ಸಾಂದರ್ಭಿಕ ಚಿತ್ರ (PTI)

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ, ಕರಡು ಮತದಾರರ ಪಟ್ಟಿಯಿಂದ ಬೃಹತ್ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕುವ ಯತ್ನಗಳು ಕರ್ನಾಟಕದ ಕನಿಷ್ಠ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಕಿಗೆ ಬಂದಿವೆ. ಆಕ್ಷೇಪಣೆ ಸಲ್ಲಿಸಲು ನಿಗದಿಯಾಗಿದ್ದ ಅಂತಿಮ ಗಡುವಿಗೆ ಕೇವಲ 48 ಗಂಟೆಗಳ ಮೊದಲು ಈ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ʼದಿ ನ್ಯೂಸ್ ಮಿನಿಟ್ʼ ವರದಿ ಮಾಡಿದೆ. ಪಟ್ಟಿಯಿಂದ ಹೆಸರು ಕೈಬಿಡಲು ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಗೆ ತಮ್ಮ ವಾದ ಮಂಡಿಸಲು ಕಡ್ಡಾಯವಾಗಿ ವಿಚಾರಣೆಗೆ ಅವಕಾಶ ನೀಡಬೇಕಿಲ್ಲ. ನಾಮನಿರ್ದೇಶಿತ ಅಧಿಕಾರಿಗೆ ತೃಪ್ತಿಯಾದರೆ ಅವರು ನೇರವಾಗಿ ಹೆಸರನ್ನು ರದ್ದುಗೊಳಿಸಬಹುದು.

ಕೇವಲ ಎರಡು ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 22 ಮತ್ತು 23ರಂದು, ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲವೇ ಕೆಲವು ವ್ಯಕ್ತಿಗಳು 3,750ಕ್ಕೂ ಹೆಚ್ಚು ಜನರ ಹೆಸರುಗಳನ್ನು ಕೈಬಿಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಬಹುಪಾಲು ಜನರು ಮುಸ್ಲಿಮರಾಗಿದ್ದು, ಸ್ವಲ್ಪ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯವರೂ ಸೇರಿದ್ದಾರೆ.

ವಿಜಯಪುರ ಜಿಲ್ಲೆಯ ಸಚಿವ ಎಂ.ಬಿ. ಪಾಟೀಲ್ ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರ ಹಾಗೂ ಬೀದರ್ ಜಿಲ್ಲೆಯ ಸಚಿವ ಈಶ್ವರ್ ಖಂಡ್ರೆ ಪ್ರತಿನಿಧಿಸುವ ಭಾಲ್ಕಿ ಕ್ಷೇತ್ರದಲ್ಲಿ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಫಾರ್ಮ್ 7 ಆಕ್ಷೇಪಣೆಗಳು

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅಥವಾ ವಿವರಗಳನ್ನು ತಿದ್ದುಪಡಿ ಮಾಡಲು ಹಾಗೂ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಆಕ್ಷೇಪಣೆಗಳನ್ನು ಸಲ್ಲಿಸಲು ಆಗಸ್ಟ್ 24ರಿಂದ ಸೆಪ್ಟೆಂಬರ್ 24ರವರೆಗೆ ಕಾಲಾವಕಾಶವಿತ್ತು. ಚುನಾವಣಾ ಆಯೋಗವು ಅಕ್ಟೋಬರ್ 22ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಿದ್ದು, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.

ಮತದಾರರ ಪಟ್ಟಿಯಿಂದ ಯಾರಾದರೂ ಹೆಸರನ್ನು ಸೇರಿಸುವುದನ್ನು ವಿರೋಧಿಸಲು 'ಫಾರ್ಮ್ 7' ಅನ್ನು ಸಲ್ಲಿಸಲಾಗುತ್ತದೆ. ನೀವು ಬೇರೆಡೆಗೆ ಸ್ಥಳಾಂತರಗೊಂಡಿದ್ದರೆ ಅಥವಾ ಮೃತಪಟ್ಟ ಸಂಬಂಧಿಕರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಬೇಕಿದ್ದರೆ ಇದನ್ನು ಬಳಸಬಹುದು. ಆದರೆ, ಯಾವುದೇ ಸಂಬಂಧವಿಲ್ಲದ ವ್ಯಕ್ತಿಯ ಹೆಸರು ಸೇರ್ಪಡೆಯನ್ನೂ ಪ್ರಶ್ನಿಸಲು ಕಾನೂನು ಅವಕಾಶ ನೀಡುತ್ತದೆ.

ಮತದಾರರ ನೋಂದಣಿ ನಿಯಮಗಳು 1960ರ ಅಡಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆಗೆ ಅನುಸರಿಸಬೇಕಾದ ಪ್ರಕ್ರಿಯೆಯನ್ನು ಸೂಚಿಸಲಾಗಿದೆ. ಫಾರ್ಮ್ 7 ಸ್ವೀಕರಿಸುವ ಮೊದಲು ಲಿಖಿತವಾಗಿ ವಿಚಾರಣೆಗೆ ಬೇಡಿಕೆ ಸಲ್ಲಿಸದ ಹೊರತು, ಯಾವುದೇ ವಿಚಾರಣೆಯಿಲ್ಲದೆ ಫಾರ್ಮ್ 7 ಅನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಸೆಕ್ಷನ್ 18 ಅಧಿಕಾರಿಗೆ ಅವಕಾಶ ನೀಡುತ್ತದೆ. ಇದರರ್ಥ, ಯಾರಾದರೂ ಹೆಸರು ಸೇರಿಸುವುದನ್ನು ವಿರೋಧಿಸಿ ನೀಡಿರುವ ಆಕ್ಷೇಪಣೆಗಳು ಸರಿ ಎಂದು ಅನಿಸಿದರೆ, ಅಧಿಕಾರಿಯು ಹೆಸರನ್ನು ನೇರವಾಗಿ ಪಟ್ಟಿಯಿಂದ ತೆಗೆದುಹಾಕುವ ಅಧಿಕಾರವನ್ನು ಹೊಂದಿರುತ್ತಾರೆ.

ಉದಾಹರಣೆಗೆ, ಬಬಲೇಶ್ವರ ಕ್ಷೇತ್ರದಲ್ಲಿ ಗೋವಿಂದರಾಜ್ ಮುದ್ನೂರ್ ಎಂಬವರು 413 ಜನರ ಹೆಸರು ಸೇರ್ಪಡೆಯನ್ನು ವಿರೋಧಿಸಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಗೋವಿಂದರಾಜ್ ಅವರ ಅರ್ಜಿಯನ್ನು ಮಾನ್ಯವೆಂದು ಪರಿಗಣಿಸಿ, ಚುನಾವಣಾ ಆಯೋಗದ ನಿರ್ದಿಷ್ಟ ಅಧಿಕಾರಿಯು 413 ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ನೇರವಾಗಿ ಕೈಬಿಡಬಹುದು. ಅಥವಾ ಗೋವಿಂದರಾಜ್ ಹಾಗೂ ಅವರು ಫಾರ್ಮ್ 7ರಲ್ಲಿ ಹೆಸರಿಸಿರುವ ವ್ಯಕ್ತಿಗಳಿಗೆ ನೋಟೀಸ್ ನೀಡಿ, ಆ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಇಬ್ಬರನ್ನೂ ವಿಚಾರಣೆಗೆ ಕರೆಯಬಹುದು.

ಒಂದು ದಿನದಲ್ಲಿ ಸ್ವೀಕರಿಸಲಾದ ಒಟ್ಟು ಫಾರ್ಮ್ 7 ಅರ್ಜಿಗಳ ಕ್ರೋಢೀಕೃತ ಹೇಳಿಕೆಯನ್ನು 'ಫಾರ್ಮ್ 10' ಎಂದು ಕರೆಯಲಾಗುತ್ತದೆ. ಇದನ್ನು ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ (https://voters.eci.gov.in/download-statutory-report?stateCode=S10) ಪಡೆಯಬಹುದು.

ಬಬಲೇಶ್ವರ ಮತ್ತು ಭಾಲ್ಕಿ ಕ್ಷೇತ್ರಗಳ ಫಾರ್ಮ್ 10 ಹೇಳಿಕೆಗಳ ಪ್ರಕಾರ, 38 ವ್ಯಕ್ತಿಗಳು ವಿವಿಧ ಮತಗಟ್ಟೆಗಳ ಒಟ್ಟು 3,757 ಜನರ ಹೆಸರುಗಳನ್ನು ತೆಗೆದುಹಾಕುವಂತೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 22 ಮತ್ತು 23ರಂದು ಒಟ್ಟು 3,909 ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಲಾಗಿದೆ. ಸೆಪ್ಟೆಂಬರ್ 22ಕ್ಕೆ ಮುಂಚಿನ ಐದು ದಿನಗಳಲ್ಲಿ ಇಂತಹ ಅರ್ಜಿಗಳು ಗರಿಷ್ಠ ಎಂದರೂ ಒಂದಂಕಿಯಷ್ಟೇ ಇದ್ದವು.

ಬಬಲೇಶ್ವರ ಕ್ಷೇತ್ರದಲ್ಲಿ, ಸೆಪ್ಟೆಂಬರ್ 22ರಂದು ಒಟ್ಟು 1,373 ಡಿಲೀಷನ್ ಅರ್ಜಿಗಳಲ್ಲಿ ಶೇ. 96ರಷ್ಟನ್ನು 7 ಮಂದಿ ವ್ಯಕ್ತಿಗಳು ಸಲ್ಲಿಸಿದ್ದಾರೆ. ಮರುದಿನ ಸೆಪ್ಟೆಂಬರ್ 23ರಂದು 257 ಅರ್ಜಿಗಳ ಎಲ್ಲವನ್ನೂ 6 ಮಂದಿ ವ್ಯಕ್ತಿಗಳು ಸಲ್ಲಿಸಿದ್ದರು.

ಭಾಲ್ಕಿಯಲ್ಲಿ, ಸೆಪ್ಟೆಂಬರ್ 22ರಂದು 384 ಡಿಲೀಷನ್ ಕೋರಿರುವ ಅರ್ಜಿಗಳಲ್ಲಿ ಶೇ. 97ರಷ್ಟನ್ನು 10 ಮಂದಿ ವ್ಯಕ್ತಿಗಳು ಸಲ್ಲಿಸಿದ್ದಾರೆ. ಮರುದಿನ 31 ಮಂದಿ 1,895 ಅರ್ಜಿಗಳಲ್ಲಿ ಶೇ. 95ರಷ್ಟನ್ನು ಸಲ್ಲಿಸಿದ್ದಾರೆ.

ಈ ವ್ಯಕ್ತಿಗಳು ಯಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ವಿಶ್ಲೇಷಣೆಗಾಗಿ ʼದಿ ನ್ಯೂಸ್ ಮಿನಿಟ್ʼ  10ಕ್ಕಿಂತ ಕಡಿಮೆ ಅರ್ಜಿಗಳನ್ನು ಸಲ್ಲಿಸಿದ ವ್ಯಕ್ತಿಗಳನ್ನು ಪರಿಗಣಿಸಿಲ್ಲ.

ಅವರ ಹೆಸರುಗಳಿಂದ ತಿಳಿದುಬಂದಿರುವಂತೆ, ಈ ಎರಡು ಕ್ಷೇತ್ರಗಳಲ್ಲಿ ಪಟ್ಟಿಯಿಂದ ಕೈಬಿಡಲು ಪ್ರಸ್ತಾಪಿಸಲಾದ ಬಹುಪಾಲು ಹೆಸರುಗಳು ಮುಸ್ಲಿಮರದ್ದಾಗಿವೆ. ಜಾತಿಯನ್ನು ಸೂಚಿಸುವ ' ಮಾದರ' (ಮಾದಿಗ) ಎಂಬ ಉಪನಾಮ ಹೊಂದಿರುವವರೂ ಹೆಸರು ಡಿಲೀಷನ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೆಲವೇ ಕೆಲವು ವ್ಯಕ್ತಿಗಳು ತಮ್ಮ ಸ್ವಂತ ಅಥವಾ ಬಹುಶಃ ತಮ್ಮ ಸಂಬಂಧಿಕರ ಹೆಸರುಗಳನ್ನು ತೆಗೆದುಹಾಕುವಂತೆಯೂ ಕೋರಿದ್ದಾರೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರು 2008ರಿಂದ ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರವನ್ನು ನಾಲ್ಕು ಅವಧಿಗೆ ಪ್ರತಿನಿಧಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ 2,17,491 ಮತದಾರರಿದ್ದರು, ಮತ್ತು ಪಾಟೀಲ್ ಅವರು 15,216 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಗಡುವು ಮುಗಿಯಲು ಕೊನೆಯ 48 ಗಂಟೆಗಳಿದ್ದಾಗ, ಹೆಸರಿಸಲಾದ ವ್ಯಕ್ತಿಗಳು ಸ್ಥಳದಲ್ಲೇ ಇಲ್ಲ/ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಅಥವಾ ಈಗಾಗಲೇ ಬೇರೆಡೆ ನೋಂದಾಯಿಸಿಕೊಂಡಿದ್ದಾರೆ ಎಂಬ ಕಾರಣ ನೀಡಿ ಕ್ಷೇತ್ರದಲ್ಲಿ ಮತದಾರರ ಹೆಸರು ಕೈಬಿಡುವ 1,577 ಅರ್ಜಿಗಳನ್ನು ಸಲ್ಲಿಸಲಾಗಿದೆ. ಮುಸ್ಲಿಮರು ಮತ್ತು ಮಾದಿಗ (ಮಾದರ) ಜಾತಿಗೆ ಸೇರಿದವರಂತೆ ಕಾಣುವವರ ವಿರುದ್ಧ ಈ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ.

Full View

ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರಾದ ಆದಿಲ್ ತಿಕೋಟಾ ಅವರು, ಈ ಕುರಿತು ಸ್ಥಳೀಯ ತಹಶೀಲ್ದಾರ್ ಮತ್ತು ಭಾರತೀಯ ಚುನಾವಣಾ ಆಯೋಗದ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು 'ಟಿಎನ್‌ಎಂ'ಗೆ ತಿಳಿಸಿದ್ದಾರೆ.

ಆಕ್ಷೇಪಣೆ ವ್ಯಕ್ತಪಡಿಸಿದವರಲ್ಲಿ ಒಬ್ಬರು ಕ್ಷಮೆಯಾಚಿಸಿ, ತಾವು ಸಲ್ಲಿಸಿರುವ ಆಕ್ಷೇಪಣೆಗಳನ್ನು ಮುಂದುವರಿಸುವುದಿಲ್ಲ ಎಂದು ಹೇಳಿರುವುದರಿಂದ ಸಮಸ್ಯೆ ಬಗೆಹರಿಯಿತು ಎಂದು ಅವರು ಸೆಪ್ಟೆಂಬರ್ 24ರ ಗುರುವಾರದಂದು 'ಟಿಎನ್‌ಎಂ'ಗೆ ತಿಳಿಸಿದ್ದರು.

ಆದರೆ, ವಿಷಯವನ್ನು ಕೈಬಿಡುವುದಾಗಿ ಆ ವ್ಯಕ್ತಿ ಭರವಸೆ ನೀಡಿದ ಹೊರತಾಗಿಯೂ, ಅದೇ ಗುಂಪಿನ ವ್ಯಕ್ತಿಗಳು ಬಹುಪಾಲು ಮುಸ್ಲಿಮರು ಮತ್ತು ಮಾದಿಗ (ಮಾದರ) ಜಾತಿಗೆ ಸೇರಿದವರ ಹೆಸರುಗಳನ್ನು ತೆಗೆದುಹಾಕುವಂತೆ ಕೋರಿ ಮತ್ತೆ 257 ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಫಾರ್ಮ್ 7 ಅನ್ನು ಹಿಂಪಡೆಯಲು ನಿರ್ದಿಷ್ಟವಾದ ಯಾವುದೇ ನಿಯಮವಿಲ್ಲ, ಆದರೆ ಅನಧಿಕೃತವಾಗಿ ಅವುಗಳನ್ನು ಹಿಂಪಡೆಯಬಹುದು ಎಂದು ಹೆಸರು ಹೇಳಲು ಬಯಸದ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು 'ಟಿಎನ್‌ಎಂ'ಗೆ ತಿಳಿಸಿದ್ದಾರೆ.

ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರ್ ಖಂಡ್ರೆ ಅವರು 2008ರಿಂದ ಭಾಲ್ಕಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಭಾಲ್ಕಿಯಲ್ಲಿ 2,30,959 ಮತದಾರರಿದ್ದರು ಮತ್ತು ಖಂಡ್ರೆ ಅವರು 27,706 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಪ್ರಸ್ತುತ ಮತದಾರರ ಪಟ್ಟಿಯಿಂದ ಸುಮಾರು ಸಂಪೂರ್ಣವಾಗಿ ಮುಸ್ಲಿಮರಾಗಿರುವ 2,180 ಜನರ ಹೆಸರುಗಳನ್ನು ತೆಗೆದುಹಾಕುವಂತೆ ಕೋರಿ ಸೆಪ್ಟೆಂಬರ್ 22 ಮತ್ತು 23ರಂದು ಒಟ್ಟು 31 ವ್ಯಕ್ತಿಗಳು ಹಲವು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇವರಲ್ಲಿ 10 ಜನರು ಎರಡೂ ದಿನ ಹಲವು ಅರ್ಜಿಗಳನ್ನು ಸಲ್ಲಿಸಿದ್ದಾರೆ.

Full View

ಇದಲ್ಲದೆ, ಬೆಳಗಾವಿ ಜಿಲ್ಲೆಯಲ್ಲಿ ಮುಸ್ಲಿಮರ ಹೆಸರುಗಳನ್ನು ಬೃಹತ್ ಪ್ರಮಾಣದಲ್ಲಿ ತೆಗೆದುಹಾಕಲಾಗುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ. ಸೆಪ್ಟೆಂಬರ್ 19ರಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು ಬೆಳಗಾವಿ ಮಹಾನಗರ ಪಾಲಿಕೆಗೆ ಪತ್ರ ಬರೆದು, 2,598 ಮತದಾರರು 'ನಕಲಿ' ಎಂದು ಹೇಳಿ ಅವರ ಹೆಸರುಗಳನ್ನು ಕೈಬಿಡುವಂತೆ ಕೋರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಮತಗಳ ಪರಿಶೀಲನೆ ಮತ್ತು ತೆಗೆದುಹಾಕುವಂತೆ ಅಭಯ್ ಪಾಟೀಲ್ ಅವರು ಸಲ್ಲಿಸಿದ್ದ ಮನವಿಯನ್ನು ಚುನಾವಣಾ ಆಯೋಗದ ಅಧಿಕಾರಿಗಳು ತಿರಸ್ಕರಿಸಿದ್ದಾರೆ.

ಆದರೆ, ತಾವೇನು ಹೆಸರುಗಳನ್ನು ತೆಗೆದುಹಾಕುವಂತೆ ಕೋರಲಿಲ್ಲ ಎಂದು ಅಭಯ್ ಪಾಟೀಲ್ ನಂತರ ನಿರಾಕರಿಸಿದ್ದಾರೆ. "ನಕಲಿ" ಮತದಾರರ ಕುರಿತ ಆರೋಪಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಮಾತ್ರ ತಾವು ಚುನಾವಣಾ ಆಯೋಗವನ್ನು ಕೋರಿದ್ದೆ ಎಂದು ಅವರು ತಿಳಿಸಿದ್ದಾರೆ.

ಕೃಪೆ: thenewsminute.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor