×
Ad

ಸಿಎಂ ಕಚೇರಿಯನ್ನು ಆರೆಸ್ಸೆಸ್ ಸಂಪರ್ಕ ಮುಕ್ತಗೊಳಿಸಿ; ಸರಣಿ ಪೋಸ್ಟ್‌ಗಳ ಮೂಲಕ ನವೀನ್ ಸೂರಿಂಜೆ ಆಗ್ರಹ

ಬಜೆಟ್ ಮಂಡನೆಗೂ ಮುನ್ನವೇ ಬಿಜೆಪಿ ಶಾಸಕನಿಗೆ ಬಜೆಟ್ ಲೀಕ್ ಆಗಿದ್ದು ಹೇಗೆ? ಎಂದು ಪ್ರಶ್ನೆ

Update: 2026-03-08 22:07 IST

ಬೆಂಗಳೂರು : ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕಚೇರಿಯ ಕಾರ್ಯವೈಖರಿ ಕುರಿತು ಪ್ರಶ್ನೆಗಳನ್ನು ಎತ್ತಿದ್ದ ಪತ್ರಕರ್ತ ನವೀನ್ ಸೂರಿಂಜೆ, ಸಿಎಂ ಕಚೇರಿ ಆರೆಸ್ಸೆಸ್ ಪ್ರಚಾರಕರ ಪ್ರಭಾವದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಶನಿವಾರದ ಪೋಸ್ಟ್ ನಲ್ಲಿ ಗಂಭೀರ ಆರೋಪವನ್ನು ಮಾಡಿದ್ದರು.

ಇದೀಗ ರವಿವಾರ ಮತ್ತೆ ಸಾಮಾಜಿಕ ಜಾಲತಾಣ ಫೇಸ್ ಬುಕ್‌ನಲ್ಲಿ ಅದರ ಮುಂದುವರಿದ ಭಾಗವಾಗಿ ಹಲವು ಗಂಭೀರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ಅವರು "RSS ಮುಕ್ತ CM ಕಚೇರಿ ಅಭಿಯಾನ – 2 ಮತ್ತು 3" ಎಂದು ಉಲ್ಲೇಖಿಸಿದ್ದಾರೆ.

ರವಿವಾರ ಅವರು ಹಂಚಿಕೊಂಡಿರುವ ಪೋಸ್ಟ್‌ನಲ್ಲಿ "ಸಿಎಂ ಬಜೆಟ್ ಮಂಡನೆ ಮಾಡುವ ಮುನ್ನವೇ ಬಿಜೆಪಿ ಶಾಸಕರೊಬ್ಬರು ಪತ್ರಿಕಾಗೋಷ್ಠಿ ನಡೆಸಿ, ತನ್ನ ಕ್ಷೇತ್ರದ ವಿವಿಧ ಯೋಜನೆಗಳಿಗೆ ಬಜೆಟ್ ನಲ್ಲಿ ಮೀಸಲಿಡುವ ಹಣ, ಯೋಜನೆಗಳ ಕರಾರುವಕ್ಕಾದ ಮಾಹಿತಿ ನೀಡಿದ್ದರು ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ, ಬಜೆಟ್ ಮಂಡನೆಗೂ ಮುನ್ನವೇ ಬಜೆಟ್ ಲೀಕ್ ಆಗಿದ್ದು ತನಿಖೆಗೆ ಅರ್ಹ ವಿಷಯ ಅಲ್ಲವೇ? ಎಂದು ಈ ವೇಳೆ ಪ್ರಶ್ನಿಸಿದ್ದಾರೆ.

ಮುಂದುವರಿದು ಇನ್ನೊಂದು ಪೋಸ್ಟ್ ನಲ್ಲಿ, "ವಿಪಕ್ಷ ನಾಯಕರಾಗಿದ್ದಾಗ 2023ರ ವಿಧಾನಸಭೆ ಚುನಾವಣೆ ವೇಳೆ, ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತರಾಗಿದ್ದರು. ಸಿದ್ದರಾಮಯ್ಯರ ʼಅಧಿಕಾರಿʼ ಪಕ್ಕದ ಕೊಠಡಿಯಲ್ಲಿ ಕುಳಿತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿ ಬಿಜೆಪಿಯ 'ಜೀ'ಗೆ ಕಳುಹಿಸುತ್ತಿದ್ದರು" ಎಂದು ಆರೋಪ ಮಾಡಿದ್ದಾರೆ.

►ಸೂರಿಂಜೆ ಪೋಸ್ಟ್‌ನಲ್ಲಿ ಏನಿದೆ?

"ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡುವ ಮುನ್ನ ದಿನ ಬಿಜೆಪಿ ಶಾಸಕರೊಬ್ಬರು ಪತ್ರಿಕಾಗೋಷ್ಠಿ ಮಾಡಿ, ತನ್ನ ಕ್ಷೇತ್ರದ ವಿವಿಧ ಯೋಜನೆಗಳಿಗೆ ಬಜೆಟ್ ನಲ್ಲಿ ಮೀಸಲಿಡುವ ಹಣ, ಯೋಜನೆಗಳ ಕರಾರುವಕ್ಕಾದ ಮಾಹಿತಿ ನೀಡುತ್ತಾರೆ. ಅಷ್ಟು ಸಾಲದೆಂಬಂತೆ, ತನ್ನ ಕ್ಷೇತ್ರದ ಹೆಸರನ್ನು ಸಿಎಂ ಬಜೆಟ್ ಭಾಷಣದಲ್ಲಿ ಎಷ್ಟು ಬಾರಿ ಹೇಳುತ್ತಾರೆ ಎಂಬುದನ್ನೂ ನಿಖರವಾಗಿ ಹೇಳುತ್ತಾರೆ. ಇದಕ್ಕೆ ವೀಡಿಯೋ ದಾಖಲೆ ಇದೆ" ಎಂದು ಸೂರಿಂಜೆ ಅವರು ಹೇಳಿದ್ದಾರೆ.

ʼಬಜೆಟ್ ಮಂಡಿಸುವ ಪೂರ್ವದಲ್ಲೇ ಆ ಬಿಜೆಪಿ ಶಾಸಕನಿಗೆ ಬಜೆಟ್ನ ನಿಖರ ಅಂಕಿ-ಅಂಶಗಳು ಲಭ್ಯವಾಗಿದ್ದು ಹೇಗೆ? ಸಿಎಂ ಬಾಯಲ್ಲಿ ಎಷ್ಟು ಬಾರಿ ತನ್ನ ಕ್ಷೇತ್ರದ ಹೆಸರು ಬರುತ್ತದೆ ಎಂದು ಗೊತ್ತಾಗಿದ್ದು ಹೇಗೆ? ಹೇಗೆಂದರೆ ಆ ಬಿಜೆಪಿ ಶಾಸಕರ ಜಾತಿಗೆ ಸೇರಿದವರು ಮುಖ್ಯಮಂತ್ರಿ ಕಚೇರಿಯಲ್ಲಿ ಅಧಿಕಾರದಲ್ಲಿದ್ದಾರೆ ! (ಅವರ ಹೆಸರನ್ನು ದಿಟ್ಟ ಪತ್ರಕರ್ತರೊಬ್ಬರು ಹೊಗಳಿ ಬಯಲು ಮಾಡಿದ್ದಾರೆ). ಮಂಡನೆಗೂ ಮುನ್ನವೇ ಬಜೆಟ್ ಲೀಕ್ ಆಗಿದ್ದು ತನಿಖೆಗೆ ಅರ್ಹ ವಿಷಯ ಅಲ್ಲವೇ? ಆ ಬಿಜೆಪಿ ಶಾಸಕನಿಗೂ ಸಿಎಂ ಕಚೇರಿಯ ಅಧಿಕಾರಿಗೂ ಇರುವ ವ್ಯವಹಾರಗಳೇನು? ಎಂಬುದು ತನಿಖೆ ಆಗಬಾರದೇ? ಸಿದ್ದರಾಮಯ್ಯರಿಗೆ ತಿಳಿಯದಂತೆ ಸಿದ್ದರಾಮಯ್ಯರನ್ನು ಆರೆಸ್ಸೆಸ್-ಬಿಜೆಪಿ ವಿಷ ವರ್ತುಲದಲ್ಲಿ ಸಿಲುಕಿಸುವ ಅಧಿಕಾರಿಯನ್ನು ಸಮರ್ಥಿಸುತ್ತೀರಾ?ʼ ಎಂದು ಪ್ರಶ್ನಿಸಿದ್ದಾರೆ.

ʼಕೋಟ್ಯಾಂತರ ಲಂಚ ತಿನ್ನುತ್ತಾ, ಲಕ್ಷಾಂತರ ವೇತನ ಪಡೆಯುವ ಪ್ರಗತಿಪರ ಅಧಿಕಾರಿಗಳು ಮತ್ತು ಪ್ರತಿಫಲಾಪೇಕ್ಷೆ ಇಲ್ಲದೇ ಕೋಮುವಾದದ ವಿರುದ್ದ ಹೋರಾಡುತ್ತಿರುವ ಹೋರಾಟಗಾರರ ನಡುವಿನ ಸಂಘರ್ಷದಲ್ಲಿ ಕೆಲ ಪ್ರಗತಿಪರರು ಅಧಿಕಾರಿಗಳ ಪರ ನಿಂತುಕೊಳ್ಳುತ್ತಾರೆ. (ಅವರಿಗೆ ಲಕ್ಷಾಂತರ ರೂಗಳ ಪ್ರಾಜೆಕ್ಟ್ ಗಳ ಋಣ ಇರಬಹುದು) ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಸಿಎಂ ಕಚೇರಿ ಮೂಲಕ ಆರೆಸ್ಸೆಸ್, ಬಿಜೆಪಿ, ಹಿಂದುತ್ವವನ್ನು ಜಾರಿಗೊಳಿಸುತ್ತಿದೆʼ ಎಂದು ಹೇಳಿದ್ದಾರೆ.

"ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾಗ 2023 ರ ವಿಧಾನಸಭೆ ಚುನಾವಣೆ ಬಂತು. ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತರಾಗಿದ್ದರು. ಸಿದ್ದರಾಮಯ್ಯರ ಅಧಿಕಾರಿ ಪಕ್ಕದ ಕೊಠಡಿಯಲ್ಲಿ ಕುಳಿತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿ ಬಿಜೆಪಿಯ 'ಜೀ'ಗೆ ಕಳುಹಿಸುತ್ತಿದ್ದರು" ಎಂದು ಗಂಭೀರ ಆರೋಪ ಮಾಡಿದ್ದಾರೆ.

ʼಹಿರಿಯ ಐಎಎಸ್ ಅಧಿಕಾರಿಯೊಬ್ಬರು ಜಿಲ್ಲಾಧಿಕಾರಿಯಾಗಿ ಉತ್ತಮ ಕೆಲಸ ಮಾಡಿದ್ದರು. ಹಾಗಾಗಿ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಆ ಐಎಎಸ್ ಅಧಿಕಾರಿ ಇಚ್ಚಿಸಿ ವಿಪಕ್ಷ ನಾಯಕರ ಕಚೇರಿಗೆ ಬಂದು ಅಧಿಕಾರಿಯನ್ನು ಭೇಟಿ ಮಾಡುತ್ತಾರೆ. ಆ ಅಧಿಕಾರಿ ಪ್ರಾರಂಭದಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸುವ ಬಗ್ಗೆ ಭರವಸೆ ನೀಡುತ್ತಾರೆ. ಸ್ವಲ್ಪ ದಿನದ ನಂತರ ಐಎಎಸ್ ಅಧಿಕಾರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದಿಲ್ಲ ಎಂದು ಹೇಳಿ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎನ್ನುತ್ತಾರೆ. ಆ ಐಎಎಸ್ ಅಧಿಕಾರಿಯ ಸಮ್ಮುಖದಲ್ಲೇ ಸಿದ್ದರಾಮಯ್ಯರ ಅಧಿಕಾರಿ ಬಿಜೆಪಿಯ 'ಜೀ'ಗೆ ದೂರವಾಣಿ ಮೂಲಕ ಮಾತನಾಡುತ್ತಾರೆ. ಸಿದ್ದರಾಮಯ್ಯರ ಅಧಿಕಾರಿ 'ಜೀ'ಯವರಿಗೆ ನೇರ ಹೇಳಿದ ಮೇಲೆ ಬಿಜೆಪಿ ಟಿಕೆಟ್ ಪಕ್ಕಾ ಎಂದು ಅರಿತ ಆ ಐಎಎಸ್ ಅಧಿಕಾರಿ ತನ್ನ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗುತ್ತಾರೆ. ಅಷ್ಟರಲ್ಲಿ ಸಿದ್ದರಾಮಯ್ಯರ ಅಧಿಕಾರಿ ಮತ್ತೊಬ್ಬ ಬಿಜೆಪಿ ಅಭ್ಯರ್ಥಿಗೆ ಜೀ ಮೂಲಕ ಟಿಕೆಟ್ ಕೊಡಿಸಿರುವುದು ಅರಿವಿಗೆ ಬರುತ್ತದೆ. ಐಎಎಸ್ ಅಧಿಕಾರಿ ರಾಜೀನಾಮೆ ನೀಡುವುದರಿಂದ ಹಿಂದೆ ಸರಿಯುತ್ತಾರೆ. ಆ ಐಎಎಸ್ ಅಧಿಕಾರಿ ಈಗಲೂ ವೃತ್ತಿ ನಿರತರಾಗಿದ್ದಾರೆ. ಜೀ ಜೊತೆ ಸಂಪರ್ಕದಲ್ಲಿದ್ದು ಬಿಜೆಪಿ ಟಿಕೆಟ್ ಕೊಡಿಸುವ ಆ ಅಧಿಕಾರಿ ಮುಖ್ಯಮಂತ್ರಿಗಳ ಕಚೇರಿಯಲ್ಲಿದ್ದಾರೆʼ ಎಂದು ಉಲ್ಲೇಖಿಸಿದ್ದಾರೆ.

ʼಮುಖ್ಯಮಂತ್ರಿ ಕಚೇರಿ ಈ ಬಗ್ಗೆ ತನಿಖೆ ನಡೆಸಿದರೆ ಐಎಎಸ್ ಅಧಿಕಾರಿ ಮತ್ತು ಹಲವು ಜೀವಂತ ಸಾಕ್ಷಿಗಳು ತನಿಖಾ ತಂಡದ ಮುಂದೆ ಈ ಬಗ್ಗೆ ಸಾಕ್ಷ್ಯ ನುಡಿಯುತ್ತಾರೆ. ಕೋಮು ಗಲಭೆಗಳ ಸಂತ್ರಸ್ತರಿಗೆ ನ್ಯಾಯ ಯಾಕೆ ದೊರಕುತ್ತಿಲ್ಲ, ದ್ವೇಷ ಭಾಷಣಕಾರರಿಗೆ ಯಾಕೆ ಶಿಕ್ಷೆ ಆಗುತ್ತಿಲ್ಲ, ದಲಿತ-ಹಿಂದುಳಿದ ವರ್ಗದ ಹೋರಾಟಗಾರರ ನಿಯೋಗಗಳಿಗೆ ಯಾಕೆ ಸಿಎಂ ಕಚೇರಿ ಸ್ಪಂದಿಸಲ್ಲ, ಕೋಮುವಾದಿಗಳಿಗೆ ಸಿಎಂ ಕಚೇರಿ ಸದಾ ಬಾಗಿಲು ತೆಗೆದಿರುವುದು ಹೇಗೆ ಎಂಬುದಕ್ಕೆ ಉತ್ತರ ಇಲ್ಲಿದೆ. ಹಾಗಾಗಿ ಸಿಎಂ ಕಚೇರಿಯನ್ನು ಆರೆಸ್ಸೆಸ್‌ ಸಂಪರ್ಕ ಮುಕ್ತಗೊಳಿಸಬೇಕಿದೆʼ ಎಂದು ಅವರು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

Full View

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News