ಸರಕಾರಿ ನಿವಾಸಕ್ಕಾಗಿ ಹಾಲಿ-ಮಾಜಿ ಸಚಿವರ ಮಧ್ಯೆ ಜಟಾಪಟಿ!
ಬೈರತಿ ಸುರೇಶ್ / ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು: ಸರಕಾರಿ ನಿವಾಸಕ್ಕಾಗಿ ಮಾಜಿ ಹಾಗೂ ಹಾಲಿ ಸಚಿವರ ಮಧ್ಯೆ ಜಟಾಪಟಿ ಆರಂಭವಾಗಿದ್ದು, ‘ಸರಕಾರಿ ನಿವಾಸವನ್ನು ಕೂಡಲೇ ಖಾಲಿ ಮಾಡಬೇಕು’ ಎಂದು ಹಾಲಿ ಸಚಿವರು ಒತ್ತಡ ಹೇರುತ್ತಿದ್ದಾರೆಂಬ ಎಂಬ ಆರೋಪ ಕೇಳಿಬಂದಿದೆ.
ಇಲ್ಲಿನ ರೇಸ್‍ಕೋರ್ಸ್ ಸಮೀಪದ ಕ್ರೆಸಂಟ್ ರಸ್ತೆಯಲ್ಲಿರುವ ಸರಕಾರಿ ನಿವಾಸದಲ್ಲಿ ಸಚಿವರಾಗಿದ್ದ ಅವಧಿಯಲ್ಲಿ ಡಾ.ಎಚ್.ಸಿ.ಮಹದೇವಪ್ಪ ವಾಸ್ತವ್ಯ ಹೂಡಿದ್ದರು. ಆದರೆ, ಇದೀಗ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಹೀಗಾಗಿ ಈ ನಿವಾಸವನ್ನು ನೂತನ ಸಚಿವ ಬೈರತಿ ಸುರೇಶ್ ಅವರಿಗೆ ಹಂಚಿಕೆ ಮಾಡಲಾಗಿದೆ.
ಆದರೆ, ನಿಯಮಾವಳಿ ಪ್ರಕಾರ ನಿವಾಸ ತೊರೆಯಲು ಕಾಲಾವಕಾಶ ತೆಗೆದುಕೊಳ್ಳಬಹುದಾಗಿದೆ. ಹೀಗಿದ್ದರೂ, ಸರಕಾರಿ ನಿವಾಸ ಖಾಲಿ ಮಾಡುವಂತೆ ಅನಗತ್ಯ ಒತ್ತಡ ಎಂಬ ಆರೋಪ ಕೇಳಿ ಬಂದಿದೆ. ಮಾಜಿ ಸಚಿವ ಡಾ.ಮಹದೇವಪ್ಪ ಅವರಿಗೆ ಸಚಿವ ಬೈರತಿ ಸುರೇಶ್ ಒತ್ತಡ ಹೇರಿದ್ದಾರೆ ಎಂದು ಹೇಳಲಾಗಿದೆ.
ಸರಕಾರಿ ನಿವಾಸದಲ್ಲಿ ಮಾಜಿ ಸಚಿವ ಡಾ.ಮಹದೇವಪ್ಪ ವಾಸವಿರುವಾಗಲೇ ಹೊಸ ಸಚಿವರ ಅನುಕೂಲಕ್ಕಾಗಿ ಕಾಮಗಾರಿ ನಡೆಸಲು ಸಿಬ್ಬಂದಿ ಮುಂದಾಗಿದ್ದಾರೆ. ಮಾಜಿ ಸಚಿವರ ಸರಕಾರಿ ನಿವಾಸದ ಸಂದರ್ಶಕರ ಕೊಠಡಿ, ಮೀಟಿಂಗ್ ಹಾಲ್ ಒಡೆದು ಹಾಕಲಾಗಿದೆ. ಅಲ್ಲದೆ, ನವೀಕರಣ ಕಾಮಗಾರಿಗೆ ಮುಂದಾಗಿದ್ದಾರೆ.
ನಿಯಮದ ಪ್ರಕಾರ ಮನೆ ಖಾಲಿ ಮಾಡಲು ಇನ್ನೂ ಸಮಯವಿದೆ. ಹೀಗಿದ್ದಾಗಲೂ ಡಾ.ಮಹದೇವಪ್ಪ ಅವರ ಸರಕಾರಿ ನಿವಾಸದ ಮೀಟಿಂಗ್ ಕೊಠಡಿಯನ್ನು ಸಚಿವ ಬೈರತಿ ಸುರೇಶ್ ಸೂಚನೆಯಂತೆ ನವೀಕರಣಕ್ಕೆ ಮುಂದಾಗಿದ್ದಾರೆ. ಅಲ್ಲದೆ, ಸುಣ್ಣ-ಬಣ್ಣ ಮಾಡಲಾಗುತ್ತಿದೆ. ಹೀಗಾಗಿ ಬೈರತಿ ಸುರೇಶ್ ಸಿಬ್ಬಂದಿ ಹಾಗೂ ಡಾ.ಮಹದೇವಪ್ಪ ಸಿಬ್ಬಂದಿ ನಡುವೆ ಮಾತಿನ ಚಕಮಕಿಯೂ ನಡೆದಿದೆ ಎಂದು ಗೊತ್ತಾಗಿದೆ.
ಮನೆ ಸಿಕ್ಕಿ ಕೂಡಲೇ ಖಾಲಿ: ‘ನಾನಿರುವ ನಿವಾಸ ಸಚಿವ ಬೈರತಿ ಸುರೇಶ್ ಅವರಿಗೆ ಹಂಚಿಕೆ ಮಾಡಲಾಗಿದೆ. ನಾನು ಸದ್ಯ ಬಾಡಿಗೆ ಮನೆ ಹುಡುಕಾಟದಲ್ಲಿದ್ದು, ಮನೆ ಸಿಕ್ಕ ಕೂಡಲೇ ಸರಕಾರಿ ನಿವಾಸವನ್ನು ಖಾಲಿ ಮಾಡುತ್ತೇನೆ. ಸಚಿವರು ಬೇಗನೆ ಮನೆಗೆ ಬರಲು ಪ್ರಯತ್ನ ನಡೆಸಿದ್ದು, ಇದರಲ್ಲಿ ತಪ್ಪೇನು ಇಲ್ಲ’ ಎಂದು ಮಾಜಿ ಸಚಿವ ಡಾ.ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.