ದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕು. ಆಗಿರುವ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ವಿಜಯ್ ಚೌಕ್ ಬಳಿ ಶುಕ್ರವಾರ ನಡೆದ ಪ್ರತಿಭಟನೆಯ ಬಳಿಕ ಮಾತನಾಡಿದ ಅವರು, ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುತ್ತಿದ್ದರೂ ಮುಖ್ಯ ಚುನಾವಣಾ ಆಯುಕ್ತರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗುತ್ತಿಲ್ಲ ಎಂದರೆ ಇದರ ಅರ್ಥವೇನು? ಅವರು ತಪ್ಪು ಮಾಡಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ಎಂದು ಪ್ರಶ್ನಿಸಿದರು.

ಚುನಾವಣಾ ಆಯೋಗವು ಸಂವಿಧಾನವನ್ನು ರಕ್ಷಿಸುವ ಉದ್ದೇಶದಿಂದ ರಚಿಸಲಾದ ಸ್ವಾಯತ್ತ ಸಂಸ್ಥೆಯಾಗಿದೆ. ಎಲ್ಲರನ್ನೂ ಸಮಾನವಾಗಿ ನೋಡುವುದು ಆಯೋಗದ ಕರ್ತವ್ಯ. ವಿರೋಧ ಪಕ್ಷವೇ ಇಲ್ಲದೆ ಸರ್ಕಾರ ನಡೆಸುವುದನ್ನು ಯಾವುದೇ ಪ್ರಜಾಪ್ರಭುತ್ವ ಒಪ್ಪುವುದಿಲ್ಲ ಎಂದು ಹೇಳಿದರು.

ಜ್ಞಾನೇಶ್ ಕುಮಾರ್ ಅವರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿ ತಮ್ಮಿಂದ ತಪ್ಪಾಗಿದೆ ಎಂದು ಹೇಳಬೇಕು. ನಮ್ಮ ರಾಜ್ಯದಲ್ಲಿ ನಡೆದಿರುವ ಎಸ್‌ಐಆರ್‌ ಅಕ್ರಮಗಳ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಒಂದೇ ರಾತ್ರಿಯಲ್ಲಿ ಬದಲಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ಅನ್ಯಾಯದ ವಿರುದ್ಧ ಧ್ವನಿಯೆತ್ತಿದ ಸುಪ್ರೀಂ ಕೋರ್ಟ್‌ಗೆ ಧನ್ಯವಾದ :

ನಮೂನೆ-6ರ ಬದಲಾವಣೆಗೆ ಅನುಮತಿ ನೀಡಿಲ್ಲ ಎಂಬ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಚಾಟಿ ಬೀಸಿದೆ. ಈ ಅನ್ಯಾಯದ ವಿರುದ್ಧ ಧ್ವನಿಯೆತ್ತಿದ ನ್ಯಾಯಾಲಯಕ್ಕೆ ಧನ್ಯವಾದಗಳು. ಸುಪ್ರೀಂ ಕೋರ್ಟ್ ಮತ್ತೊಮ್ಮೆ ಮಧ್ಯಪ್ರವೇಶಿಸಿ ದೇಶ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂಬುದು ನಮ್ಮ ನಿರೀಕ್ಷೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಚುನಾವಣಾ ಆಯುಕ್ತರು ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಯಾಗಬಾರದು :

ಪ್ರಜಾಪ್ರಭುತ್ವ ಜೀವಂತವಾಗಿರಬೇಕು. ಪ್ರಧಾನಿಯವರು ಮುಖ್ಯ ಚುನಾವಣಾ ಆಯುಕ್ತರನ್ನು ಅವರ ಸ್ಥಾನದಿಂದ ಕೆಳಗಿಳಿಯುವಂತೆ ಸೂಚಿಸಬೇಕು. ಇದು ಪ್ರಧಾನಮಂತ್ರಿಯವರ ಕರ್ತವ್ಯ. ಚುನಾವಣಾ ಆಯುಕ್ತರನ್ನು ಇಂತಹ ವಿಷಯಗಳಲ್ಲಿ ಮುಂದುವರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವೇ ಹೇಳಿದೆ. ಚುನಾವಣಾ ಆಯುಕ್ತರು ಬಿಜೆಪಿಯ ಕೈಗೊಂಬೆಯಾಗಬಾರದು. ಯಾವುದೇ ರಾಜಕೀಯ ಪಕ್ಷದ ಸಾಧನವಾಗಿ ಕೆಲಸ ಮಾಡಬಾರದು ಎಂದು ಹೇಳಿದರು.

ಚುನಾವಣಾ ಆಯುಕ್ತರಂತಹ ಸಾಂವಿಧಾನಿಕ ಹುದ್ದೆಯಲ್ಲಿರುವವರು ಸಮತೋಲನ ಕಾಯ್ದುಕೊಳ್ಳಬೇಕು. ಆದರೆ ಅವರು ತಮ್ಮ ಸಮತೋಲನ ಕಳೆದುಕೊಂಡಿದ್ದಾರೆ. ಹೀಗಾಗಿ ಪ್ರಧಾನಿಯವರು ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಕೇಳುವ ವಿವೇಚನೆ ತೋರಿಸಲಿದ್ದಾರೆ ಎಂದು ಭಾವಿಸುತ್ತೇನೆ. ಈಗಿನ ಎಸ್‌ಐಆರ್‌ ಪ್ರಕ್ರಿಯೆಯನ್ನು ರದ್ದುಗೊಳಿಸಿ, ವಿರೋಧ ಪಕ್ಷದ ಎಲ್ಲ ನಾಯಕರೊಂದಿಗೆ ಚರ್ಚಿಸಬೇಕು. ಪ್ರಕ್ರಿಯೆ ಮುಕ್ತ ಮತ್ತು ನ್ಯಾಯಸಮ್ಮತವಾಗಿರುವುದನ್ನು ಖಚಿತಪಡಿಸುವುದರ ಜತೆಗೆ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ದೊರೆಯುವಂತಹ ಹೊಸ ನೀತಿಯನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ಮತದಾನದ ಹಕ್ಕು ಕಸಿಯಲು ಬಿಡುವುದಿಲ್ಲ :

ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಅವಕಾಶ ನೀಡುವುದಿಲ್ಲ. ಮತದಾನದ ಹಕ್ಕಿನ ರಕ್ಷಣೆಗಾಗಿ ರಾಜ್ಯದ ಪ್ರತಿ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರದಲ್ಲೂ ಜನಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವಿಚಾರದಲ್ಲಿ ನಡೆಯುತ್ತಿರುವ ಹೋರಾಟ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದುದಲ್ಲ. ಇದು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕು ಹಾಗೂ ಸಂವಿಧಾನದ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟವಾಗಿದೆ. ಅರ್ಹ ಮತದಾರರ ಹೆಸರುಗಳನ್ನು ಉಳಿಸುವ ಜತೆಗೆ ಅನರ್ಹ ಮತಗಳ ಸೇರ್ಪಡೆಯನ್ನೂ ತಡೆಯಬೇಕು. ಈ ನಿಟ್ಟಿನಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದರು.

ಮುಖ್ಯಮಂತ್ರಿಯಾಗಿ ಎಲ್ಲರೂ ತಮ್ಮ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಲು ಅಗತ್ಯ ಮಾರ್ಗದರ್ಶನ ಮತ್ತು ಸಹಕಾರ ನೀಡಿದ್ದೇನೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಲು ಅರ್ಹರು ನಮೂನೆ-6 ಸಲ್ಲಿಸಬಹುದು. ಕಾನೂನುಬದ್ಧವಾಗಿ ಅರ್ಹತೆ ಹೊಂದಿರುವ ಪ್ರತಿಯೊಬ್ಬರಿಗೂ ಮತದಾನದ ಅವಕಾಶ ಸಿಗಬೇಕು. ಮತದಾನದ ಹಕ್ಕಿನ ದುರುಪಯೋಗಕ್ಕೆ ಅವಕಾಶ ಇರಬಾರದು ಎಂದು ಹೇಳಿದರು.

ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ಹೋರಾಟ :

ಎಸ್‌ಐಆರ್‌ ವಿಚಾರದಲ್ಲಿ ರಾಷ್ಟ್ರಮಟ್ಟದಲ್ಲೂ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿವೆ. ದೆಹಲಿಯ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ವಿವಿಧ ಪಕ್ಷಗಳ ನಾಯಕರು ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ. ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವ ಮೂಲಕ ಮತದಾನದ ಹಕ್ಕಿನ ದುರುಪಯೋಗದ ಆರೋಪಗಳನ್ನು ಅವರ ಗಮನಕ್ಕೆ ತರಲು ಪ್ರತಿಪಕ್ಷಗಳ ಒಕ್ಕೂಟ ಮುಂದಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಕೇಂದ್ರ ಸರ್ಕಾರದ ಅವಧಿಯಲ್ಲಿ ಮತದಾನದ ಹಕ್ಕಿನ ದುರುಪಯೋಗ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ವಿವಿಧ ರಾಜ್ಯಗಳಲ್ಲೂ ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಎಲ್ಲ ವಿಚಾರಗಳನ್ನು ಪರಿಶೀಲಿಸಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ರಕ್ಷಿಸಬೇಕಿದೆ. ಹೀಗಾಗಿ ಎಲ್ಲ ಪಕ್ಷಗಳೂ ಒಗ್ಗಟ್ಟಿನಿಂದ ಹೋರಾಟ ನಡೆಸಲಿವೆ. ಒಗ್ಗಟ್ಟಿನಲ್ಲಿ ಶಕ್ತಿಯಿದೆ ಎಂದು ಹೇಳಿದರು.

ಪ್ರತಿ ಜಿಲ್ಲೆ, ಕ್ಷೇತ್ರದಲ್ಲೂ ಮತದಾರರಿಗೆ ಅರಿವು :

ರಾಜ್ಯದಲ್ಲಿ ಹೋರಾಟವನ್ನು ಮುಂದುವರಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರದಲ್ಲೂ ಜನಜಾಗೃತಿ ಮೂಡಿಸಲಾಗುವುದು ಎಂದರು.

ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪಕ್ಷದ ಮುಖಂಡರು ಮಾರ್ಗದರ್ಶನ ನೀಡಿದ್ದಾರೆ. ಅದರಂತೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸಲಾಗುವುದು. ಅರ್ಹ ಮತದಾರರ ಹೆಸರು ಕೈಬಿಟ್ಟಿದ್ದರೆ, ಸೂಕ್ತ ಕ್ರಮಗಳ ಮೂಲಕ ಅದನ್ನು ಸರಿಪಡಿಸಿಕೊಳ್ಳಲು ನೆರವಾಗಲಾಗುವುದು ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor