ಕಾರ್ಮಿಕರಿಗೆ ಕನಿಷ್ಠ ವೇತನ ಹೆಚ್ಚಳ: ರಾಜ್ಯ ಸರಕಾರ ಅಧಿಸೂಚನೆ
► ಒಂದು ಕೋಟಿಗೂ ಹೆಚ್ಚು ಕಾರ್ಮಿಕರಿಗೆ ವೇತನ ಹೆಚ್ಚಳದಿಂದ ಲಾಭ ► ಎಲ್ಲ ನಿಗದಿತ ಉದ್ಯೋಗಗಳು ಒಂದೇ ಅಧಿಸೂಚನೆಯ ವ್ಯಾಪ್ತಿಗೆ ► ಇ-ಕಾಮರ್ಸ್, ಕೊರಿಯರ್ ಸಂಸ್ಥೆ, ಧಾರ್ಮಿಕ ಸಂಸ್ಥೆ ನೌಕರರಿಗೂ ಅನುಕೂಲ
ಕಾರ್ಮಿಕ ಸಚಿವ ಸಂತೋಷ್ ಲಾಡ್
ಬೆಂಗಳೂರು: ರಾಜ್ಯ ಸರಕಾರವು ಕಾರ್ಮಿಕರ ಕನಿಷ್ಠ ವೇತನವನ್ನು ಏರಿಕೆ ಮಾಡಿ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ರಾಜ್ಯದ ಸುಮಾರು ಒಂದು ಕೋಟಿ ಕಾರ್ಮಿಕರಿಗೆ ಸರಕಾರ, ಕಾರ್ಮಿಕ ಇಲಾಖೆಯ ಮೂಲಕ ಕೊಡುಗೆ ನೀಡಿದೆ.
ಈ ಅಧಿಸೂಚನೆಯು ರಾಜ್ಯದ ಅಸಂಘಟಿತ ಮತ್ತು ನಿರ್ದಿಷ್ಟ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆರ್ಥಿಕ ಸೌಲಭ್ಯವನ್ನು ಒದಗಿಸಲಿದೆ. ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ಈ ವೇತನ ಪರಿಷ್ಕರಣೆಯನ್ನು ಮಾಡಲಾಗಿದೆ.
ಒಂದೇ ಅಧಿಸೂಚನೆ: ಈ ಬಾರಿಯ ಅಧಿಸೂಚನೆಯ ವಿಶೇಷವೆಂದರೆ ಇದೇ ಮೊದಲ ಬಾರಿಗೆ ಎಲ್ಲ ನಿಗದಿತ ಉದ್ಯೋಗಗಳನ್ನು ಒಂದೇ ಅಧಿಸೂಚನೆಯಡಿ ತರಲಾಗಿದೆ. ಈ ಹಿಂದೆ ಇದ್ದ ನಾಲ್ಕು ವಲಯಗಳ ವರ್ಗೀಕರಣವನ್ನು ಮೂರು ವಲಯಗಳಿಗೆ ಪರಿಷ್ಕರಿಸಲಾಗಿದೆ.
ನೂತನ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಅಧಿಸೂಚನೆಯು ಖಾಸಗಿ ಶಾಲೆ-ಕಾಲೇಜು ಬೋಧಕೇತರ ಸಿಬ್ಬಂದಿ, ಇ-ಕಾಮರ್ಸ್ ವಲಯದ ನೌಕರರು ಮತ್ತು ಕೋರಿಯರ್ ಸಂಸ್ಥೆಗಳ ನೌಕರರು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ದುಡಿಯುವ ಸಿಬ್ಬಂದಿಗೂ ಲಾಭ ಮಾಡಿಕೊಟ್ಟಿದೆ. ಒಟ್ಟಾರೆಯಾಗಿ ಕರ್ನಾಟಕದಲ್ಲಿನ 81 ಅನುಸೂಚಿತ ಉದ್ಯೋಗಗಳಲ್ಲಿ ದುಡಿಯುವ ಶ್ರಮಿಕರಿಗೆ ಅನುಕೂಲವಾಗಲಿದೆ.
ಈಡೇರಿದ ಬಹುದಿನಗಳ ಬೇಡಿಕೆ: ಕನಿಷ್ಠ ವೇತನ ಪರಿಷ್ಕರಣೆ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ವಿವಿಧ ಸಂಘಟನೆಗಳು, ಕಾರ್ಮಿಕರ ಒಕ್ಕೂಟಗಳು ಇದಕ್ಕಾಗಿ ಬೇಡಿಕೆ ಇಟ್ಟಿದ್ದವು. ಇದೀಗ ಕಾರ್ಮಿಕ ಇಲಾಖೆ ಸ್ಪಂದಿಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜೀವನ ನಡೆಸಲು ಕಷ್ಟಪಡುತ್ತಿದ್ದ ಕಾರ್ಮಿಕ ವಲಯಕ್ಕೆ ಈ ಕನಿಷ್ಠ ವೇತನ ಪರಿಷ್ಕರಣೆಯು ದೊಡ್ಡ ಮಟ್ಟದ ಅನುಕೂಲ ಮಾಡಿಕೊಡಲಿದೆ.
ಪರಿಷ್ಕೃತ ಕನಿಷ್ಠ ವೇತನದ ಕರಡು ಅಧಿಸೂಚನೆಯನ್ನು ಕಳೆದ ವರ್ಷದ ಎ.11 ರಂದು ಹೊರಡಿಸಲಾಗಿತ್ತು. 2016-2017ರಲ್ಲಿ ಜಾರಿಗೆ ಬಂದ ಕೊನೆಯ ಪರಿಷ್ಕರಣೆಯ ಒಂದು ದಶಕದ ನಂತರ ಈ ಪರಿಷ್ಕರಣೆ ಜಾರಿಗೆ ಬಂದಿದೆ. ಕಾರ್ಮಿಕ ಸಂಘಗಳು ಕನಿಷ್ಠ ವೇತನ ಅಧಿಸೂಚನೆ ಹೊರಡಿಸಲು ಒತ್ತಾಯಿಸುತ್ತಿದ್ದವು. ಆದರೆ ಕೈಗಾರಿಕೆಗಳು, ವಿಶೇಷವಾಗಿ ಎಂಎಸ್‍ಎಂಇ ವಲಯದಿಂದ ವಿರೋಧ ವ್ಯಕ್ತವಾಗಿತ್ತು.
ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳದ ಅಧಿಸೂಚನೆಯನ್ನು ಹೊರಡಿಸಿದ ಮೂರನೇ ರಾಜ್ಯ ಎಂಬ ಕೀರ್ತಿಗೆ ಕರ್ನಾಟಕ ಪಾತ್ರವಾಗಿದೆ. ಈಗಾಗಲೇ ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಈಗಿನ ಪ್ರಸ್ತುತ ಪರಿಷ್ಕರಣೆಯು 1991ರ ರೆಪ್ಟಕೋಸ್ ಬ್ರೆಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಮಾರ್ಗಸೂಚಿಗಳ ಪ್ರಕಾರವೇ ಏರಿಕೆ ಮಾಡಲಾಗಿದೆ. ಮನೆಗಳಲ್ಲಿ ದಿನನಿತ್ಯದ ವೆಚ್ಚದ ಲೆಕ್ಕಾಚಾರದ ಮೇಲೆ ಇದನ್ನು ಜಾರಿ ಮಾಡಲಾಗಿದೆ.
ಪ್ರಮುಖ ಷರತ್ತುಗಳು ಮತ್ತು ನಿಯಮಗಳು: ಮಹಿಳೆಯರು, ಪುರುಷರು, ತೃತೀಯ ಲಿಂಗಿಗಳು ಮತ್ತು ವಿಕಲಚೇತನರು ಒಂದೇ ರೀತಿಯ ಕೆಲಸ ನಿರ್ವಹಿಸಿದರೆ ಸಮಾನ ವೇತನ ನೀಡಬೇಕು. ಒಂದು ದಿನದ ಕೆಲಸ ಎಂದರೆ 8 ಗಂಟೆಗಳ ಕೆಲಸ ಎಂದು ಪರಿಗಣಿಸಬೇಕು. ನಿಗದಿತ ಅವಧಿಗಿಂತ ಹೆಚ್ಚು ಸಮಯ ಕೆಲಸ ಮಾಡಿದರೆ ಸಾಮಾನ್ಯ ವೇತನದ ಎರಡು ಪಟ್ಟು ವೇತನ ನೀಡಬೇಕು. ವಾರದ ರಜೆ ಅಥವಾ ಹಬ್ಬದ ದಿನಗಳಲ್ಲಿ ಕೆಲಸ ಮಾಡಿದವರಿಗೂ ಎರಡು ಪಟ್ಟು ವೇತನ ಅನ್ವಯವಾಗುತ್ತದೆ.
ವಲಯಗಳ ವರ್ಗೀಕರಣ: ವೇತನ ದರಗಳನ್ನು ಸುಲಭವಾಗಿ ಅನ್ವಯಿಸಲು ರಾಜ್ಯದ ಪ್ರದೇಶಗಳನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ವಲಯ-1: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವ ಪ್ರದೇಶಗಳು. ವಲಯ-2: ರಾಜ್ಯದ ಇತರೆ ಎಲ್ಲಾ ಮಹಾನಗರ ಪಾಲಿಕೆಗಳು ಮತ್ತು ಜಿಲ್ಲಾ ಕೇಂದ್ರಗಳು. ವಲಯ-3: ವಲಯ-1 ಮತ್ತು ವಲಯ-2 ರ ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದ ಇತರೆ ಎಲ್ಲ ಭಾಗಗಳು ಒಳಗೊಂಡಿವೆ.
ಕನಿಷ್ಠ ವೇತನ ದರಗಳ ಪಟ್ಟಿ: ಕಾರ್ಮಿಕರ ವರ್ಗೀಕರಣ
ವಲಯ-1: ಅತಿ ಕುಶಲ ಕಾರ್ಮಿಕರಿಗೆ 31,114.02 ರೂ.(ತಿಂಗಳಿಗೆ), ಕುಶಲ ಕಾರ್ಮಿಕರಿಗೆ 28,285 ರೂ., ಅರೆ ಕುಶಲ ಕಾರ್ಮಿಕರಿಗೆ 25,714.07, ಅಕುಶಲ ಕಾರ್ಮಿಕರಿಗೆ 23,376.43 ರೂ.ಗಳು.
ವಲಯ-2: ಅತಿ ಕುಶಲ ಕಾರ್ಮಿಕರಿಗೆ 28,285.47 ರೂ., ಕುಶಲ ಕಾರ್ಮಿಕರಿಗೆ 25,714.07 ರೂ., ಅರೆ ಕುಶಲ ಕಾರ್ಮಿಕರಿಗೆ 23,376.43 ರೂ., ಅಕುಶಲ ಕಾರ್ಮಿಕರಿಗೆ 21,251.30 ರೂ.ಗಳು.
ವಲಯ-3: ಅತಿಕುಶಲ ಕಾರ್ಮಿಕರಿಗೆ 25,714.07 ರೂ., ಕುಶಲ ಕಾರ್ಮಿಕರಿಗೆ 23,376.43 ರೂ., ಅರೆ ಕುಶಲ ಕಾರ್ಮಿಕರಿಗೆ 21,251.30 ರೂ., ಅಕುಶಲ ಕಾರ್ಮಿಕರಿಗೆ 19,319.36 ರೂ.ಗಳು. ಕನಿಷ್ಠ ವೇತನ ನಿಗದಿಗೊಳಿಸಲಾಗಿದೆ.
‘ಹೊಸ ಕನಿಷ್ಠ ವೇತನ ಜಾರಿಯಿಂದ ರಾಜ್ಯದಲ್ಲಿನ ಸಾಕಷ್ಟು ಕಾರ್ಮಿಕರಿಗೆ ಅನುಕೂಲವಾಗಲಿದೆ. ಇಎಸ್‍ಐ ಮತ್ತು ಪಿಎಫ್ ಗಳಿಗೆ ವೇತನ ಕಡಿತ ಮಾಡಿದ ನಂತರ ಕಾರ್ಮಿಕರಿಗೆ ಕಡಿಮೆ ವೇತನ ಉಳಿಯುತ್ತಿತ್ತು. ಕೆಲವರು ಬಿಪಿಎಲ್ ವ್ಯಾಪ್ತಿಯಿಂದಲೂ ಹೊರಗಿದ್ದರು. ಅಂತಹವರಿಗೆಲ್ಲ ಈ ಕನಿಷ್ಠ ವೇತನ ಹೆಚ್ಚಳದಿಂದ ಸಹಾಯವಾಗಲಿದೆ. ಇದೊಂದು ಕ್ರಾಂತಿಕಾರಕ ಕ್ರಮವೆಂದೆ ಹೇಳಬಹುದು. ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯವಾಗುವ ಕ್ರಮವನ್ನು ಜಾರಿ ಮಾಡಿದ ಸಮಾಧಾನ ನಮ್ಮ ಸರಕಾರದ್ದು’
-ಸಂತೋಷ್ ಲಾಡ್, ಕಾರ್ಮಿಕ ಸಚಿವ