ಬೀದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ನಿಲ್ಲಿಸಿ: ರಾಜ್ಯ ಸರಕಾರಕ್ಕೆ ಬಹಿರಂಗ ಪತ್ರ ಸಲ್ಲಿಕೆ
ಬೆಂಗಳೂರು: ಬೀದಿ ವ್ಯಾಪಾರಿಗಳ ಮೇಲಿನ ತೆರವು ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸುವುದು, ಟೌನ್ ವೆಂಡಿಂಗ್ ಸಮಿತಿಗಳನ್ನು ರಚಿಸುವುದು. ಬೀದಿ ವ್ಯಾಪಾರಿಗಳ ಅಧಿನಿಯಮ, 2014ರ ಅಡಿಯಲ್ಲಿ ಕಡ್ಡಾಯಗೊಳಿಸಲಾದ ರಕ್ಷಣೆಗಳನ್ನು ಅನುಷ್ಠಾನಗೊಳಿಸುವಂತೆ ಅನೇಕ ಸಾಹಿತಿ, ಕಲಾವಿದರು, ಹೋರಾಟಗಾರರ, ವಿದ್ಯಾರ್ಥಿಗಳು ಬೆಂಬಲಿಸಿರುವ ಪತ್ರವನ್ನು ಸರಕಾರಕ್ಕೆ ಕಳಿಸಲಾಗಿದೆ.
ಎರಡು ವಾರಗಳಿಂದ, ಸುರಕ್ಷಿತ ಕಾಲುದಾರಿಗಳನ್ನು ನಿರ್ಮಿಸುವ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಗರಾದ್ಯಂತ ಬೀದಿ ವ್ಯಾಪಾರಿಗಳನ್ನು ಬಲವಂತವಾಗಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದು, ಸಾವಿರಾರು ಬೀದಿ ವ್ಯಾಪಾರಿಗಳು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುವಂತಾಗಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಹೋರಾಟಗಾರರು ಹಾಗೂ ವಿದ್ಯಾರ್ಥಿಗಳು ಸೇರಿ ಒಂದು ಪತ್ರವನ್ನು ರಚಿಸಿ ಸಾರ್ವಜನಿಕರ ಬೆಂಬಲಕ್ಕಾಗಿ ಪ್ರಸಾರ ಮಾಡಿದ್ದು, ಬೀದಿ ವ್ಯಾಪಾರಿಗಳೊಂದಿಗೆ ಐಕ್ಯತೆ ವ್ಯಕ್ತಪಡಿಸುವುದರ ಜೊತೆಗೆ, ಬೀದಿ ವ್ಯಾಪಾರಿಗಳ (ಜೀವನೋಪಾಯದ ಸಂರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ಅಧಿನಿಯಮ, 2014ರ ಪರಿಣಾಮಕಾರಿ ಅನುಷ್ಠಾನಕ್ಕೆ ಆಗ್ರಹಿಸುವ ಉದ್ದೇಶದಿಂದ ಈ ಪತ್ರವನ್ನು ಕರ್ನಾಟಕದಾದ್ಯಂತ ವ್ಯಾಪಕವಾಗಿ ಹಂಚಲಾಗಿತ್ತು.
ಈ ಪತ್ರಕ್ಕೆ ನಿರ್ದೇಶಕಿ ಕವಿತಾ ಲಂಕೇಶ್, ಹಿರಿಯ ಹೋರಾಟಗಾರ್ತಿ ಡಾ.ವಿಜಯಮ್ಮ, ಭೌತಶಾಸ್ತ್ರಜ್ಞ ಪ್ರಜ್ವಲ್ ಶಾಸ್ತ್ರಿ, ಸಾಹಿತಿ ಡಾ.ರಹಮತ್ ತರೀಕೆರೆ, ನಟ ಪ್ರಕಾಶ್ ರಾಜ್, ರಂಗಕರ್ಮಿ ಲಕ್ಷ್ಮಣ್ ಕೆ.ಪಿ., ಡಾ.ಎ.ಎಸ್.ಪ್ರಬಾಕರ್, ಲೇಖಕಿ ರೂಪಾ ಹಾಸನ, ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಅಶ್ವಿನಿ ಕೆ.ಪಿ., ಜೆಸಿಟಿಯುನ ಸಂಚಾಲಕ ಕೆ.ವಿ.ಭಟ್, ಹಿರಿಯ ವಕೀಲ ಬಿ.ಟಿ.ವೆಂಕಟೇಶ್ ಬೆಂಬಲಿಸಿದ್ದಾರೆ.
ಶುಕ್ರವಾರ ಪತ್ರವನ್ನು ಹಾಗೂ ಸಂಪೂರ್ಣ ಬೆಂಬಲದಾರರ ಪಟ್ಟಿಯನ್ನು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಕೃಷ್ಣ ಬೈರೇಗೌಡ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರಿಗೆ ಇ-ಮೇಲ್ ಮೂಲಕ ಸಲ್ಲಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.