ಸಾಂದರ್ಭಿಕ ಚಿತ್ರ

ಬೆಂಗಳೂರು : ಕರ್ನಾಟಕದಲ್ಲಿ ಎಸ್‌ಐಆರ್ ನಲ್ಲಿ ಮತದಾರರ ಹೆಸರು ಕೈಬಿಟ್ಟಿರುವುದಕ್ಕೆ ಸಂಬಂಧಿಸಿ ಚುನಾವಣಾ ಆಯೋಗ ಪ್ರಕಟಿಸಿರುವ ಮತಗಟ್ಟೆವಾರು ದತ್ತಾಂಶವನ್ನು ಆಧರಿಸಿ ರಾಜಕೀಯ ಸಂಶೋಧನಾ ಸಂಸ್ಥೆ ‘ಸಂಕಲ್ಪ್’ ಮಾಡಿರುವ ಅಧ್ಯಯನಗಳನ್ನು ಆಧರಿಸಿ ಫ್ರಂಟ್ ಲೈನ್ ನಿಯತಕಾಲಿಕ ಹಾಗು ‘ವಾರ್ತಾಭಾರತಿ’ ಕನ್ನಡ ದೈನಿಕ ಪ್ರಕಟಿಸಿರುವ ವಿಶೇಷ ವರದಿಗಳು ಆಘಾತಕಾರಿಯಾಗಿವೆ. ಈ ವರದಿಗಳಲ್ಲಿರುವ ಅಂಕಿ ಅಂಶಗಳು ಎಸ್‌ಐಆರ್ ಕುರಿತು ಈಗಾಗಲೇ ದೇಶಾದ್ಯಂತ ವ್ಯಾಪಕವಾಗಿ ವ್ಯಕ್ತವಾಗಿರುವ ಆತಂಕಗಳನ್ನು ಹಾಗು ಗಂಭೀರ ಆರೋಪಗಳನ್ನು ಪುಷ್ಟೀಕರಿಸಿವೆ ಎಂದು ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ (ಕೆಆರ್‌ಎಂಒ) ತಿಳಿಸಿದೆ.

ಸೋಮವಾರ ಈ ಕುರಿತು ಪ್ರಕಟನೆ ನೀಡಿರುವ ಕೆಆರ್‌ಎಂಒ ರಾಜ್ಯ ಸಂಚಾಲಕರಾದ ಯಾಸೀನ್ ಮಲ್ಪೆ, ಯಹ್ಯಾ ದಾಮೂದಿ, ಸುಹೈಲ್ ಅಹ್ಮದ್ ಮರೂರ್, ಹಾರಿಸ್ ಸಿದ್ದೀಕಿ, ಝಹೂರ್ ಖಾಝಿ, ಚುನಾವಣಾ ಆಯೋಗದ ದತ್ತಾಂಶದ ಪ್ರಕಾರ, ಕರ್ನಾಟಕದ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಮುಸ್ಲಿಂ ಶಾಸಕರು ಪ್ರತಿನಿಧಿಸುವ 10 ಕ್ಷೇತ್ರಗಳಲ್ಲಿ ಶೇ. 27ಕ್ಕೂ ಅಧಿಕ ಹಾಗೂ ಮುಸ್ಲಿಂ ಪ್ರಾಬಲ್ಯದ 64 ಕ್ಷೇತ್ರಗಳಲ್ಲಿ 8.80 ಲಕ್ಷಕ್ಕೂ ಹೆಚ್ಚು ಮುಸ್ಲಿಂ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಕರ್ನಾಟಕದಲ್ಲಿ ಒಟ್ಟಾರೆಯಾಗಿ ಶೇಕಡ 19.45ರಷ್ಟು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಆದರೆ, ಮುಸ್ಲಿಂ ಶಾಸಕರು ಪ್ರತಿನಿಧಿಸುವ ಹತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಅಳಿಸುವಿಕೆ ದರ ಶೇಕಡ 27.59ಕ್ಕೆ ತಲುಪಿದೆ. ರಾಜ್ಯದ ಸರಾಸರಿಗಿಂತ ಇದು ಶೇಕಡ 8ರಷ್ಟು ಹೆಚ್ಚಾಗಿದೆ. ಈ ಹತ್ತು ಕ್ಷೇತ್ರಗಳಲ್ಲಿ 2025ರ ಮತದಾರರ ಪಟ್ಟಿಯ ಪ್ರಕಾರ 9,62,359 ಮುಸ್ಲಿಂ ಮತದಾರರಿದ್ದರು. ಇವರಲ್ಲಿ 2,46,759 ಮತದಾರರ ಹೆಸರುಗಳನ್ನು, ಅಂದರೆ ಶೇಕಡ 25.64ರಷ್ಟು ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದೇ ಕ್ಷೇತ್ರಗಳಲ್ಲಿ ಇತರ ಸಮುದಾಯಗಳ ಮತದಾರರ ಅಳಿಸುವಿಕೆ ದರ ಶೇಕಡ 28.79ರಷ್ಟಿದೆ. ಅಂದರೆ ಈ ಕ್ಷೇತ್ರಗಳಲ್ಲಿ ಒಟ್ಟಾರೆ ಮತದಾರರ ಪೈಕಿ ನಾಲ್ಕನೇ ಒಂದಕ್ಕಿಂತ ಹೆಚ್ಚು ಭಾಗದಷ್ಟು ಮಂದಿ ಮತದಾನದ ಹಕ್ಕಿನಿಂದ ಹೊರಗುಳಿದಿದ್ದಾರೆ ಎಂದು ತಿಳಿಸಿದೆ.

ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಪ್ರತಿನಿಧಿಸುವ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಲ್ಲಿ ಅತಿ ಹೆಚ್ಚು ಹೆಸರುಗಳು ಕಡಿತಗೊಂಡಿವೆ. ಈ ಕ್ಷೇತ್ರದಲ್ಲಿ 1,07,722 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಸಚಿವ ರಿಝ್ವಾನ್ ಅರ್ಷದ್ ಅವರ ಶಿವಾಜಿನಗರ ಕ್ಷೇತ್ರದಲ್ಲಿ 81,230 ಮತದಾರರ ಹೆಸರುಗಳು ನಾಪತ್ತೆಯಾಗಿವೆ. ಮೈಸೂರಿನ ತನ್ವೀರ್ ಸೇಠ್ ಪ್ರತಿನಿಧಿಸುವ ನರಸಿಂಹರಾಜ ಕ್ಷೇತ್ರದಲ್ಲಿ 99,367 ಮತದಾರರನ್ನು ಕೈಬಿಡಲಾಗಿದೆ. ಕಲ್ಬುರ್ಗಿ ಉತ್ತರ ಕ್ಷೇತ್ರದಲ್ಲಿ ಶಾಸಕಿ ಕನೀಝ್ ಫಾತಿಮಾ ಅವರ ವ್ಯಾಪ್ತಿಯಲ್ಲಿ 1,05,257 ಮತದಾರರ ಹೆಸರುಗಳು ಅಳಿಸಿಹೋಗಿವೆ.ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಪ್ರತಿನಿಧಿಸುವ ರಾಮನಗರದಲ್ಲಿ 28,088 ಮತದಾರರು ಮತ್ತು ಯು.ಟಿ.ಖಾದರ್ ಫರೀದ್ ಪ್ರತಿನಿಧಿಸುವ ಮಂಗಳೂರು ಕ್ಷೇತ್ರದಲ್ಲಿ 16,989 ಹೆಸರುಗಳನ್ನು ಕೈಬಿಡಲಾಗಿದೆ. ಎನ್.ಎ.ಹ್ಯಾರಿಸ್ ಅವರ ಶಾಂತಿನಗರ, ರಹೀಮ್ ಖಾನ್ ಅವರ ಬೀದರ್, ಆಸಿಫ್ ರಾಜು ಸೇಠ್ ಅವರ ಬೆಳಗಾವಿ ಉತ್ತರ ಮತ್ತು ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರ ಶಿಗ್ಗಾಂವಿ ಕ್ಷೇತ್ರಗಳಲ್ಲೂ ಭಾರಿ ಪ್ರಮಾಣದ ಮತದಾರ ಹೆಸರು ಅಳಿಸುವಿಕೆ ದಾಖಲಾಗಿದೆ ಎಂದು ಉಲ್ಲೇಖಿಸಿದೆ.

ಅಲ್ಪಸಂಖ್ಯಾತ ಮತದಾರರ ಬಾಹುಳ್ಯವಿರುವ ಬೂತ್‌ಗಳಲ್ಲೇ ಹೆಚ್ಚಿನ ಹೆಸರುಗಳು ರದ್ದಾಗಿರುವುದು ಈ ಅಧ್ಯಯನದಿಂದ ಸಾಬೀತಾಗಿದೆ. ಮತದಾರರ ಹೆಸರುಗಳನ್ನು ಕೈಬಿಡಲು ಚುನಾವಣಾ ಆಯೋಗ ನೀಡಿರುವ ಕಾರಣಗಳನ್ನು ವಿಶ್ಲೇಷಿಸಿದಾಗ, ಇಡೀ ಪ್ರಕ್ರಿಯೆಯ ಪಾರದರ್ಶಕತೆಯ ಮೇಲೆಯೇ ಪ್ರಶ್ನೆಗಳು ಏಳುತ್ತವೆ. ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಪ್ರಮುಖವಾಗಿ ‘ಮೃತಪಟ್ಟವರು’, ‘ಗೈರುಹಾಜರಾದವರು’ ಆಬ್ಸೆಂಟ್ ಮತ್ತು ‘ಈಗಾಗಲೇ ಬೇರೆಡೆ ನೋಂದಾಯಿತರಾದವರು’ ಎಂಬ ವರ್ಗೀಕರಣಗಳನ್ನು ಬಳಸಲಾಗುತ್ತದೆ.ಇವುಗಳಲ್ಲಿ ಮರಣ ಹೊಂದಿದವರನ್ನು ಡೆತ್ ರಿಜಿಸ್ಟರ್ ಅಥವಾ ಅಧಿಕೃತ ಮರಣ ಪ್ರಮಾಣಪತ್ರಗಳ ಮೂಲಕ ಕಾಗದಪತ್ರಗಳ ಸಮೇತ ಖಚಿತಪಡಿಸಿಕೊಳ್ಳಲು ಸಾಧ್ಯವಿದೆ. ಆದರೆ ‘ಗೈರು’ ಮತ್ತು ‘ಈಗಾಗಲೇ ನೋಂದಾಯಿತ’ ಎಂಬ ವರ್ಗೀಕರಣಗಳು ಸಂಪೂರ್ಣವಾಗಿ ಸ್ಥಳೀಯ ಎಣಿಕೆದಾರರು ಅಥವಾ ಬಿಎಲ್‌ಒಗಳ ವೈಯಕ್ತಿಕ ಮೌಲ್ಯಮಾಪನ ಮತ್ತು ತೀರ್ಮಾನವನ್ನೇ ಅವಲಂಬಿಸಿರುತ್ತವೆ ಎಂದು ಹೇಳಿದೆ.

ಇಲ್ಲಿ ಕಂಡುಬರುವ ಅಂಕಿಅಂಶಗಳ ವ್ಯತ್ಯಾಸವು ಕಳವಳಕಾರಿಯಾಗಿದೆ. 2025ರ ಮತದಾರರ ಪಟ್ಟಿಯಲ್ಲಿ ಮುಸ್ಲಿಮರ ಒಟ್ಟು ಪಾಲು ಶೇಕಡ 12.9ರಷ್ಟಿತ್ತು. ಆದರೆ, ಎಣಿಕೆದಾರರ ವಿವೇಚನೆಗೆ ಬಿಟ್ಟಿರುವ ‘ಗೈರು’ ವರ್ಗದಡಿ ಅಳಿಸಲಾದವರಲ್ಲಿ ಮುಸ್ಲಿಮರ ಪಾಲು ಶೇಕಡ 17.1ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿ ಗೈರುಹಾಜರಿ ಕಾರಣ ನೀಡಿ ಒಟ್ಟು 15,15,088 ಮತದಾರರನ್ನು ಕೈಬಿಡಲಾಗಿದ್ದು, ಅವರಲ್ಲಿ 2,58,770 ಮಂದಿ ಮುಸ್ಲಿಮರಾಗಿದ್ದಾರೆ.ಅದೇ ರೀತಿ ‘ಈಗಾಗಲೇ ನೋಂದಾಯಿತ’ ಎಂಬ ಕಾರಣ ನೀಡಿ ತೆಗೆದುಹಾಕಲಾದ 7,08,666 ಮತದಾರರಲ್ಲಿ 1,43,940 ಮಂದಿ ಮುಸ್ಲಿಮರಾಗಿದ್ದಾರೆ. ಅಂದರೆ ಈ ವರ್ಗದಲ್ಲಿ ಮುಸ್ಲಿಮರ ಪಾಲು ಶೇಕಡ 20.3ರಷ್ಟಿದೆ. ಬೇರೆಡೆ ನೋಂದಣಿಯಾಗಿದೆ ಎಂದು ಕೈಬಿಡಲಾದ ಪ್ರತಿ ಐದು ಮತದಾರರಲ್ಲಿ ಒಬ್ಬರು ಮುಸ್ಲಿಮರಾಗಿದ್ದಾರೆ. ಆದರೆ ಮೂಲ ಮತದಾರರ ಪಟ್ಟಿಯಲ್ಲಿ ಅವರ ಪ್ರಮಾಣ ಎಂಟು ಮತದಾರರಿಗೆ ಒಬ್ಬರಷ್ಟಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ವಸ್ತುನಿಷ್ಠ ದಾಖಲೆಗಳನ್ನು ಆಧರಿಸಿದ ‘ಮೃತಪಟ್ಟವರ’ ವರ್ಗದಲ್ಲಿ ಈ ಅಸಮಾನತೆ ಕಂಡುಬಂದಿಲ್ಲ.ಸಾವನ್ನಪ್ಪಿದ್ದಾರೆ ಎಂಬ ಕಾರಣ ನೀಡಿ ತೆಗೆದುಹಾಕಲಾದ ಮತದಾರರಲ್ಲಿ ಮುಸ್ಲಿಮರ ಸಂಖ್ಯೆ 2,00,277 ಆಗಿದ್ದು, ಇದು ಒಟ್ಟು ಮರಣ ಆಧಾರಿತ ಅಳಿಸುವಿಕೆಗಳ ಶೇಕಡ 12.2ರಷ್ಟಿದೆ. ಈ ಪ್ರಮಾಣವು ಅವರ ಒಟ್ಟಾರೆ ಜನಸಂಖ್ಯಾ ಅನುಪಾತಕ್ಕೆ ಶೇ. 12.9 ಕ್ಕೆ ಬಹುತೇಕ ಸರಿಸಮಾನವಾಗಿದೆ.ಅಧಿಕೃತ ದಾಖಲೆಗಳಿರುವಲ್ಲಿ ಜನಸಂಖ್ಯೆಗೆ ತಕ್ಕಂತೆ ಇರುವ ಪ್ರಮಾಣವು, ಎಣಿಕೆದಾರರ ವೈಯಕ್ತಿಕ ತೀರ್ಮಾನಕ್ಕೆ ಒಳಪಟ್ಟ ವರ್ಗಗಳಲ್ಲಿ ಮಾತ್ರ ಹಠಾತ್ತನೆ ಶೇಕಡ 17ರಿಂದ 20ಕ್ಕೆ ಏಕೆ ಜಿಗಿಯಿತು ಎಂಬುದು ಗಂಭೀರವಾದ ಪ್ರಶ್ನೆಯಾಗಿದೆ ಎಂದು ತಿಳಿಸಿದೆ.

ಕ್ಷೇತ್ರ ಮಟ್ಟದ ಅಧಿಕಾರಿಗಳು ಯಾವ ಮಾನದಂಡದ ಮೇಲೆ ಮತದಾರರನ್ನು ಗೈರುಹಾಜರಾಗಿದ್ದಾರೆ ಎಂದು ತೀರ್ಮಾನಿಸಿದರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.ಹೆಸರು ತೆಗೆಯುವ ಮೊದಲು ಆ ಮತದಾರರ ಮನೆಗಳಿಗೆ ಎಷ್ಟು ಬಾರಿ ಖುದ್ದು ಭೇಟಿ ನೀಡಲಾಗಿತ್ತು ಎನ್ನುವುದಕ್ಕೆ ಯಾವುದೇ ಸಾರ್ವಜನಿಕ ದಾಖಲೆಗಳಿಲ್ಲ. ಕೇವಲ ಹೆಸರುಗಳನ್ನು ಕೈಬಿಟ್ಟಿರುವುದು ಮಾತ್ರವಲ್ಲದೆ, ಹೊಸ ಮತದಾರರ ಸೇರ್ಪಡೆ ಪ್ರಕ್ರಿಯೆಯಲ್ಲೂ ಚುನಾವಣಾ ಆಯೋಗದ ಲೆಕ್ಕಾಚಾರಗಳು ಭಾರೀ ವಿರೋಧಾಭಾಸವನ್ನು ಪ್ರದರ್ಶಿಸಿವೆ.ವಿಶೇಷ ಪರಿಷ್ಕರಣೆಯ ಸಮಯದಲ್ಲಿ ಸಲ್ಲಿಕೆಯಾದ ಅರ್ಜಿಗಳಿಗಿಂತಲೂ ದಾಖಲಾದ ಸೇರ್ಪಡೆಗಳ ಸಂಖ್ಯೆಯೇ ಅಧಿಕವಾಗಿದೆ. ಜೂನ್ 16, 2026ರಿಂದ ದತ್ತಾಂಶವನ್ನು  ಗಮನಿಸುತ್ತಿರುವ ಸಂಕಲ್ಪ್ ಸಂಸ್ಥೆಯ ಪ್ರಕಾರ, ಆಯೋಗವು ಸ್ವೀಕರಿಸಿದ ಫಾರ್ಮ್ 9 ಅರ್ಜಿಗಳ ಒಟ್ಟು ಸಂಖ್ಯೆ 7,85,716 ಆಗಿದೆ.ಆದರೆ ಆಯೋಗವು ದಾಖಲಿಸಿರುವ ಹೊಸ ಸೇರ್ಪಡೆಗಳ ಸಂಖ್ಯೆ 10,08,038 ಆಗಿದೆ. ಅಂದರೆ ಸ್ವೀಕೃತ ಅರ್ಜಿಗಳಿಗಿಂತಲೂ 2,22,322 ಹೆಚ್ಚುವರಿ ಮತದಾರರನ್ನು ಪಟ್ಟಿಗೆ ಸೇರಿಸಲಾಗಿದೆ. ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆಗಿಂತ ಸುಮಾರು 1.3 ಪಟ್ಟು ಹೆಚ್ಚು ಮತದಾರರು ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಉಲ್ಲೇಖಿಸಿದೆ.

ಹಕ್ಕುಗಳು ಮತ್ತು ಆಕ್ಷೇಪಣೆಗಳ ಪ್ರಕ್ರಿಯೆಯ ಮೂಲಕ 1,88,324 ಮತದಾರರನ್ನು ಕೈಬಿಡಲಾಗಿದೆ ಮತ್ತು 8,96,519 ನಮೂನೆಗಳನ್ನು ಮಾರ್ಪಡಿಸಲಾಗಿದೆ ಎಂದು ಅಂಕಿಅಂಶಗಳು ಹೇಳುತ್ತವೆ.ಹೊಸ ಸೇರ್ಪಡೆ, ಹೆಸರು ತೆಗೆಯುವಿಕೆ, ತಿದ್ದುಪಡಿ ಮತ್ತು ವಿಳಾಸ ಬದಲಾವಣೆ ಸೇರಿದಂತೆ ಟ್ರ್ಯಾಕ್ ಮಾಡಲಾದ ಐದು ಪ್ರಮುಖ ನಮೂನೆಗಳ ಅಡಿಯಲ್ಲಿ ಒಟ್ಟು 19,26,935 ಅರ್ಜಿಗಳು ದಾಖಲಾಗಿದ್ದವು.ಆದರೆ 7.85 ಲಕ್ಷ ಫಾರ್ಮ್ 9 ಅರ್ಜಿಗಳಿಗೆ ಪ್ರತಿಯಾಗಿ 10.08 ಲಕ್ಷ ಹೆಸರುಗಳು ಹೇಗೆ ಸೇರ್ಪಡೆಯಾದವು ಎಂಬುದಕ್ಕೆ ಚುನಾವಣಾ ಆಯೋಗವು ಯಾವುದೇ ಅಧಿಕೃತ ಸಮಜಾಯಿಷಿ ಅಥವಾ ಸಮನ್ವಯ ವರದಿಯನ್ನು ಸಾರ್ವಜನಿಕವಾಗಿ ನೀಡಿಲ್ಲ ಎಂದು ತಿಳಿಸಿದೆ.

ಅರ್ಜಿಗಳ ವಿಲೇವಾರಿ ಸ್ಥಿತಿಯನ್ನು ಕೂಡ ಪಾರದರ್ಶಕವಾಗಿ ಬಹಿರಂಗಪಡಿಸಲಾಗಿಲ್ಲ. ನ್ಯಾಯಸಮ್ಮತ, ಪಾರದರ್ಶಕ ಮತದಾನ ವ್ಯವಸ್ಥೆ ನಮ್ಮ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಆದರೆ ಕರ್ನಾಟಕದ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಹೊರಬಿದ್ದಿರುವ ಈ ಅಂಕಿಅಂಶಗಳು ಆ ಇಡೀ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳಿಗೆ ಕಾರಣವಾಗಿದೆ. ನಿರ್ದಿಷ್ಟ ಸಮುದಾಯದ ಮತದಾರರು ಹೆಚ್ಚಿರುವ ಕ್ಷೇತ್ರಗಳು, ವಿರೋಧ ಪಕ್ಷದ ಭದ್ರಕೋಟೆಗಳು ಮತ್ತು ಕ್ಷೇತ್ರ ಮಟ್ಟದ ಅಧಿಕಾರಿಗಳ ವೈಯಕ್ತಿಕ ತೀರ್ಮಾನಕ್ಕೆ ಒಳಪಟ್ಟ ವಿಭಾಗಗಳಲ್ಲೇ ಹೆಚ್ಚಿನ ಹೆಸರುಗಳು ರದ್ದಾಗಿರುವುದು ಕೇವಲ ಕಾಕತಾಳೀಯವಾಗಿ ಕಾಣುತ್ತಿಲ್ಲ.ಇದರ ಜೊತೆಗೆ ಅಧಿಕೃತ ಅರ್ಜಿಗಳಿಲ್ಲದೆಯೇ ಲಕ್ಷಾಂತರ ಹೊಸ ಮತದಾರರು ಪಟ್ಟಿಗೆ ಸೇರ್ಪಡೆಯಾಗಿರುವುದು ಇಡೀ ಪ್ರಕ್ರಿಯೆಯ ಹಿಂದೆ ವ್ಯವಸ್ಥಿತ ಲೋಪಗಳಿವೆಯೇ ಎಂಬ ಸಂಶಯವನ್ನು ಹುಟ್ಟುಹಾಕಿದೆ ಎಂದು ಹೇಳಿದೆ.

ಎಸ್ ಐ ಆರ್ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿರುವ ವರದಿಗಳು ಬರುತ್ತಲೇ ಇವೆ. ಅಕ್ರಮವಾಗಿ ನಿರ್ದಿಷ್ಟ ವರ್ಗಗಳು, ಸಮುದಾಯಗಳ ಹೆಸರುಗಳನ್ನು ತೆಗೆದುಹಾಕಲಾಗುತ್ತಿರುವ ಬಗ್ಗೆ ನೂರಾರು ವರದಿಗಳು ಬಂದಿವೆ. ಹಲವೆಡೆ ಇದು ಸಾಕ್ಷ್ಯ ಸಮೇತವೂ ಸಾಬೀತಾಗಿದೆ. ಈ ನಡುವೆ ಕೇಂದ್ರ ಚುನಾವಣಾ ಆಯೋಗದೊಳಗೇ ಚುನಾವಣಾ ಆಯುಕ್ತರ ನಡುವೆ ಸಮನ್ವಯ ಇಲ್ಲ, ಅವರೊಳಗೆ ಭಿನ್ನಾಭಿಪ್ರಾಯವಿದೆ, ಅಲ್ಲಿ ಬಹುಮತದಿಂದ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ, ಮುಖ್ಯ ಚುನಾವಣಾ ಆಯುಕ್ತರ ನಿರ್ಧಾರಗಳ ಬಗ್ಗೆ ಇತರ ಆಯುಕ್ತರಿಗೆ ತೀವ್ರ ಅಸಮಾಧಾನಗಳಿದ್ದವು ಎಂಬ ಮಾಧ್ಯಮ ವರದಿಗಳು ಈಗಾಗಲೇ ದೇಶಾದ್ಯಂತ ತೀವ್ರ ಸಂಶಯಗಳಿಗೆ ಕಾರಣವಾಗಿದೆ. ಅದಕ್ಕಾಗಿಯೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಹಾಗು ಅವರ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ದೇಶದ ಎಲ್ಲ ವಿಪಕ್ಷಗಳು ಆಗ್ರಹಿಸುತ್ತಿವೆ. ಅದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಮುಕ್ತಾಯಗೊಂಡ ಎಸ್ ಐ ಆರ್ ನಲ್ಲಿ ಇಂತಹ ಆತಂಕಕಾರಿ ಅಂಕಿ ಅಂಶಗಳು ಬಯಲಾಗಿರುವುದು ಕಳವಳಕಾರಿಯಾಗಿದೆ ಎಂದಿದೆ.

ಈ ಎಲ್ಲಾ ವ್ಯತ್ಯಾಸಗಳಿಗೆ ಸಾಕ್ಷ್ಯಾಧಾರಿತ ದಾಖಲೆಗಳೊಂದಿಗೆ ಸೂಕ್ತ ವಿವರಣೆ ನೀಡಿ ಮತದಾರರ ಪಟ್ಟಿಯ ಪಾವಿತ್ರ್ಯತೆಯನ್ನು ಕಾಪಾಡುವುದು ಚುನಾವಣಾ ಆಯೋಗದ ಸಾಂವಿಧಾನಿಕ ಕರ್ತವ್ಯವಾಗಿದೆ. ಆದಷ್ಟು ಶೀಘ್ರವೇ ರಾಜ್ಯ ಚುನಾವಣಾ ಆಧಿಕಾರಿ ಹಾಗು ಕೇಂದ್ರ ಚುನಾವಣಾ ಆಯೋಗ ಈ ಬಗ್ಗೆ ಸಮರ್ಪಕ ವಿವರಣೆ ನೀಡಬೇಕು. ಜೊತೆಗೆ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾದ ಎಸ್ ಐ ಆರ್ ಅನ್ನೇ ರದ್ದು ಪಡಿಸಬೇಕು, ಈ ಹಿಂದಿನ ಮತದಾರರ ಪಟ್ಟಿಯನ್ನೇ ಮುಂದಿನ ಎಲ್ಲ ಚುನಾವಣೆಗಳಿಗೆ ಬಳಸಬೇಕು, ಎಸ್ ಐ ಆರ್ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆ ಆಗಬೇಕು ಹಾಗು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಆಗಬೇಕು ಎಂದು ಪ್ರಕಟನೆಯಲ್ಲಿ ಕೆಆರ್‌ಎಂಒ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor