×
Ad

ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ NIA ಗೆ ವಹಿಸಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹ

Update: 2025-05-02 16:00 IST

ಮಾಧ್ಯಮವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

ಮಂಗಳೂರು: ಬಜ್ಪೆಯಲ್ಲಿ ಕೊಲೆಯಾದ ರೌಡಿ ಶೀಟರ್ ಸುಹಾಶ್ ಶೆಟ್ಟಿ ಮನೆಗೆ ಶುಕ್ರವಾರ ವಿಧಾನಸಭೆಯಲ್ಲಿನ ವಿಪಕ್ಷ ನಾಯಕ ಆರ್ ಅಶೋಕ್ ಜೊತೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ NIA ಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು,” ಸುಹಾಸ್ ಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ನಡೆದ ಈ ಘಟನೆ ಖಂಡನಾರ್ಹ. ಬಿಜೆಪಿಯು ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಸುಹಾಸ್ ಜೀವಕ್ಕೆ ಬೆದರಿಕೆ ಇದ್ದರೂ ರಕ್ಷಣೆ ಇಲ್ಲದಿರುವುದು ಪೊಲೀಸರ ವೈಫಲ್ಯ”, ಎಂದರು.

“ಈ ಘಟನೆಯಲ್ಲಿ ರಾಜ್ಯ ಸರಕಾರದ, ಗೃಹ ಇಲಾಖೆಯ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಸರಕಾರದ ನೀತಿಗಳಿಂದ ಹಿಂದೂ ಸಂಘಟನೆಗಳಿಗೆ, ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರಕಾರದ ಮೇಲೆ ವಿಶ್ವಾಸವೇ ಇಲ್ಲದಂತಾಗಿದೆ”, ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಸುಹಾಸ್ ಕುಟುಂಬಕ್ಕೆ ಧೈರ್ಯ ತುಂಬಿದ್ದೇವೆ. ಸಾಂತ್ವನ ಹೇಳಿದ್ದೇವೆ. ಕುಟುಂಬದ ಆಧಾರ ಸ್ಥಂಭವೇ ಕಳಚಿ ಬಿದ್ದಿದೆ. ಈ ಸಂದರ್ಭದಲ್ಲಿ ಆ ಬಡ ಕುಟುಂಬದ ಕೊತೆ ನಾವಿದ್ದೇವೆ. ಪಕ್ಷದ ಪರವಾಗಿ 25 ಲಕ್ಷ ರೂ. ಪರಿಹಾರ ಹಣವನ್ನು ಘೋಷಣೆ ಮಾಡುತ್ತಿದ್ದೇವೆ. ಘಟನೆಯ ಗಂಭೀರತೆ, ಕುಟುಂಬದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸರಕಾರವೂ ಪರಿಹಾರ ಘೋಷಣೆ ಮಾಡಬೇಕು”, ಎಂದು ಅವರು ಆಗ್ರಸಿದರು.

“ಈ ರೀತಿಯ ಘಟನೆ ಪದೇ ಪದೇ ಮರುಕಳಿಸುತ್ತಿದೆ. ಇಂತಹ ಘಟನೆಗಳು ನಡೆದಾಗ ರಾಜ್ಯ ಸರಕಾರ ಯಾವತ್ತೂ ಹಿಂದೂಪರ ಸಂಘಟನೆಗಳ ಪರವಾಗಿ ನಿಂತಿಲ್ಲ. ಸರಕಾರಕ್ಕೆ ಮನುಷ್ಯತ್ವ ಇದ್ದರೆ ಪರಿಹಾರ ಘೋಷಣೆ ಮಾಡಬೇಕು”, ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈವಿಜಯೇಂದ್ರ ಹೇಳಿದ್ದಾರೆ.

ಈ ಸಂದರ್ಭ ವಿಧಾನಸಭೆಯಲ್ಲಿನ ವಿಪಕ್ಷ ನಾಯಕ ಆರ್ ಅಶೋಕ್, ಶಾಸಕರಾದ ಭರತ್ ಶೆಟ್ಟಿ, ರಾಜೇಶ್ ನಾಯ್ಕ, ಯಶ್ ಪಾಲ್ ಸುವರ್ಣ, ಭಾಗೀರತಿ ಮುರುಳ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News