ಬೆಂಗಳೂರು : ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾದ ಪೋಸ್ಟರ್ ಇಡೀ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಸಿಂಹವೊಂದು ಶಾಂತವಾಗಿ ಕುಳಿತಿದ್ದು, ಅದರ ಸುತ್ತ ನಾಯಿಗಳು ಬೊಗಳುತ್ತಿರುವ ಚಿತ್ರದ ಮೇಲೆ "Not every voice deserves a response" ಅಂದ್ರೆ ಪ್ರತಿಯೊಂದು ಧ್ವನಿಯೂ ಪ್ರತಿಕ್ರಿಯೆಗೆ ಅರ್ಹವಲ್ಲ ಎಂಬ ಸಾಲು ಇರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಪೋಸ್ಟರ್ ವಿರುದ್ಧ ಬಿಜೆಪಿ ಮುಖಂಡ ಕೋಟ ಶ್ರೀನಿವಾಸ ಪೂಜಾರಿ ಅತ್ಯಂತ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

"ಡಿಕೆಶಿಯವರ ಕಾಂಗ್ರೆಸ್ ಸರಕಾರದಲ್ಲಿ, ಅಧಿಕಾರಿಗಳು ಸಿಂಹಗಳಾಗುತ್ತಾರೆ, ಜನಪ್ರತಿನಿಧಿಗಳು ಬೊಗಳುವ ನಾಯಿಗಳಾಗುತ್ತಾರೆ"! ಒಬ್ಬ ಡಿ.ಸಿ ಇಂತಹ ಪೋಸ್ಟ್ ಹಾಕುತ್ತಾರೆ ಮತ್ತು ರಾಜ್ಯ ಸರಕಾರ ಪರೋಕ್ಷವಾಗಿ ಸಮರ್ಥಿಸುತ್ತದೆ" ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

“ಜಿಲ್ಲಾಧಿಕಾರಿಗಳು ಬಾಯಿಬಿಟ್ಟು ಹೇಳದಿದ್ದರೂ ಕೇಂದ್ರದ ಕ್ಯಾಬಿನೆಟ್ ಸಚಿವರೇ ಗುರಿ ಎಂದು ಬೇರೆ ಹೇಳಬೇಕಾಗಿಲ್ಲ. ಒಬ್ಬ ಅಧಿಕಾರಿ ಜನಪ್ರತಿನಿಧಿಗಳನ್ನು ಇಷ್ಟು ಅವಹೇಳನ ಮಾಡುವುದಾದರೆ, ಮುಂದೆ ಕರ್ನಾಟಕದಲ್ಲಿ ಯಾವುದೇ ಶಾಸಕರು, ಸಂಸದರು ಕೆಲಸ ಮಾಡುವುದು ಕಷ್ಟ. ಇದು ಪ್ರಜಾತಂತ್ರದ ದುರಾದೃಷ್ಟ... " ಎಂದು ಅವರು ಎಚ್ಚರಿಸಿದ್ದಾರೆ.

ಈ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯದೇ ಆಯಾಮದ ಚರ್ಚೆಯನ್ನು ಹುಟ್ಟುಹಾಕಿದೆ.

ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿದ್ದರೂ ರಾಜ್ಯದ ಒಬ್ಬ ಮಹಿಳಾ ಐಎಎಸ್ ಅಧಿಕಾರಿ ಈ ರೀತಿ ಬಹಿರಂಗವಾಗಿ ನಾಯಿಗಳ ಚಿತ್ರ ಹಾಕಿ ತಿರುಗೇಟು ನೀಡಿರುವುದು ಕೇಂದ್ರ ಸರ್ಕಾರದ ದೌರ್ಬಲ್ಯ ಮತ್ತು ಕೇಂದ್ರ ಸಚಿವರ ವರ್ತನೆಯ ಮಟ್ಟವನ್ನು ತೋರಿಸುತ್ತದೆ ಎಂದು ಕೆಲವರು ಲೇವಡಿ ಮಾಡಿದ್ದಾರೆ.

ವ್ಯಕ್ತಿಯೊಬ್ಬರು, "ಒಬ್ಬ ಮಹಿಳಾ ಐಎಎಸ್ ಅಧಿಕಾರಿ ಪ್ರಭಾವಿ ಕೇಂದ್ರ ಸಚಿವರನ್ನು ನಾಯಿಗೆ ಹೋಲಿಸಿದ್ದಾರೆಂದರೆ, ಆ ಸಚಿವರ ನಡವಳಿಕೆ ಎಷ್ಟು ಕೀಳಾಗಿರಬಹುದು ನೋಡಿ" ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಂದೆಡೆ, "ಆರ್‌ಎಸ್‌ಎಸ್ ಜೊತೆ ಕೈಜೋಡಿಸಿದ್ದಕ್ಕೆ ಕುಮಾರಸ್ವಾಮಿ ತಮ್ಮ ಜನಪ್ರಿಯತೆ ಮತ್ತು ಘನತೆಯನ್ನು ಕಳೆದುಕೊಳ್ಳುತ್ತಿದ್ದಾರೆ, ಅವರು ಇತಿಹಾಸದ ತಪ್ಪು ದಿಕ್ಕಿನಲ್ಲಿ ನಿಂತಿದ್ದಾರೆ ಎಂಬುದನ್ನು ಬೇಗ ಅರಿತುಕೊಳ್ಳಬೇಕು" ಎಂದು ಕುಮಾರಸ್ವಾಮಿ-ಬಿಜೆಪಿ ಮೈತ್ರಿಯನ್ನು ಗುರಿಯಾಗಿಸಿ ಟ್ರೋಲ್ ಮಾಡಲಾಗುತ್ತಿದೆ.

ಈ ಇಡೀ ವಾಕ್ಸಮರಕ್ಕೆ ಕಾರಣವಾಗಿದ್ದು ಹಾಸನಾಂಬೆ ದೇಗುಲದ ದರ್ಶನದ ಬಳಿಕ ಕುಮಾರಸ್ವಾಮಿ ಸಿಡಿಸಿದ ಭ್ರಷ್ಟಾಚಾರದ ಬಾಂಬ್.

ಹಾಸನ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಡಿಸಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ನೇರ ಆರೋಪ ಮಾಡಿದ್ದರು.

ಜಿಲ್ಲೆಯಲ್ಲಿ ಮೂರು ಸ್ಟೋನ್ ಕ್ರಷರ್‌ಗಳಿಗೆ ಪರವಾನಗಿ ನೀಡಲು 60 ಲಕ್ಷ ರೂಪಾಯಿ ಬೇಡಿಕೆ ಇಡಲಾಗಿದೆ ಮತ್ತು ಸಕಲೇಶಪುರದ ವಸತಿ ಲೇಔಟ್‌ನ ಭೂ ಪರಿವರ್ತನೆಗೆ ಲಂಚ ಕೇಳಲಾಗಿದೆ ಎಂದು ಹೇಳಿದ್ದರು.

ಅಷ್ಟೇ ಅಲ್ಲ, ಡಿಸಿ ಲತಾಕುಮಾರಿ ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡರಿಗೆ ತಹಶೀಲ್ದಾರ್ ವೊಬ್ಬರ ಮೂಲಕ 75 ಲಕ್ಷ ರೂಪಾಯಿ ಲಂಚ ತಲುಪಿಸಿದ್ದಾರೆ ಎಂದು ಆರೋಪಿಸಿದ್ದರು.

ಇದಕ್ಕೆ ಪುಷ್ಟಿಯಾಗಿ ಡಿಸಿ ಪಿಎ ಶಶಿಕಿರಣ್ ಮತ್ತು ಅಪರಿಚಿತ ವ್ಯಕ್ತಿಯ ನಡುವೆ ನಡೆದಿದೆ ಎನ್ನಲಾದ ವಾಟ್ಸಾಪ್ ಚಾಟ್ ಪ್ರತಿಯನ್ನು ಮಾಧ್ಯಮಗಳ ಮುಂದಿಟ್ಟು, ಪೊಲೀಸರು ಮೊಬೈಲ್ ಜಪ್ತಿ ಮಾಡಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು.

ಆದರೆ ಈ ಆರೋಪಗಳಿಗೆ ರಾಜ್ಯ ಸರ್ಕಾರ ಮತ್ತು ಅಧಿಕಾರಿ ವರ್ಗದಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಡಿಸಿ ಲತಾಕುಮಾರಿ ಬೆಂಬಲಕ್ಕೆ ನಿಂತು, ಜೆಡಿಎಸ್ ನಾಯಕರ ಕಾನೂನುಬಾಹಿರ ಬೇಡಿಕೆಗಳಿಗೆ ಬಗ್ಗದ ಕಾರಣಕ್ಕೆ ಅವರ ಮೇಲೆ ವೃಥಾ ಆರೋಪ ಹೊರಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅತ್ತ ಜಿಲ್ಲಾಧಿಕಾರಿ ಲತಾಕುಮಾರಿ ಅವರು "ನಾನು ತಪ್ಪು ಮಾಡಿಲ್ಲ, ಮಾಡುತ್ತಿಲ್ಲ, ಮುಂದೆಯೂ ಮಾಡಲ್ಲ" ಎಂದು ತಿರುಗೇಟು ನೀಡಿದ್ದಾರೆ.

ತಾವು ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ, ಮಹಿಳಾ ಅಧಿಕಾರಿಯ ತೇಜೋವಧೆ ಮಾಡುವ ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.

ಇತ್ತ ಪಿಎ ಶಶಿಕಿರಣ್ ಅವರು, ತಮ್ಮ ಹೆಸರು ಮತ್ತು ಫೋಟೋ ದುರ್ಬಳಕೆ ಮಾಡಿಕೊಂಡು ನಕಲಿ ಸಂದೇಶಗಳನ್ನು ಸೃಷ್ಟಿಸಲಾಗಿದೆ ಎಂದು ಹಾಸನ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ ಮೊಬೈಲ್ ಒಪ್ಪಿಸಿದ್ದಾರೆ.

ಇತ್ತ 75 ಲಕ್ಷ ಲಂಚದ ಆರೋಪ ಹೊತ್ತಿರುವ ಸಚಿವ ಕೆ.ಎಂ. ಶಿವಲಿಂಗೇಗೌಡರಂತೂ ಕುಮಾರಸ್ವಾಮಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಹಾಸನಾಂಬೆ ದೇವಾಲಯದ ಆವರಣದಲ್ಲಿ ಸಂಸದ ಶ್ರೇಯಸ್ ಎಂ. ಪಟೇಲ್ ಜೊತೆ ಸುದ್ದಿಗೋಷ್ಠಿ ನಡೆಸಿದ ಅವರು, "ಇದು ಕುಮಾರಸ್ವಾಮಿಯವರ ಹಳೆಯ ಹಿಟ್ ಅಂಡ್ ರನ್ ರಾಜಕಾರಣ" ಎಂದು ವಾಗ್ದಾಳಿ ನಡೆಸಿದರು.

ಹಿಂದೆ ವಿಧಾನಸಭೆಯಲ್ಲಿ ಎರಡು ಬಾರಿ ಪೆನ್‌ಡ್ರೈವ್ ತೋರಿಸಿದವರು ಅದರಲ್ಲಿ ಏನಿದೆ ಎಂದು ಕೊನೆಗೂ ಬಹಿರಂಗಪಡಿಸಲಿಲ್ಲ, ಈಗ ಎಐ ತಂತ್ರಜ್ಞಾನದ ಕಾಲದಲ್ಲಿ ಯಾರದೋ ಹೆಸರಲ್ಲಿ ನಕಲಿ ಚಾಟ್ ಸೃಷ್ಟಿಸಿ ತಂದುಕೊಟ್ಟರೆ ಅದನ್ನೇ ನಂಬಿ ಆರೋಪ ಮಾಡುವುದು ಕೇಂದ್ರ ಸಚಿವ ಸ್ಥಾನದಲ್ಲಿರುವವರಿಗೆ ಶೋಭೆಯಲ್ಲ ಎಂದರು.

"ಡಿಸಿ ವರ್ಗಾವಣೆಯಲ್ಲಿ ನಾನು ಒಂದೇ ಒಂದು ರೂಪಾಯಿ ಪಡೆದಿದ್ದರೂ ಹಾಸನಾಂಬೆ ತಾಯಿ ನನ್ನನ್ನು ನೋಡಿಕೊಳ್ಳಲಿ, ನನ್ನ ವಿರುದ್ಧದ ಆರೋಪ ಸಾಬೀತುಪಡಿಸದಿದ್ದರೆ ನಾನು ಸುಮ್ಮನೆ ಕೂರಲ್ಲ, ದೇವಿಯ ಸನ್ನಿಧಿಯಲ್ಲಿ ಬಂದು ಪ್ರಮಾಣ ಮಾಡಲಿ" ಎಂದು ನೇರ ಸವಾಲು ಹಾಕಿದ್ದಾರೆ.

ಆರೋಪ, ಪ್ರತ್ಯಾರೋಪ, ದೇಗುಲದ ಮುಂಭಾಗದ ಪ್ರಮಾಣದ ಸವಾಲುಗಳ ನಂತರ ಬಂದ ಈ ಸಿಂಹ-ನಾಯಿಗಳ ಪೋಸ್ಟರ್ ಇಡೀ ಪ್ರಕರಣವನ್ನು ಮತ್ತಷ್ಟು ಕಾವೇರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor