×
Ad

ಮಂಗಳವಾರ ಕರೆಕೊಟ್ಟಿದ್ದ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ತಡೆ; ಒಂದು ದಿನದ ಮಟ್ಟಿಗೆ ಮುಷ್ಕರ ಮುಂದೂಡಲು ಆದೇಶ

Update: 2025-08-04 15:44 IST

ಬೆಂಗಳೂರು : ಹಿಂಬಾಕಿ ಪಾವತಿ ಮತ್ತು ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮಂಗಳವಾರದಿಂದ ನಡೆಸಲು ಉದ್ದೇಶಿಸಿರುವ ಮುಷ್ಕರಕ್ಕೆ ಹೈಕೋರ್ಟ್‌ ಒಂದು ದಿನದ ಮಟ್ಟಿಗೆ ತಡೆಯಾಜ್ಞೆ ನೀಡಿದೆ.

ಸಾರಿಗೆ ಸಿಬ್ಬಂದಿಯ ಮುಷ್ಕರ ಪ್ರಶ್ನಿಸಿ ಬೆಂಗಳೂರಿನ ಜೆ.ಸುನೀಲ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್‌.ಮುದಗಲ್‌ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್‌ ಕಮಾಲ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.

ಜತೆಗೆ, ಮುಖ್ಯಮಂತ್ರಿ ಮತ್ತು ಕೆಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ನಡುವೆ ನಡೆಯುವ ಸಂಧಾನ ಸಭೆಯ ವಿವರಗಳನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರಕಾರದ ಪರ ವಕೀಲರಿಗೆ ನಿರ್ದೇಶಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರಕಾರ, ರಾಜ್ಯ ಸಾರಿಗೆ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಸಾರಿಗೆ ನಿಗಮ, ಈಶಾನ್ಯ (ಕಲ್ಯಾಣ ಕರ್ನಾಟಕ) ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ನೋಟಿಸ್ ಹಾಗೂ ಕೆಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಆಗಸ್ಟ್ 5ಕ್ಕೆ ಮುಂದೂಡಿತು.

ಅರ್ಜಿದಾರರ ವಾದವೇನು?

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲೆ ದೀಕ್ಷಾ ಅಮೃತೇಶ್‌ ವಾದ ಮಂಡಿಸಿ, ರಾಜ್ಯ ಸರಕಾರ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ 2013 (ಎಸ್ಮಾ) ಅಡಿ ಜುಲೈ 14ರಿಂದ ಅನ್ವಯಿಸುವಂತೆ ಮುಷ್ಕರಕ್ಕೆ ನಿಷೇಧ ವಿಧಿಸಿದೆ. ಹೀಗಿದ್ದರೂ, ಸಾರಿಗೆ ನೌಕರರು ಮಂಗಳವಾರದಿಂದ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ, ಜನ ಸಾಮಾನ್ಯರಿಗೆ ತೊಂದರೆಯಾಗಲಿದೆ. ಆದ್ದರಿಂದ, ಸಾರಿಗೆ ನೌಕರರ ಮತ್ತು ಸಕ್ಷಮ ಪ್ರಾಧಿಕಾರದ ನಡುವೆ ಒಮ್ಮತ ಮೂಡಿಸಲು ಉನ್ನತ ಮಟ್ಟದ ಸಭೆ ನಡೆಸಲು ಆದೇಶಿಸಬೇಕು. ಮುಷ್ಕರ ನಡೆಸಲು ಸಾರಿಗೆ ಸಿಬ್ಬಂದಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಸಾರಿಗೆ ನಿಗಮಗಳ ಪರ ವಕೀಲೆ ಎಚ್.ಆರ್.ರೇಣುಕಾ ವಾದ ಮಂಡಿಸಿ, ಕಾರ್ಮಿಕ ಸಂಧಾನ ಅಧಿಕಾರಿ ಸಮ್ಮುಖದಲ್ಲಿ ಸಂಧಾನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ನಡುವೆ, ಸಾರಿಗೆ ಇಲಾಖೆ ಕಾರ್ಯದರ್ಶಿ, ಸಚಿವರು ಸಭೆ ನಡೆಸಿದ್ದಾರೆ. ಸದ್ಯ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಾರಿಗೆ ಸಿಬ್ಬಂದಿಯೊಂದಿಗೆ ಸಭೆ ನಡೆಯುತ್ತಿದೆ. ಕಾರ್ಮಿಕ ನ್ಯಾಯ ಮಂಡಳಿಯಲ್ಲಿ ಆಗಸ್ಟ್‌ 7ರಂದು ವಿಚಾರಣೆ ನಿಗದಿಯಾಗಿದೆ. ಆದ್ದರಿಂದ, ಕನಿಷ್ಠ ಎರಡು ದಿನಗಳ ಮಟ್ಟಿಗೆ ವಿಚಾರಣೆ ಮುಂದೂಡಬೇಕು ಎಂದು ಕೋರಿದರು.

ರಾಜ್ಯ ಸರಕಾರದ ಪರವಾಗಿ ವಾದ ಮಂಡಿಸಿದ ವಕೀಲೆ ನಿಲೋಫರ್‌ ಅಕ್ಬರ್‌, ಮುಖ್ಯಮಂತ್ರಿಗಳು ಬೆಳಗ್ಗೆಯಿಂದ ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಅಡ್ವೊಕೇಟ್‌ ಜನರಲ್‌ ಅವರು ಸದ್ಯ ದೆಹಲಿ ಪ್ರವಾಸದಲ್ಲಿದ್ದಾರೆ. ಆದ್ದರಿಂದ, ಅರ್ಜಿ ವಿಚಾರಣೆ ಮುಂದೂಡಬೇಕು ಎಂದು ಕೋರಿದರು.

ಅಂತಿಮವಾಗಿ ನ್ಯಾಯಪೀಠ, ಸಾರ್ವಜನಿಕರಿಗೆ ಸಮಸ್ಯೆಯಾಗುವುದರಿಂದ ಒಂದು ದಿನದ ಮಟ್ಟಿಗೆ ಮುಷ್ಕರವನ್ನು ಪ್ರತಿಭಟನಾಕಾರರು ಮುಂದೂಡಬೇಕು ಎಂದು ನಿರ್ದೇಶಿಸಿತಲ್ಲದೆ, ಮುಖ್ಯಮಂತ್ರಿ ಮತ್ತು ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ನಡುವೆ ಇಂದು ನಡೆಯುತ್ತಿರುವ ಸಭೆಯ ನಿರ್ಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಸೂಚಿಸಿ, ವಿಚಾರಣೆ ಮುಂದೂಡಿತು.

ಸಿಜೆ ನೇತೃತ್ವದ ಪೀಠದಲ್ಲಿ ಮುಂದಿನ ವಿಚಾರಣೆ:

ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಯುವ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ಸೋಮವಾರ ಕಲಾಪವಿರದ ಕಾರಣ, ಹಿರಿಯ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಮಂಗಳವಾರ ಅರ್ಜಿಯು ಎಂದಿನಂತೆ ಸಿಜೆ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆಯೇ ವಿಚಾರಣೆಗೆ ಬರಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News