×
Ad

ಭಯೋತ್ಪಾದನೆ ನಿಗ್ರಹ: ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ಎಚ್.ಡಿ. ದೇವೇಗೌಡ

Update: 2025-05-06 18:16 IST

ಹೊಸದಿಲ್ಲಿ: ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಳ್ಳುತ್ತಿರುವ ಎಲ್ಲಾ ಕ್ರಮಗಳನ್ನು ಬೆಂಬಲಿಸುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಘೋಷಿಸಿದರು.

ಮಂಗಳವಾರ ಹೊಸದಿಲ್ಲಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಘಟನೆ ಅಮಾನವೀಯ. ಮೊದಲ ಬಾರಿಗೆ ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ಮಾಡಿದ್ದಾರೆ. ಇದು ಅತ್ಯಂತ ಹೇಯ. ಈ ಕೆಲಸ ಮಾಡಿದವರಿಗೆ ತಕ್ಕ ಶಾಸ್ತಿ ಆಗಲೇಬೇಕು. ಈ ಹಿನ್ನೆಲೆಯಲ್ಲಿ ಪ್ರಧಾನಿ ಕೈಗೊಳ್ಳುವ ನಿರ್ಧಾರಕ್ಕೆ ಜೆಡಿಎಸ್ ಬದ್ಧವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.

ರಕ್ಷಣಾ ಪಡೆಗಳಿಗೆ ಮೋದಿ ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆ. ಮೊದಲ ಬಾರಿಗೆ ದೇಶದ ಪ್ರಧಾನಿ ಇಂತಹ ದಿಟ್ಟ ನಿರ್ಧಾರ ಮಾಡಿದ್ದಾರೆ. ಇತಿಹಾಸದಲ್ಲಿ ಈ ರೀತಿ ಎಂದೂ ನಿರ್ಧಾರ ಆಗಿರಲಿಲ್ಲ. ಗೃಹ, ರಕ್ಷಣೆ ಹಾಗೂ ವಿದೇಶಾಂಗ ಖಾತೆಗಳನ್ನು ನಿಭಾಯಿಸುತ್ತಿರುವ ಸಚಿವರು ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಇಡೀ ದೇಶ ಪ್ರಧಾನಿ ಮೋದಿ ಜೊತೆ ನಿಂತಿದೆ. ಎಲ್ಲಾ ರಾಜಕೀಯ ಪಕ್ಷಗಳು ಮೋದಿಯವರ ನಿರ್ಧಾರವನ್ನು ಬೆಂಬಲಿಸಿವೆ. ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಪಾಕಿಸ್ತಾನ ಪ್ರೇರಿತ ಉಗ್ರರನ್ನು ಸದೆಬಡಿಯುವವರೆಗೆ ವಿರಮಿಸುವುದಿಲ್ಲ ಎಂದು ಮೋದಿ ಹೇಳಿದ್ದಾರೆ. ನಾನು, ನಮ್ಮ ಪಕ್ಷ, ಇಡೀ ದೇಶ ಪ್ರಧಾನಿ ಮೋದಿ ಜೊತೆಗಿರುತ್ತೆ ಎಂದು ಅವರು ಹೇಳಿದರು.

1971ರ ಯುದ್ಧ ಕಾಲಕ್ಕೂ ಈಗಿನ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಹೋಲಿಕೆ ಮಾಡಲು ಸಾಧ್ಯವಿಲ್ಲ. ಭಾರತ ಅಗಾಧವಾಗಿ ಬೆಳೆದಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶವು ಸಾಕಷ್ಟು ಅಭಿವೃದ್ಧಿ, ಬದಲಾವಣೆಯನ್ನು ಕಂಡಿದೆ ಎಂದ ಅವರು, ಇಲ್ಲಿ ಹಿಂದೂ, ಮುಸ್ಲಿಮ್, ಧರ್ಮ, ಜಾತಿಯ ಪ್ರಶ್ನೆ ಉದ್ಭವವಾಗುವುದಿಲ್ಲ. ದೇಶದ ಭದ್ರತೆ ಮುಖ್ಯ. ಯುದ್ಧ ಮಾಡಬೇಕೋ ಬೇಡವೋ ಎನ್ನುವ ನಿರ್ಧಾರವನ್ನು ಸೇನೆಗೆ ಬಿಡಲಾಗಿದೆ. ಮೂರು ಸೇನೆಗಳ ಮುಖ್ಯಸ್ಥರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ದೇವೇಗೌಡ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News