ಗ್ರೇಟರ್ ಬೆಂಗಳೂರು ಕಾಯ್ದೆ ಪ್ರಶ್ನಿಸಿ ಪಿಐಎಲ್ : ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
Update: 2025-07-21 18:11 IST
ಬೆಂಗಳೂರು : ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ (2025) ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಕುರಿತು ರಾಜ್ಯ ಸರಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಸಂಬಂಧ ಟಿ.ಎಸ್.ನಾಗಾಭರಣ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರ ಪರ ವಕೀಲರು, ಬಿಬಿಎಂಪಿಗೆ ಚುನಾವಣೆ ನಡೆದು 10 ವರ್ಷಗಳಾಗಿವೆ. ರಾಜ್ಯ ಸರಕಾರದ ಹೊಸ ಕಾಯಿದೆಯಿಂದ ಚುನಾವಣೆ ಮತ್ತಷ್ಟು ವಿಳಂಬವಾಗಲಿದೆ. ಸಂವಿಧಾನದ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಎಂ.ಬಿ.ನರಗುಂದ್ ವಾದ ಮಂಡಿಸಿದರು.
ವಾದ ಆಲಿಸಿದ ಪೀಠ ರಾಜ್ಯ ಸರಕಾರ, ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿ 4 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಸೂಚನೆ ನೀಡಿದೆ.