×
Ad

ಬಗರ್ ಹುಕುಂ ಯೋಜನೆ ಅಡಿ ಭೂ ಮಂಜೂರಾತಿಗೆ ಸರಕಾರ ಬದ್ಧ : ಕೃಷ್ಣ ಬೈರೇಗೌಡ

"ಕಾನೂನು ಉಲ್ಲಂಘಿಸಿ ಬಗರ್ ಹುಕುಂ ಅಡಿಯಲ್ಲಿ ಸೇಂದಿವನ ಮಂಜೂರು ಅಸಾಧ್ಯ"

Update: 2026-03-09 14:44 IST

ಬೆಂಗಳೂರು : ಅಕ್ರಮ ಸಕ್ರಮ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಅರ್ಹ ರೈತರಿಗೆ ಜಮೀನು ಮಂಜೂರು ಮಾಡಬೇಕು ಎಂಬ ಸರಕಾರದ ಉದ್ದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಗೆಂದು ಕಾನೂನು-ನಿಯಮಗಳನ್ನೂ ಮೀರಲು ಸಾಧ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದರು.

ಸೋಮವಾರ ವಿಧಾಸಭೆಯಲ್ಲಿ ಸೇಂದಿವನವನ್ನು ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ರೈತರಿಗೆ ಭೂ ಮಂಜೂರು ಮಾಡುವ ಸಂಬಂಧ ಪ್ರಶ್ನೋತ್ತರ ಕಲಾಪದ ಸಮಯದಲ್ಲಿ ಮಾಜಿ ಸಚಿವರಾದ ಟಿಬಿ ಜಯಚಂದ್ರ ಅವರ ಪ್ರಶ್ನೆಗೆ ಅವರು ಉತ್ತರ ನೀಡಿದರು.

“ಹಿಂದೆ ಕರ್ನಾಟಕದಲ್ಲಿ ಹೆಂಡ (ಸೇಂದಿ) ಇಳಿಸುವ ಕುಲಕಸುಬು ಇತ್ತು. ಹೀಗಾಗಿ ಇದೇ ಕಸುಬವನ್ನು ನಂಬಿಕೊಂಡಿದ್ದವರಿಗಾಗಿ ಕೆಲವು ಪ್ರದೇಶಗಳನ್ನು ಈಚಲುವನ ಅಥವಾ ಸೇಂದಿವನ ಎಂದು ಕಾಯ್ದಿರಿಸಲಾಗಿತ್ತು. ಕಾಲಾನಂತರ ಈ ವೃತ್ತಿಯನ್ನು ನಿಷೇಧಿಸಿದ ಮೇಲೆ ಆ ಜಮೀನಿನಲ್ಲಿ ಕೆಲವರು ಕೃಷಿ ಮಾಡಿಕೊಂಡಿದ್ದರೆ, ಕೆಲವು ಪ್ರದೇಶಗಳನ್ನು ಸರಕಾರವೇ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ನೀಡಿದೆ. ಆದರೆ, ಅದೇ ಪ್ರದೇಶಗಳನ್ನು ಪ್ರಸ್ತುತ ಬಗರ್ ಹುಕುಂ ಯೋಜನೆ ಅಡಿಯಲ್ಲಿ ಮಂಜೂರು ಮಾಡಲು 2003ರ ಸರಕಾರಿ ಆದೇಶದ ಕಾರಣಕ್ಕೆ ಕೆಲವು ಕಾನೂನು ತೊಡಕುಗಳಿವೆ” ಎಂದು ವಿವರಿಸಿದರು.

“ಸೇಂದಿವನ ಪ್ರದೇಶವನ್ನು ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ರೈತರಿಗೆ ಮಂಜೂರು ಮಾಡಬೇಕು ಎಂಬ ಬೇಡಿಕೆ ನಮಗೆ ಅರ್ಥವಾಗುತ್ತದೆ. ಈ ವಿಚಾರದಲ್ಲಿ ಸಕಾರಾತ್ಮಕವಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಉದ್ದೇಶವೂ ಸರಕಾರಕ್ಕೆ ಇದೆ. ಆದರೆ, ಸೇಂದಿವನ ಜಮೀನನ್ನು ಅಬಕಾರಿ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾವಣೆ ಮಾಡುವಾಗ 2003 ರಲ್ಲಿ ಅಂದಿನ ಸರಕಾರ ರೂಪಿಸಿದ ಐದು ನಿಯಮಗಳು ಇಂದು ತೊಡಕಾಗಿ ಪರಿಣಮಿಸಿವೆ.

“(1) 150 ಎಕರೆಗಿಂತ ಹೆಚ್ಚಿದ್ದರೆ ಆ ಜಮೀನನ್ನು ಅರಣ್ಯ ಇಲಾಖೆಗೆ ನೀಡಬೇಕು. (2) ಲಭ್ಯವಿರುವ ಗ್ರಾಮದಲ್ಲಿ ಕನಿಷ್ಟ 10 ಎಕರೆ ಜಾಗವನ್ನು ಸ್ಮಶಾನಕ್ಕೆ ಕಾಯ್ದಿರಿಸಬೇಕು. (3) ಪ್ರತಿಯೊಂದು ಗ್ರಾಮದಲ್ಲೂ ಸೇಂದಿವನ ಜಮೀನನ್ನು ಗಮನದಲ್ಲಿಟ್ಟುಕೊಂಡು ಆಶ್ರಯ ಯೋಜನೆ, ಮೊರಾರ್ಜಿ ದೇಸಾಯಿ ನವೋದಯ ವಸತಿ ಶಾಲೆ, ಪರಿಶಿಷ್ಠ ಜಾತಿ ಪಂಗಡ, ಹಿಂದುಳಿದ ವರ್ಗಗಳ ಹಾಸ್ಟೆಲ್ ಸ್ಮಶಾನ ಉದ್ದೇಶಕ್ಕಾಗಿ, ಸಾರ್ವಜನಿಕ ಶಿಕ್ಷಣ ಕಟ್ಟಡ ಆರೋಗ್ಯ ಕೇಂದ್ರ ಬಸ್ ನಿಲ್ದಾಣ ಉದ್ದೇಶಕ್ಕಾಗಿ ಕನಿಷ್ಟ 10 ರಿಂದ 50 ಎಕರೆ ಮೀಸಲಿಡುವುದು. (4) ಪ್ರತಿ ಗ್ರಾಮ ಪಂಚಾಯತಿ ಕೇಂದ್ರಕ್ಕೆ ಸಂಬಂಧಿಸಿದಂತೆ ಕೋಮುಗಲಭೆ ಪ್ರಕರಣಗಳಲ್ಲಿ ಸಂತ್ರಸ್ತರಾದ ಜನರಿಗೆ ಹಾಗೂ ಪರಿಶಿಷ್ಟ ಜಾತಿ-ಪಂಗಡಗಳ ಕುಟುಂಬಗಳ ಮೇಲೆ ದೌರ್ಜನ್ಯ ನಡೆದು ಸಂತ್ರಸ್ತರಾದವರ ಕುಟುಂಬಗಳಿಗೆ ಕನಿಷ್ಟ 3 ಮೂರು ಎಕರೆ ನೀಡುವ ಉದ್ದೇಶಕ್ಕಾಗಿ ಜಮೀನು ಮೀಸಲಿರಿಸುವುದು. (5) ಭೂರೈತ ಹಾಗೂ ಅತಿಸಣ್ಣ ಹಿಡುವಳಿದಾರರು 1990ಕ್ಕಿಂತ ಹಿಂದಿನಿಂದಲೂ ಬಗರ್ ಹುಕುಂ ಸಾಗುವಳಿ ಮಾಡಿರುವ ಜಮೀನನ್ನು ಸ್ವಂತ ಹಿಡುವಳಿ ಜಮೀನನ್ನಾಗಿ ಸೇರಿದಂತೆ 5 ಎಕರೆ ಮಿತಿಗೆ ಒಳಪಟ್ಟು ಸಕ್ರಮಗೊಳಿಸುವುದು.

ಬಗರ್ ಹುಕುಂ ಭೂ ಮಂಜೂರಾತಿ ಸಂದರ್ಭದಲ್ಲಿ ಈ ಎಲ್ಲಾ ಐದು ನಿಯಮಗಳನ್ನು ಯತಾವತ್ ಪಾಲಿಸಿದರೆ ಆಗುವ ಕೆಲಸಗಳೂ ಆಗೋಲ್ಲ. ಇದಲ್ಲದೆ, ಸುಮಾರು ಜಮೀನುಗಳು ಕಡತದಲ್ಲಿ ಈಗಾಗಲೇ ಅರಣ್ಯ ಇಲಾಖೆ ಎಂದು ನಮೂದಿಸಲಾಗಿದೆ. ಅರಣ್ಯ ಜಮೀನು ರಕ್ಷಣೆಗೆ ಸುಪ್ರೀಂ ಕೋರ್ಟ್ನಿಂದ ಕಟ್ಟುನಿಟ್ಟಿನ ಆದೇಶ ಇದೆ. ಹೀಗಾಗಿ ರೈತರಿಗೆ ಏನಾದ್ರೂ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ವಲಯ ಆಯುಕ್ತರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿ ನಿಯಮಗಳನ್ನು ಸರಳೀಕರಿಸಲು ಮುಂದಾಗಿದ್ದೇವೆ. ಬಗರ್ ಹುಕುಂ ಬಾಕಿ ಅರ್ಜಿ ಪರಿಗಣಿಸಬೇಕು ಎಂಬ ಉದ್ದೇಶ ಸ್ಪಷ್ಟವಾಗಿದೆ. ಈ ಕೆಲಸ ಮಾಡುವಾಗ ಎಲ್ಲಾ ನಿಯಮಗಳನ್ನೂ ಗಮನದಲ್ಲಿಟ್ಟು ಮಾಡಬೇಕಿದೆ. ಆದರೆ, ಈ ಕೆಲಸಗಳನ್ನು ಕಾನೂನು ಚೌಕಟ್ಟು ಮೀರಿ ಮಾಡಿ ಎಂದರೆ ನಮ್ಮಿಂದ ಸಾಧ್ಯವಿಲ್ಲ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News