ಡಿಸಿಎಂ ಪರಮೇಶ್ವರ್, ಡಿಸಿ ಶುಭಾ ಕಲ್ಯಾಣ್ ಬಗ್ಗೆ ವಿಡಿಯೊ ಪ್ರಸಾರ; ಆರೋಪಿಗಳಿಗೆ ಹೈಕೋರ್ಟ್ ತರಾಟೆ
ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮತ್ತು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರ ಬಗ್ಗೆ 'ಡಿಟೆಕ್ಟಿವ್ ಲೆಜೆಂಡ್' ಯೂಟ್ಯೂಬ್ ಚಾನಲ್‌ನಲ್ಲಿ ಆಕ್ಷೇಪಾರ್ಹ ವಿಡಿಯೋ ಪ್ರಸಾರ ಮಾಡಿದ ಆರೋಪದಲ್ಲಿ ತುಮಕೂರಿನ ಸ್ಥಳೀಯ ಚಾನಲ್‌ನ ಇಬ್ಬರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣ ರದ್ದು ಕೋರಿ ಪ್ರಜಾಶಕ್ತಿ ಚಾನಲ್‌ನ ವ್ಯವಸ್ಥಾಪಕ ನಿರ್ದೇಶಕ ಶಬ್ಬೀರ್ ಪಾಷಾ ಮತ್ತು ಚಾನಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ. ಕುಸುಮಾ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿತು.
ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಪೀಠ, ಮೊದಲನೇ ಆರೋಪಿ ಬ್ರಹ್ಮಾನಂದ ರೆಡ್ಡಿ ವಿರುದ್ಧ ಆರೋಪ ಮಾಡಲಾಗಿದೆ. ನಿಮಗೇಕೆ ಭಯ. ಕಾರ್ಯಕ್ರಮದಲ್ಲಿನ ಹಿನ್ನೆಲೆ ಧ್ವನಿ ನಿಮ್ಮದು. ಉಪಮುಖ್ಯಮಂತ್ರಿಯವರು ಡಿಸಿಯನ್ನು ಲವ್ ಮಾಡ್ತಿದಾರೆ ಎಂದಿರುವುದು ನೀವು. ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಹೀಗೆ ಮಾತನಾಡಿದರೆ ಸುಮ್ಮನೆ ಇರುತ್ತೀರಾ? ನಿಮಗೆ ಮಾತ್ರ ಸಂವಿಧಾನದ ಪರಿಚ್ಛೇದ 21 ಇರುವುದೇ? ಅವರಿಗೆ ಇಲ್ಲವೇ? ಮಾಡೋದಕ್ಕೆ ಬೇರೆ ಕೆಲಸ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿತು.
ನಿಮ್ಮ ಧ್ವನಿಯನ್ನು ಸಂಗ್ರಹಿಸಿ, ಪರಿಶೀಲಿಸಿದ ಬಳಿಕವೇ ನಿಮ್ಮನ್ನು ಬಂಧಿಸಿರುವುದು. ಬೆಳಗ್ಗೆಯಿಂದ ರಾತ್ರಿಯ ತನಕ ಕಂಡೋರ ಮನೆ ಹಾಳು ಮಾಡುತ್ತೀರಾ? ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲವೇ? ಡಿಸಿಯಾಗಿರುವ ಹೆಣ್ಣು ಮಗಳನ್ನು ಮಂತ್ರಿಗಳ ಜತೆ (ಸಂಬಂಧ) ಕಟ್ಟಿದರೆ ಅವರಿಗೆ ಬೇಸರವಾಗುವುದಿಲ್ಲವೇ? ಅವರಿಗೆ ಮಕ್ಕಳಿಲ್ಲವೇ? ಸಂವಿಧಾನದ ಪರಿಚ್ಛೇದ 21 ಅವರಿಗೆ ಅನ್ವಯಿಸುವುದಿಲ್ಲವೇ? ಶಾಲೆಯಲ್ಲಿ ಮಗುವನ್ನು ನಿಮ್ಮ ಅಮ್ಮ ಮಿನಿಸ್ಟರ್ ಜತೆ ಹೀಗಂತೆ ಅಂದರೆ ಅವರಿಗೆ ಬೇಸರವಾಗುವುದಿಲ್ಲವೇ? ಘನತೆಯಿಂದ ಜೀವಿಸುವುದು ಬೇಡವೇ? ಒಬ್ಬರು ಜಿಲ್ಲಾಧಿಕಾರಿಯ ಮೇಲೆ ಹೀಗೆ ಹೇಳುತ್ತೀರಲ್ಲಾ ನಿಮಗೆ ಗೊತ್ತಾಗಬೇಡವೇ? ಎಂದು ಆಕ್ರೋಶ ವ್ಯಕ್ತಪಡಿಸಿತು.
ಮತ್ತೊಬ್ಬರ ಮನೆ ಮುರಿಯುವ ಕೆಲಸ ಮಾಡಬೇಡಿ. ಎಲ್ಲರ ಮನೆಯ ಹೆಣ್ಣು ಮಕ್ಕಳು ಗೌರವಸ್ಥರು. ಒಬ್ಬ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೇ ಹೀಗೆ ಹೇಳಿದರೆ, ನಾಳೆ ನಮಗೂ ಹೇಳ್ತಾರೆ. ನಿಮಗೆ ಹೆಣ್ಣು ಮಕ್ಕಳು ಇರ್ತಾರೆ, ತಾಯಿ, ಹೆಂಡತಿ ಇರ್ತಾರೆ. ಎಲ್ಲರನ್ನೂ ಕಾಯುವುದು ನಮ್ಮ ಜವಾಬ್ದಾರಿ. ಹಾಗೆಲ್ಲ ಅವರಿವರ ಮೇಲೆಲ್ಲ ಹೇಳಬಾರದು. ಏನು ಪಾಪ ಮಾಡಿದ್ದಾರೆ ಡಿಸಿ? ಹೆಣ್ಣು ಮಗಳಾಗಿರುವುದೇ ತಪ್ಪೇ? ಮಿನಿಸ್ಟರ್ ಮೀಟಿಂಗ್ ಕರೆದರೆ ಹೋಗಬಾರದೇ? ಅಲ್ಲಿ ನಾಲ್ಕು ಮಾತನಾಡಿರಬಾರದೇ? ನಮ್ಮ ನೆಚ್ಚಿನ ಉಪಮುಖ್ಯಮಂತ್ರಿಗಳು ಇದನ್ನೆಲ್ಲ ಮಾಡಿಕೊಟ್ಟಿದ್ದಾರೆ ಎಂದು ಹೇಳಿರುತ್ತಾರೆ. ಅದಕ್ಕೇ ನೀವು ಲವ್ ಅಫೇರ್ ಎಂದರೆ ಹೇಗೆ? ಎಂದು ಬೇಸರಿಸಿತು.
ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಸೂರ್ಯ ಮುಕುಂದರಾಜ್ ಅವರನ್ನು ಕುರಿತು, ಒಂದೇ ವಿಚಾರಕ್ಕೆ ನಾಲ್ಕು ದೂರು ಏಕೆ ದಾಖಲಿಸುತ್ತೀರಿ? ಈಗಾಗಲೇ ಪ್ರಕರಣ ಆಗಿರುವುದರಿಂದ ಇನ್ನೊಂದು ದೂರನ್ನು ಸಾಕ್ಷಿಯಾಗಿ ಮಾಡಬೇಕಿತ್ತು. ಎಫ್‌ಐಆರ್‌ಗೆ ಬೆಲೆ ಇಲ್ಲವೇ? ಫಸ್ಟ್ ಇನ್ಪರ್ಮೇಶನ್ ಎಂದರೇನು? ಒಂದು ಘಟನೆಯ ಬಗ್ಗೆ ಐವತ್ತು ಜನ ಬಂದು ಹೇಳ್ತಾರೆ, ಮುಂದೆ ಬರೋರೆಲ್ಲರೂ ಸಾಕ್ಷಿಯಷ್ಟೆ. ಯಾಕೆ ಠಾಣಾಧಿಕಾರಿ ಅಯೋಗ್ಯ ಎಫ್‌ಐಆರ್ ಮಾಡಿದ್ದಾನೆ. ಜ್ಞಾನ ಇರಲಿಲ್ಲವೇ? ಇದೇನು ನಿಮ್ಮ ಪೊಲೀಸಿಂಗ್? ಎಂದು ನ್ಯಾಯಪೀಠ ಕಿಡಿಕಾರಿತು.
ಕೊರಟಗೆರೆ ಮತ್ತು ವಿಧಾನಸೌಧ ಠಾಣೆಯಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಯಾವುದನ್ನು ಉಳಿಸಿಕೊಂಡು ತನಿಖೆ ಮುಂದುವರಿಸಲಾಗುತ್ತದೆ ಎಂಬುದರ ಸಂಬಂಧ ಮೆಮೊ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿತು.