ಸಾಗರ್ ಚಂದ್ರ ರಾವತ್/ ಅನುಸೂಯ (ndtv.com)

ಬೆಂಗಳೂರು : ಹಣಕಾಸಿನ ವಿಚಾರಕ್ಕಾಗಿ ಜಗಳವಾಡಿದ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದು ಆಕೆಯ ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ ಖಾಲಿ ನಿವೇಶನಕ್ಕೆ ಎಸೆದಿದ್ದ ಆರೋಪಿ ಪತಿಯನ್ನು ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಒಡಿಶಾ ಮೂಲದ ಅನುಸೂಯ (28) ಕೊಲೆಯಾದ ಮಹಿಳೆಯಾಗಿದ್ದು, ಕೊಲೆ ಆರೋಪಿಯನ್ನು ಸಾಗರ್ ಚಂದ್ರ ರಾವತ್ (32) ಎಂದು ಗುರುತಿಸಲಾಗಿದೆ.

ಪ್ರೀತಿಸಿ ವಿವಾಹವಾಗಿದ್ದ ಇವರಿಬ್ಬರು ಬೆಂಗಳೂರಿನ ವಿವಿಧ ಹೋಟೆಲ್‍ಗಳಲ್ಲಿ ಕೆಲಸ ಮಾಡುತ್ತಿದ್ದರು. ಆ.11ರಂದು ಹಣಕಾಸಿನ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದ್ದು, ಈ ವೇಳೆ ಸಾಗರ್ ಪತ್ನಿ ಅನುಸೂಯಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಮೂರು ದಿನಗಳ ಕಾಲ ಶವವನ್ನು ಮನೆಯಲ್ಲೇ ಇರಿಸಿಕೊಂಡಿದ್ದ ಆರೋಪಿ, ನಂತರ ಶವವನ್ನು ಹಾಸಿಗೆಯಲ್ಲಿ ಸುತ್ತಿ ಸಂಪಿಗೆಹಳ್ಳಿ ಸಮೀಪದ ಎಂ.ಎಸ್. ನಗರ ಅಗ್ರಹಾರ ಲೇಔಟ್‍ನ ಖಾಲಿ ನಿವೇಶನದಲ್ಲಿ ಎಸೆದು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಇತ್ತ ಖಾಲಿ ನಿವೇಶನವನ್ನು ಸ್ವಚ್ಛಗೊಳಿಸಲು ಮಾಲಕರು ಕಾರ್ಮಿಕರನ್ನು ಕಳುಹಿಸಿದ್ದರು. ಈ ವೇಳೆ ಕೊಳೆತ ಸ್ಥಿತಿಯಲ್ಲಿದ್ದ, ನಾಯಿಗಳು ಕಚ್ಚಿ ತಿಂದಿದ್ದ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಮಾಹಿತಿ ಪಡೆದ ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ತನಿಖೆ ವೇಳೆ ಪೊಲೀಸರಿಗೆ ಮೃತದೇಹದ ಮೇಲಿದ್ದ ಬಟ್ಟೆಯ ಟ್ಯಾಗ್ ಪ್ರಮುಖ ಸುಳಿವು ನೀಡಿದೆ. ಟ್ಯಾಗ್ ಆಧರಿಸಿ ಪೊಲೀಸರು ಬಿಲ್‍ನ ವಿವರಗಳನ್ನು ಪರಿಶೀಲಿಸಿದ್ದು, ಬಳಿಕ ಮೃತ ಮಹಿಳೆಯ ಗುರುತು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮೃತಳ ಗುರುತು ಪತ್ತೆಯಾದ ಬಳಿಕ ತನಿಖೆಯನ್ನು ಚುರುಕುಗೊಳಿಸಿ, ಕೊಲೆ ನಡೆದ ಸುಮಾರು 20 ದಿನಗಳ ಬಳಿಕ ಆರೋಪಿ ಪತಿ ಸಾಗರ್ ಚಂದ್ರ ರಾವತ್‍ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor