×
Ad

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಸೂಕ್ತ ನಿರ್ಧಾರ ಕೈಗೊಳ್ಳಲು ಡಿಸಿಗೆ ಹೈಕೋರ್ಟ್ ಸೂಚನೆ

Update: 2023-09-20 22:44 IST

ಬೆಂಗಳೂರು, ಸೆ.20: ನಗರದ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ಸಂಬಂಧ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಲ್ಲಿಸಿರುವ ಮನವಿ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ನಗರ ಜಿಲ್ಲಾಧಿಕಾರಿಗಳಿಗೆ ಹೈಕೋರ್ಟ್ ಮೌಖಿಕವಾಗಿ ಸೂಚನೆ ನೀಡಿದೆ.

ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಪರ ವಕೀಲ ಶ್ರೀಧರ ಪ್ರಭು, ಬುಧವಾರ ಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಗಣೇಶ್ ಚತುರ್ಥಿ ಮುಗಿದು ಎರಡು ದಿನ ಆಗಿದೆ. ಸೆ.18 ರಂದು ಹಬ್ಬ ಇದೆ ಎಂದು ಬಹಳ ಹಿಂದೆ ದಿನ ನಿಗದಿಯಾಗಿತ್ತು. ಈ ವಿಚಾರ ನಿಮಗೆ ಗೊತ್ತಿರಲಿಲ್ಲ ಎಂದು ಹೇಳುವಂತಿಲ್ಲ. ಅಧಿಕ ಮಾಸದ ಕಾರಣಕ್ಕೆ ಕೆಲವು ಕಡೆ ಸೆ.19ಕ್ಕೆ ಹಬ್ಬ ಆಚರಿಸಲಾಗಿದೆ. ಏನೇ ಇರಲಿ ಹಬ್ಬ ಮುಗಿದ ಎರಡು ದಿನಗಳ ನಂತರ ವಿಳಂಬವಾಗಿ ಕೋರ್ಟ್‍ಗೆ ಯಾಕೆ ಬಂದಿದ್ದಿರಿ, ಮುಂಚಿತವಾಗಿ ಬಂದಿದ್ದರೆ ಏನಾದರೊಂದು ಪರಿಹಾರ ಸೂಚಿಸಬಹುದಿತ್ತು ಎಂದು ಒಕ್ಕೂಟದ ಪರ ವಕೀಲರನ್ನು ಪ್ರಶ್ನಿಸಿತು.

ಈ ವೇಳೆ ಅರ್ಜಿದಾರ ಪರ ವಕೀಲರು, ನಾವು ಆಚರಿಸುತ್ತಿರುವುದು ಸಾರ್ವಜನಿಕ ಗಣೇಶ ಉತ್ಸವ. ಅಲ್ಲದೆ, ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸೆ.22ರಿಂದ 24ರ ವರೆಗೆ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಿಸಲು ನಿರ್ಧರಿಸಿದೆ ಎಂದು ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ಅಂತಿಮವಾಗಿ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದೀರಾ ಎಂದು ನ್ಯಾಯಪೀಠ ವಕೀಲರನ್ನು ಪ್ರಶ್ನಿಸಿತು. ನಗರ ಜಿಲ್ಲಾಧಿಕಾರಿಗಳಿಗೆ ಸೆ.13ರಂದು ಮನವಿ ಕೊಡಲಾಗಿದೆ. ಆದರೆ, ಈವರೆಗೆ ಯಾವುದೇ ಕ್ರಮ ಆಗಿಲ್ಲ ಎಂದು ವಕೀಲರು ತಿಳಿಸಿದರು. ಆಗಲಿ, ನಿಮ್ಮ ಮನವಿ ಸರಕಾರಿ ವಕೀಲರಿಗೆ ಕೊಡಿ. ಅವರು ನಗರ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪೀಠ ಮೌಖಿಕವಾಗಿ ಸೂಚಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News