ಜೆಡಿಎಸ್ ರಾಷ್ಟ್ರೀಯಾಧ್ಯಕ್ಷ ಎಚ್.ಡಿ.ದೇವೇಗೌಡ

ಬೆಂಗಳೂರು: ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್(ಬಿಎಂಐಸಿ) ಯೋಜನೆಯ ಅನುಷ್ಠಾನದಲ್ಲಿ ಬಹುಕೋಟಿ ರೂ.ಹಗರಣ ನಡೆದಿದ್ದು, ಈ ವಿಚಾರದಲ್ಲಿ ಅಂತಿಮ ಘಟ್ಟ ತಲುಪುವವರೆಗೆ ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯಾಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಸೋಮವಾರ ನಗರದ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಎಂಐಸಿ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನ ನೀಡುವ ಕುರಿತು ಸಚಿವ ಸಂಪುಟ ಕೈಗೊಂಡಿರುವ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬರೆದಿರುವ ಬಹಿರಂಗ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ರೈತರಿಗೆ ನ್ಯಾಯ ಒದಗಿಸಲು ಜೆಡಿಎಸ್ ಶಕ್ತಿ ಮೀರಿ ಹೋರಾಟ ನಡೆಸಲಿದೆ. ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.

ನೈಸ್ ಸಂಸ್ಥೆಯನ್ನು ಸರಕಾರದ ವಶಕ್ಕೆ ಪಡೆಯಲು ಹಲವರು ಪ್ರಯತ್ನಿಸಿದ್ದಾರೆ. ಆದರೆ, ಮೂಲ ಒಪ್ಪಂದದಂತೆ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿಲ್ಲ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೈಸ್ ಸಂಸ್ಥೆಯನ್ನು ಟೇಕ್‍ಓವರ್ ಮಾಡುತ್ತಿದ್ದಾರೆ ಎಂದು ತಮ್ಮ ಬಳಿಯಿರುವ ದಾಖಲೆಗಳ ಆಧಾರದ ಮೇಲೆ ಹೇಳಿರಬಹುದು. ನನ್ನ ಬಳಿಯೂ ಸಾಕಷ್ಟು ಪುರಾವೆಗಳಿವೆ. ನ್ಯಾಯಾಲಯದ ತೀರ್ಪುಗಳನ್ನು ಆಧರಿಸಿ ಮುಖ್ಯಮಂತ್ರಿಗೆ ಬಹಿರಂಗ ಪತ್ರ ಬರೆದಿದ್ದೇನೆ. ಮೂರು-ನಾಲ್ಕು ದಿನ ಕಾದು ಸರಕಾರದ ಪ್ರತಿಕ್ರಿಯೆ ನೋಡುತ್ತೇನೆ. ಬಳಿಕ ಪಕ್ಷದ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದರು.

ಬಿಎಂಐಸಿ ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ 1,453 ನಿವೇಶನಗಳನ್ನು ಹಂಚಿಕೆ ಮಾಡಲು ನೈಸ್ ಸಂಸ್ಥೆಗೆ ನಿರ್ದೇಶನ ನೀಡಲಾಗಿದೆ ಹಾಗೂ ಇದಕ್ಕೆ ಸುಪ್ರೀಂಕೋರ್ಟ್ ತೀರ್ಪಿನ ಅನುಮೋದನೆ ಇದೆ ಎಂದು ಸರಕಾರ ನಂಬಿರುವುದು ವ್ಯಾಪಕವಾಗಿ ವರದಿಯಾಗಿದೆ. ಆದರೆ, ಸಚಿವ ಸಂಪುಟದ ನಿರ್ಧಾರವು ಕಾನೂನು ಮತ್ತು ಈ ಹಿಂದಿನ ಸರ್ಕಾರದ ನಿಲುವಿಗೆ ವಿರುದ್ಧವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ದೇವೇಗೌಡ ಹೇಳಿದರು.

ಅದರಲ್ಲೂ 2016ರಲ್ಲಿ ಜೆಡಿಎಸ್ ಅಧಿಕಾರದಲ್ಲಿದ್ದಾಗ ಸರಕಾರವೇ ಸುಪ್ರೀಂಕೋರ್ಟ್‍ನಲ್ಲಿ ನ್ಯಾಯಾಂಗ ನಿಂದನೆ ಪ್ರಕ್ರಿಯೆಯ ವೇಳೆ ಎರಡು ಪ್ರಮಾಣಪತ್ರಗಳನ್ನು ಸಲ್ಲಿಸಿತ್ತು. ಇಂಟರ್‍ಚೇಂಜ್‍ಗಳಲ್ಲಿ ನಿವೇಶನಗಳ ರಚನೆಗೆ ಅನುಮೋದನೆ ನೀಡುವುದು ಮೂಲ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ಆಗ ಸರಕಾರ ತಿಳಿಸಿತ್ತು. ಹಾಗಿದ್ದರೆ ಇದೀಗ ಭೂಮಿ ಕಳೆದುಕೊಂಡವರಿಗೆ ನಿವೇಶನ ಹಂಚಿಕೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದರ ಅರ್ಥವೇನು ಎಂದು ಕೇಳಿದ ಅವರು, ಮಾದಾವರ, ಕೊಡಿಗೇಹಳ್ಳಿ, ಕೆಂಗೇರಿ, ಕೊಮ್ಮಘಟ್ಟ, ವರಾಹಸಂದ್ರ, ಸೋಂಪುರ, ಪಿಳ್ಳಗಾನಹಳ್ಳಿ, ಕೆಮತನಹಳ್ಳಿ, ಯು.ಎಂ.ಕಾವಲ್, ಚಿಕ್ಕತೋಗೂರು, ಪಂಥರಪಾಳ್ಯ, ಕೆ.ಜಿ. ಶ್ರೀಕಂಠಪುರ ಹಾಗೂ ಗಂಗೊಂಡನಹಳ್ಳಿ ಗ್ರಾಮಗಳಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ವರದಿಯಾಗಿದೆ. ಈ ಗ್ರಾಮಗಳಲ್ಲಿನ ಭೂಮಿ ಬಿಎಂಐಸಿ ರಸ್ತೆ ಹಾಗೂ ಮೂಲಸೌಕರ್ಯ ಘಟಕದ ವ್ಯಾಪ್ತಿಗೆ ಬರುತ್ತದೆ ಎಂಬುದು ಸಾರ್ವಜನಿಕ ದಾಖಲೆಗಳಲ್ಲಿ ಇದೆ ಎಂದು ತಿಳಿಸಿದರು.

ಹಂಚಿಕೆ ಮಾಡಬೇಕಿರುವ ನಿವೇಶನಗಳನ್ನು ಯಾವಾಗ ರಚಿಸಲಾಯಿತು? ಅವುಗಳ ರಚನೆಗೆ ಅನುಮೋದನೆ ನೀಡಿದವರು ಯಾರು? ಎಂಬುದಕ್ಕೆ ಸರಕಾರ ಸ್ಪಷ್ಟನೆ ನೀಡಬೇಕು ಎಂದ ಅವರು, ಸಚಿವ ಸಂಪುಟದ ನಿರ್ಧಾರವು ಸುಪ್ರೀಂಕೋರ್ಟ್ ತೀರ್ಪು ಹಾಗೂ ಕಳೆದ ಒಂದು ದಶಕದಿಂದ ಸರಕಾರ ಹೊಂದಿದ್ದ ನಿಲುವಿಗೆ ವಿರುದ್ಧವಾಗಿದೆಯೇ? ನಿವೇಶನಗಳ ನಿಜವಾದ ಫಲಾನುಭವಿಗಳು ಭೂಮಿ ಕಳೆದುಕೊಂಡ ರೈತರೇ ಅಥವಾ ನೈಸ್ ಸಂಸ್ಥೆ ಹಾಗೂ ಅದರ ಹೂಡಿಕೆದಾರರೇ? ಸಚಿವ ಸಂಪುಟದಲ್ಲಿ ನೈಸ್ ಹೂಡಿಕೆದಾರರ ಹಿತಾಸಕ್ತಿ ಹೊಂದಿರುವವರು ಯಾರಾದರೂ ಇದ್ದಾರೆಯೇ? ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಜುಲೈ 2026ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠವು ಕಂಪೆನಿಯ ಬ್ಯಾಲೆನ್ಸ್‍ಶೀಟ್‍ಗಳಲ್ಲಿ ಭೂಮಿ ಮಾರಾಟದ ಮುಂಗಡ ಹಾಗೂ 36 ಕೋಟಿ ರೂಪಾಯಿಯಿಂದ 48 ಕೋಟಿ ರೂಪಾಯಿವರೆಗಿನ ಜಂಟಿ ಅಭಿವೃದ್ಧಿ ಒಪ್ಪಂದಗಳ ವಿವರಗಳು ನಿರಂತರವಾಗಿ ಬಹಿರಂಗಗೊಂಡಿರುವುದನ್ನು ಗಮನಿಸಿದೆ. ಒಟ್ಟಿನಲ್ಲಿ ನಿವೇಶನ ಹಂಚಿಕೆಯ ಹೆಸರಿನಲ್ಲಿ ಬೆಲೆಬಾಳುವ ಭೂಮಿಯನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಬಿಎಂಐಸಿ ಯೋಜನೆ ಹಾಗೂ ಕಾವೇರಿ ನದಿ ನೀರು ಹಂಚಿಕೆ ವಿಚಾರಗಳನ್ನು ತಾಳೆ ಹಾಕಬಾರದು. ಎರಡೂ ಸಂಪೂರ್ಣ ಭಿನ್ನವಾದ ವಿಚಾರಗಳಾಗಿವೆ ಎಂದು ಅವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎನ್.ಜವರಾಯಿಗೌಡ, ಮಾಜಿ ಶಾಸಕರಾದ ಅಖಂಡ ಶ್ರೀನಿವಾಸ ಮೂರ್ತಿ, ಕೃಷ್ಣಪ್ಪ, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್, ನಗರ ಜೆಡಿಎಸ್ ಅಧ್ಯಕ್ಷ ಶೈಲಜಾ ರಾವ್, ರಾಜ್ಯ ವಕ್ತಾರರಾದ ದೇವರಾಜ್ ಮತ್ತು ಪ್ರದೀಪ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.


ಕಾನೂನು ಚೌಕಟ್ಟಿನಲ್ಲೇ ಕ್ರಮ: ಸಿಎಂ ಡಿ.ಕೆ.ಶಿವಕುಮಾರ್

ನೈಸ್ ಯೋಜನೆ ಕುರಿತಂತೆ ನಾವು ಯಾವುದೇ ನಿರ್ಧಾರ ಕೈಗೊಂಡರೂ ಕಾನೂನು ಚೌಕಟ್ಟಿನಲ್ಲೇ ಕ್ರಮ ಕೈಗೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಏನು ಮಾಡಿದರೂ ಕಾನೂನು ಚೌಕಟ್ಟಿನಲ್ಲೇ ಮಾಡುತ್ತೇವೆ. ಕಾನೂನು ಅಭಿಪ್ರಾಯ ಪಡೆದುಕೊಳ್ಳುತ್ತೇವೆ. ಎಲ್ಲವನ್ನೂ ಮರುಪರಿಶೀಲನೆ ಮಾಡುತ್ತಿದ್ದೇವೆ. ಕಾನೂನು ಬಿಟ್ಟು ಏನನ್ನೂ ಮಾಡುವುದಿಲ್ಲ. ಕಾನೂನು ಉಲ್ಲಂಘನೆಯಾಗಿದ್ದರೆ ಕೋರ್ಟ್ ಇದೆ, ಹೋರಾಟ ಮಾಡಲಿ ಎಂದು ಹೇಳಿದರು.

ರೈತರು ಆಸ್ತಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ರಕ್ಷಿಸುವುದು ಸರಕಾರದ ಜವಾಬ್ದಾರಿ. ಹಿಂದಿನ ಸರಕಾರಗಳು ಒಪ್ಪಂದಗಳಿಗೆ ಸಹಿ ಮಾಡಿ ಕೊಟ್ಟಿವೆ. ರೈತರು ಆಸ್ತಿ ಕಳೆದುಕೊಂಡಿದ್ದಾರೆ. ಅವರನ್ನು ರಕ್ಷಣೆ ಮಾಡಬೇಕು. ನನಗೂ ಪ್ರಜ್ಞೆ ಇದೆ. ಮನುಷ್ಯ ವಿದ್ಯಾವಂತನಾಗಿರದಿದ್ದರೂ ಬುದ್ಧಿವಂತನಾಗಿರಬೇಕು, ಸಾಮಾನ್ಯ ಪ್ರಜ್ಞೆ ಇರಬೇಕು ಎಂದು ತಿರುಗೇಟು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor