×
Ad

ಟ್ರಂಪ್ ಒಬ್ಬ ಸರ್ವಾಧಿಕಾರಿ, ಮೋದಿ ಅವರ ಗುಲಾಮ : ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

"ಟ್ರಂಪ್ ಜೊತೆ ಸ್ನೇಹ ಮಾಡಿಕೊಂಡು ಮೋದಿ ದೇಶವನ್ನೇ ಗಿರವಿ ಇಟ್ಟಿದ್ದಾರೆ"

Update: 2026-03-08 16:26 IST
ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ : "ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ಸರ್ವಾಧಿಕಾರಿ, ನರೇಂದ್ರ ಮೋದಿ ಅವರ ಗುಲಾಮರಾಗಿದ್ದಾರೆ" ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ಚಿತ್ತಾಪುರ ಪಟ್ಟಣದಲ್ಲಿ 1069 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ರಷ್ಯಾದಿಂದ ಈಗ ಒಂದು ತಿಂಗಳಿಗೆ ಮಾತ್ರ ತೈಲ ಖರೀದಿಗೆ ಅಮೆರಿಕ ಅನುಮತಿ ನೀಡಿದೆ. ಅಮೇರಿಕದವರು ಹೇಳಿದಂತೆ ಮೋದಿ ಕೇಳುತ್ತಿದ್ದಾರೆ. ಟ್ರಂಪ್ ಜೊತೆ ಸ್ನೇಹ ಮಾಡಿಕೊಂಡು ಮೋದಿ ನಮ್ಮ ದೇಶವನ್ನೇ ಗಿರಿವಿ ಇಟ್ಟಿದ್ದಾರೆ" ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶಾಂಗ ನೀತಿಯಿಂದಾಗಿ ನಮ್ಮ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಳುಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದ 75 ವರ್ಷ ಆದರೂ ಕೂಡಾ ನಮ್ಮ‌ ದೇಶದ‌ ತಂಟೆಗೆ ಯಾರೂ ಬಂದಿರಲಿಲ್ಲ. ಪಾಕಿಸ್ತಾನವನ್ನು ಒಡೆದು‌ ಎರಡು‌ ಭಾಗ ಮಾಡಿದರು. ಅವರಿಗೆ ಇದ್ದಂತ ಧೈರ್ಯ ನಿಮಗೇಕಿಲ್ಲ? ಎಂದು ಅವರು ಪ್ರಶ್ನಿಸಿದರು.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದದ ಬಗ್ಗೆ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ, ಜವಾಹರ್ ಲಾಲ್ ನೆಹರು ಪ್ರಧಾನಿಯಾಗಿದ್ದಾಗ ಅಲಿಪ್ತ ನೀತಿ ಅಳವಡಿಸಿಕೊಂಡಿದ್ದರಿಂದ ಅದು ವಿಶ್ವಶಾಂತಿಗೆ ಕಾರಣವಾಗಿತ್ತು. ಆದರೆ, ಮೋದಿ ಈಗ ಮಾಡುತ್ತಿರುವುದೇನು? ಮೋದಿ ಇಸ್ರೇಲ್‌ಗೆ ಹೋಗಿ ಬಂದ‌ ನಂತರ ಅದು ಇರಾನ್ ಮೇಲೆ‌ ಬಾಂಬ್ ಹಾಕಿತು. ದೇಶದ ಮುಖ್ಯಸ್ಥ ಖಾಮಿನೈಯನ್ನು ಅಮೆರಿಕದವರು ಹತ್ಯೆ ಮಾಡಿದರು.‌ ಒಂದು ದೇಶದ ಮುಖ್ಯಸ್ಥನನ್ನು ಹತ್ಯೆ ಮಾಡಿದರೆ, ಆ ದೇಶ ಶಾಂತಿಯಿಂದ ಇರುತ್ತದೆಯೇ? ಇದು ವಿಶ್ವಶಾಂತಿಯಿಂದ ಇರಲು ಸಾಧ್ಯವಾಗುತ್ತದೆಯಾ? ಎಂದು ಖರ್ಗೆ ಪ್ರಶ್ನಿಸಿದರು‌.

ಟ್ರಂಪ್ ನನ್ನ ಸ್ನೇಹಿತ ಎನ್ನುತ್ತಾರೆ. ಆದರೆ, ರಷ್ಯಾದಿಂದ ತೈಲ ಖರೀದಿ ಮಾಡಿದರೆ, ನಿಮ್ಮ ಮೇಲೆ ಟ್ಯಾಕ್ಸ್ ಹಾಕುತ್ತೇನೆ ಟ್ರಂಪ್ ಹೇಳುತ್ತಾರೆ. ಟ್ರಂಪ್ ಜೊತೆ ದಿನಾಲೂ ಮಾತನಾಡುತ್ತಿರುವುದಾಗಿ ಮೋದಿ ಹೇಳುತ್ತಾರೆ. ಟ್ಯಾಕ್ಸ್ ಹಾಕುವ ಬಗ್ಗೆನೇ ಮಾತನಾಡುತ್ತಾರಾ? ಎಫ್‌ಸ್ಟೀನ್‌ ಫೈಲ್‌ನಲ್ಲಿ ಮೋದಿ ಹೆಸರಿದೆ ಎನ್ನಲಾಗುತ್ತಿದೆ. ಅದನ್ನು ಇಟ್ಟುಕೊಂಡೇ ಟ್ರಂಪ್ ಮೋದಿಗೆ ಹೆದರಿಸುತ್ತಿದ್ದಾರೆ" ಎಂದರು.

"ಬಿಜೆಪಿಯವರಿಗಂತೂ ಕೆಲಸವೇ ಇಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ್‌, ಸಿದ್ದರಾಮಯ್ಯಗೆ ಹಾಗೂ ಶಿವಕುಮಾರ್‌ಗೆ ಬೈಯ್ಯುವುದೇ ಕೆಲಸವಾಗಿದೆ. ನಮ್ಮ ಸರಕಾರ‌ ಇದ್ದಾಗ ಮಾಡಿರುವ ಕೆಲಸಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಗದಗ ವಾಡಿ ರೈಲ್ವೆ ಲೈನ್, ರಸ್ತೆಗಳು, ಹೈವೈ ಗಳು ಮಾಡಿದ್ದು ನಾವೇ ಹೊರತು; ನೀವಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

"ಆರ್ಟಿಕಲ್ 371 ಜೆ ಜಾರಿಗೆ ತಂದಿದ್ದು ನಾವು. ನಮ್ಮ ಬೇಡಿಕೆಗೆ ಅಂದಿನ ಗೃಹ ಸಚಿವ ಅಡ್ವಾಣಿ ಸ್ಪಂದಿಸಲಿಲ್ಲ, ಎಂದು ಅಂದಿನ ಬಿಜೆಪಿಯ ಪ್ರತಿರೋಧವನ್ನು ನೆನಪಿಸಿಕೊಂಡ ಖರ್ಗೆ, ನಾನು ಅಂದಿನ ಸಂದರ್ಭದಲ್ಲಿ ನಮ್ಮ ಪರವಾಗಿರಲು 130 ಜನ ಎಂ.ಪಿಗಳಿಗೆ ಹೇಗೆ ಮನವೊಲಿಸಿದ್ದೇನೆ ಎಂದು ಅದು ನನಗೆ ಮಾತ್ರ ಗೊತ್ತು. ಆರ್ಟಿಕಲ್ 371 (ಜೆ) ನನಗೆ,‌ ನನ್ನ ಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ಅನುಕೂಲವಾಗಲ್ಲ. ಅದು ಅನುಕೂಲವಾಗುವುದು ಜನಸಾಮಾನ್ಯರಿಗೆ. ಇಂದು ಮೆಡಿಕಲ್, ಇಂಜಿನಿಯರಿಂಗ್ ಸೀಟು ಪಡೆದುಕೊಳ್ಳಲು ಅನುಕೂಲವಾಗಿದೆ" ಎಂದರು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್‌ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನೀವು ಸದಾ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಗೆ ಇನ್ನು ಇಪ್ಪತ್ತು ಸೀಟು ಬಂದಿದ್ದರೆ, ಮೋದಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ನಮ್ಮ ನಿರೀಕ್ಷೆಯಂತೆ ಸೀಟು ಬರಲಿಲ್ಲ. ಅದು ನಮ್ಮ ದುರ್ದೈವ. ನಮ್ಮ ಸೋಲನ್ನು‌ ಬಿಜೆಪಿಯವರು ಟೀಕಿಸುತ್ತಾರೆ. ಆದರೆ, ನಾವು ಜನರ ಪ್ರೀತಿ ವಿಶ್ವಾಸದಿಂದ ಮುಂದುವರೆಯುತ್ತೇವೆ ಎಂದರು.


"ದೇಶದ ಯುವಕರಲ್ಲಿ ಜಗಳ ಹಚ್ಚುವುದು ಹಾಗೂ ದ್ವೇಷ ಹರಡುವುದೇ‌ ಬಿಜೆಪಿ - ಆರೆಸ್ಸೆಸ್ ನವರ ಕೆಲಸವಾಗಿದೆ. ಶ್ರೀಮಂತರು ಹೇಗೋ ಬಚಾವಾಗುತ್ತಾರೆ. ಬಡವರು ಎಲ್ಲಿಗೆ ಹೋಗಬೇಕು? ಬಿಜೆಪಿ ಹಾಗೂ ಆರೆಸ್ಸೆಸ್ ನ ಕೆಲವರು ಬ್ರಿಟಿಷರ ಕೆಳಗೆ ಕೆಲಸ ಮಾಡುತ್ತಿದ್ದವರು. ಅವರು‌ ದೇಶದ ಸ್ವಾತಂತ್ರ್ಯಕ್ಕಾಗಿ ಹನಿ‌ ರಕ್ತ ಹರಿಸಿಲ್ಲ. ನಮ್ಮನ್ನು ಟೀಕಿಸುವವರು ಬಿಜೆಪಿ ಹಾಗೂ ಆರೆಸ್ಸೆಸ್ ನವರು. ಅವರ ಬಗ್ಗೆ ನೀವು ಎಚ್ಚರದಿಂದ ಇರಬೇಕು. ಅವರ ಮಾತಿಗೆ ಮರುಳಾಗಬಾರದು" ಎಂದು ಮಲ್ಲಿಕಾರ್ಜುನ್ ಖರ್ಗೆ ಎಚ್ಚರಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News