ಬೆಂಗಳೂರು : ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಮತ್ತು ಸದಸ್ಯರ ನಡುವೆ ಭಿನ್ನಾಭಿಪ್ರಾಯ ಯಾವ ಕಾರಣಕ್ಕೆ ಬಂದಿದೆ. ಇದರ ಹಿಂದಿನ ಸತ್ಯಾಸತ್ಯತೆ ಏನು ಎಂಬುದನ್ನು ಚುನಾವಣಾ ಆಯೋಗವೇ ದೇಶದ ಜನತೆಯ ಮುಂದೆ ಹೇಳಬೇಕು ಮತ್ತು ತನ್ನ ಸಂಸ್ಥೆಯ ಗೌರವವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಚುನಾವಣಾ ಆಯೋಗದೊಳಗೆ ಏನೆಲ್ಲಾ ನಡೆಯುತ್ತಿದೆಯೆಂಬ ಬಗ್ಗೆ ವಿವರಿಸುವುದು ಚುನಾವಣಾ ಆಯೋಗದ ಹೊಣೆಗಾರಿಕೆಯಾಗಿದೆ ಎಂದವರು ಹೇಳಿದರು.

ಕೇಂದ್ರೀಯ ಚುನಾವಣಾ ಆಯೋಗದ ಆಯುಕ್ತರ ನಡುವೆ ಭಿನ್ನಾಭಿಪ್ರಾಯಗಳಿವೆಯೆಂಬ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳು ಹಾಗೂ ಆಯೋಗದೊಳಗಿನ ವಾಸ್ತವ ಪರಿಸ್ಥಿತಿಯ ಬಗ್ಗೆ ಆಯೋಗದ ಸದಸ್ಯರು ವಿವರಣೆ ನೀಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿ ಚುನಾವಣಾ ಆಯೋಗದ ಸದಸ್ಯರ ನಡುವೆ ಭಿನಾಭಿಪ್ರಾಯಗಳಿವೆಯೆಂಬ ವರದಿಗಳ ಕುರಿತಾಗಿ ವಿವರವಾದ ಸ್ಪಷ್ಟನೆಯನ್ನು ನೀಡಬೇಕೆಂದು ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ (ರಾಮ್‌ವಿಲಾಸ್), ಉಪೇಂದ್ರ ಕುಶವಾಹಾ ನೇತೃತ್ವದ ರಾಷ್ಟ್ರೀಯ ಲೋಕತಾಂತ್ರಿಕ ಮೋರ್ಚಾ ಹಾಗೂ ತೆಲುಗುದೇಶಂ ಪಕ್ಷದ ನಾಯಕರು  ಆಗ್ರಹಿಸಿರುವ ಬೆನ್ನಲ್ಲೇ ಜೆಡಿಎಸ್ ಪಕ್ಷದ ಅಧ್ಯಕ್ಷರೂ ಆಗಿರುವ ಕುಮಾರಸ್ವಾಮಿ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.

ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ‘ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಮತ್ತು ಇಬ್ಬರು ಸದಸ್ಯರ ನಡುವೆ ಇರುವ ಅಭಿಪ್ರಾಯ ಭೇದದ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಇಟ್ಟುಕೊಂಡು ಅದನ್ನೇ ದೊಡ್ಡ ಅಪರಾಧದಂತೆ ಬಿಂಬಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಆದರೆ, ಇವರು(ಕಾಂಗ್ರೆಸ್) ಅಧಿಕಾರದಲ್ಲಿದ್ದಾಗ ಏನೇನು ಮಾಡಿದ್ದಾರೆ ಎಂದು ನಾನು ಚರ್ಚೆ ಮಾಡುವುದಿಲ್ಲ’ ಎಂದು ವ್ಯಂಗ್ಯವಾಡಿದರು.

‘ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಯಾವ ಪುರುಷಾರ್ಥಕ್ಕಾಗಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮಾಡುತ್ತಿದೆ. ಚುನಾವಣಾ ಆಯೋಗವು ಒಂದು ಜವಾಬ್ದಾರಿಯುತ ಸಂಸ್ಥೆ. 78 ವರ್ಷಗಳಿಂದ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದುಕೊಂಡು ಬಂದಿದ್ದರೆ ಅದು ಆಯೋಗದ ಜವಾಬ್ದಾರಿಯಿಂದ ಮಾತ್ರ ಸಾಧ್ಯವಾಗಿದೆ’ ಎಂದು  ಎಚ್.ಡಿ. ಕುಮಾರಸ್ವಾಮಿ ಸಮರ್ಥನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor