ಜಾಗತಿಕ ಬೆಳವಣಿಗೆಯಿಂದ ಅನಿವಾರ್ಯವಾಗಿ ಕೇಂದ್ರ ಸರಕಾರ ತೈಲ ಬೆಲೆ ಏರಿಸಿದೆ: ಬಿ.ವೈ. ವಿಜಯೇಂದ್ರ
"ಸಿದ್ದರಾಮಯ್ಯ ಸರಕಾರ ತೈಲದ ಮೇಲಿನ ಹೆಚ್ಚುವರಿ ತೆರಿಗೆಯನ್ನು ಇಳಿಸಲಿ"
ಬಿ.ವೈ. ವಿಜಯೇಂದ್ರ
ಬೆಂಗಳೂರು: ಕೇಂದ್ರದಿಂದ ಮೂರನೇ ಬಾರಿಗೆ ತೈಲ ಬೆಲೆ ಏರಿಕೆ ಆಗಿದೆ. ಜಾಗತಿಕ ಬೆಳವಣಿಗೆಯಿಂದ ಅನಿವಾರ್ಯವಾಗಿ ತೈಲ ಬೆಲೆ ಏರಿಸಿದೆ. ಸರಕಾರಕ್ಕೆ ಇಷ್ಟ ಇಲ್ಲದೇ ಇದ್ದರೂ ಕಠಿಣ ನಿರ್ಧಾರ ಕೈಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಈ ಹಿಂದೆ ತೈಲ ಬೆಲೆ 10 ರೂ.ಕಡಿಮೆ ಮಾಡುತ್ತೇನೆ ಎಂದು ಹೇಳಿದ್ದರು. ಇದೀಗ ಅವರು ರಾಜ್ಯದ ಜನರ ಒಳಿತಿಗಾಗಿ ತೈಲದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಿ ಎಂದು ಹೇಳಿದರು.
ಜಾಗತಿಕ ಸ್ಥಿತಿಗತಿಯನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಂಡು ತೈಲದ ಮೇಲಿನ ಹೆಚ್ಚುವರಿ ತೆರಿಗೆಯನ್ನು ಇಳಿಸಲಿ ಎಂದು ಆಗ್ರಹಿಸಿದ ವಿಜಯೇಂದ್ರ, ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗೆ ಬುದ್ಧಿ ಹೇಳುವುದು ಬಿಟ್ಟು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ತೆರಿಗೆಯನ್ನು ಕಡಿಮೆ ಮಾಡಿ ದೇಶಕ್ಕೆ ಮಾದರಿಯಾಗುವ ಕೆಲಸ ಮಾಡಿಸಲಿ ಎಂದು ಸವಾಲು ಹಾಕಿದರು.
ರೈತರ ಹಿತಾಸಕ್ತಿ ಕಡೆಗಣಿಸಲು ಅವಕಾಶ ನೀಡುವುದಿಲ್ಲ:
‘ಆನೇಕಲ್ ಸಮೀಪ ರೈತರ ಫಲವತ್ತಾದ ಜಮೀನನ್ನು ಪಡೆದು ಕ್ರೀಡಾಂಗಣ ನಿರ್ಮಿಸಲು ರಾಜ್ಯ ಸರಕಾರ ಮುಂದಾಗಿದ್ದು, ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದೆ. ರೈತರ ಹಿತಾಸಕ್ತಿ ಕಡೆಗಣಿಸಲು ನಮ್ಮ ಪಕ್ಷವು ಅವಕಾಶ ನೀಡುವುದಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ನೆರೆ ಬಂದಾಗ ಸರಕಾರ ರೈತರ ಪರವಾಗಿ ನಿಲ್ಲಲಿಲ್ಲ. ಬರಗಾಲ ಇದ್ದಾಗಲೂ ಸಹಾಯ ಮಾಡಲಿಲ್ಲ. ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರು ತಮ್ಮ ಜನರ ನೋವು ಆಲಿಸಲಿಲ್ಲ. ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ಸಾವಿರಾರು ಎಕರೆ ಜಾಗ ಇದೆ. ಅಲ್ಲೇ ಕ್ರೀಡಾಂಗಣ ನಿರ್ಮಿಸಬಹುದಿತ್ತು. ಅದು ಬಿಟ್ಟು ಆನೇಕಲ್ ನಲ್ಲಿ ಫಲವತ್ತಾದ ಜಮೀನು ಪಡೆದು ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.
ಬಾಕ್ಸ್...
ಗೌಡರಿಗೆ ಆಯ್ಕೆಗೆ ಬಿಜೆಪಿ ವಿರೋಧವಿಲ್ಲ: ‘ರಾಜ್ಯಸಭೆ ಅಭ್ಯರ್ಥಿ ಆಯ್ಕೆ ವಿಚಾರ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಆಗಿದೆ. ಒಬ್ಬರಿಗೆ ಅವಕಾಶವಿದೆ. ದೇವೇಗೌಡರನ್ನು ರಾಜ್ಯಸಭೆಗೆ ಕಳಿಸಲು ಬಿಜೆಪಿ ವಿರೋಧಿಸಿಲ್ಲ. ದೇವೇಗೌಡರಿಗೆ ಅವಕಾಶ ನೀಡುವ ನಿರ್ಧಾರ ರಾಷ್ಟ್ರೀಯ ನಾಯಕರದ್ದು. ಈ ಸಂಬಂಧ ಯಾವುದೇ ಸೂಚನೆ ನಮಗೆ ಸಿಕ್ಕಿಲ್ಲ’
-ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ