ಬರ ಪರಿಸ್ಥಿತಿ ಎದುರಿಸಲು ಸರಕಾರ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ : ಡಿಸಿಎಂ ಡಾ.ಜಿ.ಪರಮೇಶ್ವರ್
► "2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರಿನಲ್ಲೇ ನಿರ್ಮಾಣವಾಗಲಿ" ► ಬರ ನಿರ್ವಹಣೆಗೆ ಜಿಲ್ಲೆಗಳಿಗೆ ಪ್ರತಿ ಜಿಲ್ಲಾಧಿಕಾರಿಗೆ 5 ಕೋಟಿ ರೂ. ಬಿಡುಗಡೆ; ರಾಷ್ಟ್ರೀಯ ವಿಪತ್ತು ಘೋಷಣೆಗೆ ಕೇಂದ್ರಕ್ಕೆ ಪತ್ರ
ಡಾ.ಜಿ.ಪರಮೇಶ್ವರ್
ಬೆಂಗಳೂರು : ರಾಜ್ಯದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರಿನಲ್ಲಿ ನಿರ್ಮಾಣವಾಗಬೇಕು ಎಂಬುದು ತಮ್ಮ ಮೊದಲಿನಿಂದಲೂ ಇರುವ ಆಶಯ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರದ ಗೃಹ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಸಮಿತಿಯು ನೆಲಮಂಗಲದ ಕುಣಿಗಲ್ ರಸ್ತೆ ಹಾಗೂ ಬಿಡದಿ ಪ್ರದೇಶಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದ್ದು, ಡಿಜಿಸಿಎ ತಾಂತ್ರಿಕ ಪರಿಶೀಲನೆ ಬಳಿಕ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದರು.
ತುಮಕೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಸುಮಾರು 20 ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದ್ದು, ತಾಂತ್ರಿಕವಾಗಿಯೂ ಅದು ಸೂಕ್ತ ಸ್ಥಳವಾಗಿದೆ ಎಂದು ಹೇಳಿದರು.
ಬಿಡದಿ ಟೌನ್‌ಶಿಪ್ ವಿರುದ್ಧದ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರ ಅಭಿವೃದ್ಧಿಯ ದೃಷ್ಟಿಯಿಂದ ಯೋಜನೆ ಕೈಗೊಂಡಿದ್ದು, ಭೂಸ್ವಾಧೀನ ವಿಚಾರದಲ್ಲಿ ಯಾರ ಮೇಲೂ ಒತ್ತಾಯ ಮಾಡುವುದಿಲ್ಲ. ಮನವೊಲಿಸುವ ಮೂಲಕವೇ ಮುಂದುವರಿಯಲಾಗುವುದು ಎಂದು ತಿಳಿಸಿದರು.
ಇ-ಸ್ವತ್ತು ವಿತರಣೆಯನ್ನು ಕಂದಾಯ ಇಲಾಖೆಯ ಸಮನ್ವಯದಲ್ಲಿ ವೇಗಗೊಳಿಸಲಾಗುತ್ತಿದ್ದು, ಹಲವು ವರ್ಷಗಳಿಂದ ಬಾಕಿ ಉಳಿದಿರುವ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.
ರಾಜ್ಯದ ಬರ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ನೇತೃತ್ವದಲ್ಲಿ ವಿವಿಧ ಕಂದಾಯ ವಿಭಾಗಗಳ ಪ್ರಗತಿ ಪರಿಶೀಲನೆ ನಡೆಸಲಾಗಿದ್ದು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಅಗತ್ಯ ಕ್ರಮಗಳ ಕುರಿತು ಸೂಚನೆ ನೀಡಲಾಗುವುದು ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಪ್ರತಿ ಜಿಲ್ಲಾಧಿಕಾರಿಗೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಒಟ್ಟು 329 ಕೋಟಿ ರೂ. ಲಭ್ಯವಿದೆ. ಜೊತೆಗೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಗಳಲ್ಲಿ ಸುಮಾರು 600 ಕೋಟಿ ರೂ. ಇದ್ದು, ಅಗತ್ಯ ಸಂದರ್ಭಗಳಲ್ಲಿ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಬರ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ನಿಯಮಗಳನ್ನು ಸಡಿಲಿಸುವಂತೆ ಹಾಗೂ ದೇಶವನ್ನೇ ರಾಷ್ಟ್ರೀಯ ವಿಪತ್ತು ಪೀಡಿತ ಪ್ರದೇಶವೆಂದು ಘೋಷಿಸುವಂತೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದು, ಕೇವಲ ಪತ್ರ ಬರೆಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ವಿಪಕ್ಷದ ಟೀಕೆಗೆ ತಿರುಗೇಟು ನೀಡಿದರು.