರಾಜಕೀಯ ಮುಖಂಡನ ಬಂಧನವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಮಧ್ಯಪ್ರವೇಶಿಸುವುದಿಲ್ಲ. ಬಂಧನವಾಗಿರುವ ಬಗ್ಗೆ ಮಾಹಿತಿ ಪಡೆಯುತ್ತೇನೆ. ಕೆಪಿಎಸ್ಸಿಯಲ್ಲಿ ಯಾರನ್ನು ಯಾರು ನೇಮಕ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸಂಪೂರ್ಣ ತನಿಖಾ ವರದಿ ಬರುವವರೆಗೂ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಸಂಪರ್ಕಕ್ಕೆ ಸಿಗದ 26 ಮಂದಿ?
ನೇಪಾಳದಲ್ಲಿ ಸಂಭವಿಸಿರುವ ಪ್ರವಾಹ ಹಾಗೂ ಭೂಕುಸಿತದ ಬಳಿಕ ಕರ್ನಾಟಕದ 26 ಮಂದಿ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ. ನಾಪತ್ತೆಯಾದವರಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ನಿವಾಸಿಗಳು ಇದ್ದಾರೆ. ಇವರಲ್ಲಿ ಬಹುತೇಕರು ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ ಎಂದು ತಿಳಿದುಬಂದಿದೆ.