ಬೆಂಗಳೂರು : ಕೆಪಿಎಸ್‍ಸಿ ನೇಮಕಾತಿ ಅಕ್ರಮದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ನನ್ನ ಪಾತ್ರವಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಯಾವುದೇ ದಾಖಲೆ ಅಥವಾ ಪುರಾವೆಗಳಿಲ್ಲದೆ ತಮ್ಮ ಹಾಗೂ ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡುತ್ತಿರುವುದು ಅವರ ಸ್ಥಾನಕ್ಕೆ ತಕ್ಕ ನಡವಳಿಕೆಯಲ್ಲ ಎಂದು ಹೇಳಿದರು.

ನನ್ನ ವಿರುದ್ಧ ಆರೋಪ ಮಾಡುವವರು ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಲಿ. ಆರೋಪಕ್ಕೆ ಪುರಾವೆ ಇದ್ದರೆ ತನಿಖೆ ನಡೆಯಲಿ, ಸತ್ಯ ಹೊರಬರಲಿ. ಆದರೆ ದಾಖಲೆಗಳಿಲ್ಲದೆ ನಿರಂತರವಾಗಿ ಆರೋಪ ಮಾಡುವುದು ‘ಹಿಟ್ ಅಂಡ್ ರನ್ ರಾಜಕಾರಣವಾಗುತ್ತದೆ’. ಕೆಪಿಎಸ್‍ಸಿ ಪ್ರಕರಣದಲ್ಲಿ ತಮ್ಮ ಪಾತ್ರವಿದೆ ಎಂದು ಹೇಳುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಮ್ಮ ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ನನ್ನ ಪಾತ್ರ ಒಂದು ಸಣ್ಣ ಪ್ರಮಾಣದಲ್ಲಾದರೂ ಸಾಬೀತಾದರೆ ನಾನು ಮಾತ್ರವಲ್ಲ, ನನ್ನ ಕುಟುಂಬವೂ ರಾಜಕೀಯವಾಗಿ ಹಿಂದೆ ಸರಿಯುವ ಪರಿಸ್ಥಿತಿ ಬರಬಹುದು. ಆದರೆ ನನ್ನ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಮ್ಮ ವಿರುದ್ಧದ ಆರೋಪಗಳು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯಲು ಸಿದ್ಧರಿದ್ದಾರೆಯೇ? ಎಂದು ಅವರು ಪ್ರಶ್ನಿಸಿದರು.

ಕೆಪಿಎಸ್‍ಸಿ ಪ್ರಕ್ರಿಯೆಯಲ್ಲಿ ನನ್ನ ಪಾತ್ರವೇನು?: ಕೆಪಿಎಸ್‍ಸಿ ಪರೀಕ್ಷೆ ನಡೆಸುವುದು, ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸುವುದು ಹಾಗೂ ಅಂತಿಮ ಪಟ್ಟಿಯನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸುವುದು ಸೇರಿದಂತೆ ಪ್ರಕ್ರಿಯೆಯ ವಿವಿಧ ಹಂತಗಳಿಗೆ ನಿರ್ದಿಷ್ಟ ಸಂಸ್ಥೆಗಳು ಮತ್ತು ಅಧಿಕಾರಿಗಳು ಜವಾಬ್ದಾರರಾಗಿದ್ದಾರೆ. ಹೀಗಿರುವಾಗ ಕೆಪಿಎಸ್‍ಸಿಯಲ್ಲಿ ನಡೆದಿರುವುದೆಂದು ಹೇಳಲಾಗುತ್ತಿರುವ ಅಕ್ರಮಕ್ಕೆ ನೇರವಾಗಿ ಸಚಿವರನ್ನು ಹೊಣೆಗಾರರನ್ನಾಗಿ ಮಾಡುವ ಪ್ರಯತ್ನ ಏಕೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಕೆಲವು ಅಭ್ಯರ್ಥಿಗಳ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳು ಬಂದ ಹಿನ್ನೆಲೆಯಲ್ಲಿ ಕೆಪಿಎಸ್‍ಸಿ ಪರಿಶೀಲನಾ ಸಮಿತಿ ರಚಿಸಿತ್ತು. ತನಿಖೆ ಮತ್ತು ಪರಿಶೀಲನೆ ನಡೆದಿರುವ ಸಂದರ್ಭದಲ್ಲಿ ಯಾವ ಹಂತದಲ್ಲಿ ಯಾವ ಅಧಿಕಾರಿಗಳು ನಿರ್ಧಾರ ಕೈಗೊಂಡರು ಎಂಬುದನ್ನು ತನಿಖೆಯಿಂದ ಸ್ಪಷ್ಟಪಡಿಸಬೇಕೇ ಹೊರತು, ರಾಜಕೀಯವಾಗಿ ಒಬ್ಬರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ಎಂದು ಅವರು ತಿಳಿಸಿದರು.

ಹಿಂದಿನ ಪಿಎಸ್‍ಐ ಹಗರಣವನ್ನು ಮರೆತಿದ್ದಾರೆಯೇ?: ಯುವಕರ ಉದ್ಯೋಗದ ಕನಸುಗಳಿಗೆ ಸಂಬಂಧಿಸಿದ ನೇಮಕಾತಿ ಅಕ್ರಮಗಳ ಬಗ್ಗೆ ಮಾತನಾಡುವಾಗ ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಮ್ಮ ಹಿಂದಿನ ಆಡಳಿತದ ಅವಧಿಯ ಘಟನೆಗಳನ್ನೂ ನೆನಪಿಸಿಕೊಳ್ಳಬೇಕು. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಪಿಎಸ್‍ಐ ನೇಮಕಾತಿ ಹಗರಣದ ಆರೋಪಗಳು ಕೇಳಿಬಂದಿದ್ದವು. ಆ ಪ್ರಕರಣದಲ್ಲಿ ಬಿಜೆಪಿ ನಾಯಕರ ಹೆಸರುಗಳು ಕೇಳಿಬಂದಿದ್ದರೂ ಅದರ ಬಗ್ಗೆ ಈಗ ಪ್ರಶ್ನೆ ಎತ್ತುತ್ತಿರುವವರು ಅಂದು ಯಾವ ರೀತಿಯ ನಿಲುವು ತೆಗೆದುಕೊಂಡಿದ್ದರು ಎಂಬುದನ್ನು ಜನರು ಮರೆಯುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ನೀಟ್ ಅಕ್ರಮದ ಬಗ್ಗೆ ಕುಮಾರಸ್ವಾಮಿ ಏಕೆ ಮಾತನಾಡಲಿಲ್ಲ?: ನೀಟ್ ವಿಚಾರದಲ್ಲಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದಾಗ, ಆತ್ಮಹತ್ಯೆಗಳಂತಹ ದುರಂತಗಳು ನಡೆದಾಗ ಕುಮಾರಸ್ವಾಮಿ ಇದೇ ರೀತಿಯಲ್ಲಿ ಏಕೆ ಪ್ರಶ್ನೆ ಮಾಡಲಿಲ್ಲ? ನನ್ನ ವಿರುದ್ಧದ ವಿಚಾರಗಳಲ್ಲಿ ಮಾತ್ರ ಇಷ್ಟೊಂ ದು ಆಸಕ್ತಿ ಏಕೆ? ಎಂದು ಪ್ರಶ್ನಿಸಿದ ಅವರು, ತಮ್ಮ ವಿರುದ್ಧ ವೈಯಕ್ತಿಕವಾಗಿ ನಿರಂತರವಾಗಿ ಆರೋಪ ಮಾಡುತ್ತಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಆರೋಪಿಸಿದರು.

ನನ್ನ ವಿರುದ್ಧ ಮಾತನಾಡಲು ಯಾರಿಂದಲಾದರೂ ಗುತ್ತಿಗೆ ಪಡೆದಿದ್ದಾರೆಯೇ ಎಂಬುದನ್ನು ಕುಮಾರಸ್ವಾಮಿ ಸ್ಪಷ್ಟಪಡಿಸಲಿ ಎಂದು ವ್ಯಂಗ್ಯವಾಡಿದ ಪ್ರಿಯಾಂಕ್ ಖರ್ಗೆ, ಕೆಪಿಎಸ್‍ಸಿ ಪ್ರಕರಣದಲ್ಲಿ ನಿಜವಾದ ತಪ್ಪಿತಸ್ಥರು ಯಾರು ಎಂಬುದನ್ನು ತನಿಖಾ ಸಂಸ್ಥೆಗಳು ಪತ್ತೆಹಚ್ಚಲಿ. ಪ್ರಕರಣದಲ್ಲಿ ಮಧ್ಯವರ್ತಿಗಳು, ಅಧಿಕಾರಿಗಳು ಅಥವಾ ರಾಜಕೀಯ ಸಂಪರ್ಕ ಹೊಂದಿರುವವರು ಯಾರೇ ಇದ್ದರೂ ಅವರ ಪಾತ್ರವನ್ನು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. ದಾಖಲೆಗಳೊಂದಿಗೆ ಬನ್ನಿ, ಉತ್ತರ ಕೊಡುತ್ತೇನೆ: ಕುಮಾರಸ್ವಾಮಿ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಲಿ. ಅವರು ಮಾಡುವ ಪ್ರತಿಯೊಂದು ಆರೋಪಕ್ಕೂ ದಾಖಲೆಗಳಿದ್ದರೆ ಸರಕಾರ ಉತ್ತರ ನೀಡಲಿದೆ. ಕೇವಲ ಆರೋಪ ಮಾಡುವುದು, ಅದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದು ಮತ್ತು ನಂತರ ಪುರಾವೆ ನೀಡದೆ ಹಿಂದೆ ಸರಿಯುವುದು ಜವಾಬ್ದಾರಿಯುತ ರಾಜಕಾರಣವಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಯುವಕರ ಉದ್ಯೋಗ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ನೇಮಕಾತಿ ಅಕ್ರಮವನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತದೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಮತ್ತು ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಎದುರಿಸಬೇಕು ಎಂಬುದು ಸರಕಾರದ ನಿಲುವು ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

ಕೆಪಿಎಸ್‍ಸಿ 2023ರ ಸೆ.22ರಂದು 24 ಎಇಇ ಹುದ್ದೆಗಳಿಗೆ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿತ್ತು. ಸೆ.25ರಂದು ಆನಂದ್ ಸಿದ್ಧರೆಡ್ಡಿ ಎನ್ನುವವರು ಈ ಪಟ್ಟಿಯಲ್ಲಿ ದೋಷವಿದೆ ಎಂದು ಆಕ್ಷೇಪಣೆ ಸಲ್ಲಿಸಿದ್ದರು. ಅದನ್ನು ಪರಿಶೀಲನೆ ನಡೆಸಲು ಆಯೋಗದ ಸದಸ್ಯೆ ಶಾಂತ ಹೊಸಮನಿ ನೇತೃತ್ವದಲ್ಲಿ 3 ಸದಸ್ಯರ ಸಮಿತಿಯನ್ನು ರಚನೆ ಮಾಡಲಾಗಿತ್ತು. ಸಮಿತಿಯ ತನಿಖೆ ನಡೆಯುತ್ತಿದ್ದರೂ, 2024ರ ಜ.31ರಂದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಎಇಇ ಅಂತಿಮ ಆಯ್ಕೆ ಪಟ್ಟಿಯನ್ನು ಕೆಪಿಎಸ್‍ಸಿ ಕಳುಹಿಸಿತ್ತು. ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಮಿತಿಯು ತನಿಖೆ ನಡೆಸುತ್ತಿದ್ದರೂ, ಅಧಿಸೂಚನೆಯನ್ನು ತಡೆಹಿಡಿಯುವ ಹಾಗೂ ರದ್ದುಪಡಿಸುವ ಅಧಿಕಾರ ಕೆಪಿಎಸ್‍ಸಿಗೆ ಇದ್ದರೂ, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪರೀಕ್ಷೆಯನ್ನು ನಡೆಸಿ, ಆಯ್ಕೆಪಟ್ಟಿಯನ್ನು ತಯಾರಿಸುವ ಜವಾಬ್ದಾರಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಇದೆಯೇ? ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor