ಬೆಂಗಳೂರು : ನೀಟ್‌-ಯುಜಿ ಕೌನ್ಸೆಲಿಂಗ್‌ನಲ್ಲಿ ಅನಿವಾಸಿ ಭಾರತೀಯ (ಎನ್‌ಆರ್‌ಐ) ಕೋಟಾದಡಿ ಇರುವ ಸೀಟುಗಳಿಗೆ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಅಥವಾ ಇತರ ಹಿಂದುಳಿದ ವರ್ಗ (ಒಬಿಸಿ) ಮೀಸಲಾತಿ ಅನ್ವಯಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಎನ್‌ಆರ್‌ಐ ಪ್ರಾಯೋಜಿತ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ್ದರೂ ತನ್ನ ಒಬಿಸಿ (ಕೆನೆಪದರದ ಹೊರಗೆ) 2ಎ ಮೀಸಲಾತಿ ಸ್ಥಾನಮಾನ ಪರಿಗಣಿಸಬೇಕು ಎಂದು ಕೋರಿ ಬೆಳಗಾವಿಯ 18 ವರ್ಷದ ವಿದ್ಯಾರ್ಥಿನಿ ಜೂಹಿ ದೀಪಕ್‌ ಕಟವಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ನ್ಯಾಯಪೀಠ (ಧಾರವಾಡ) ಈ ಆದೇಶ ಮಾಡಿದೆ.

ವೈದ್ಯಕೀಯ ಪ್ರವೇಶದಲ್ಲಿ ಎನ್‌ಆರ್‌ಐಗಳಿಗೆ ಶೇ.15 ಸ್ಥಾನಗಳನ್ನು ಪ್ರತ್ಯೇಕವಾಗಿ ಮೀಸಲಿಡಲಾಗಿದೆ. ನೀಟ್‌-ಯುಜಿ 2026ರ ಮಾಹಿತಿ ಕೈಪಿಡಿಯ ಪ್ರಕಾರ, ಎನ್‌ಆರ್‌ಐ/ಒಸಿಐ/ಪಿಐಒ ಅಭ್ಯರ್ಥಿಗಳಿಗೆ ಎನ್‌ಆರ್‌ಐ ಕೋಟಾದ ಸ್ಥಾನಗಳು ಹಾಗೂ ಅಖಿಲ ಭಾರತ ಕೋಟಾ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳ ಸಾಮಾನ್ಯ ಸ್ಥಾನಗಳನ್ನು ಮಾತ್ರ ತೋರಿಸಲಾಗುತ್ತದೆ. ಒಬ್ಬ ಅಭ್ಯರ್ಥಿ ಒಂದೇ ವಿಧದ ಮೀಸಲಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಕೌನ್ಸೆಲಿಂಗ್‌ ನಿಯಮಗಳ ಪ್ರಕಾರ, ಎನ್‌ಆರ್‌ಐ ಅಭ್ಯರ್ಥಿಗಳನ್ನು ಸಾಮಾನ್ಯ (ಅನ್‌ರಿಸರ್ವ್ಡ್) ವರ್ಗದಲ್ಲೇ ಪರಿಗಣಿಸಲಾಗುತ್ತದೆ. ಆದ್ದರಿಂದ, ಎನ್‌ಆರ್‌ಐ ಕೋಟಾದೊಳಗೆ ಎಸ್‌ಸಿ, ಎಸ್‌ಟಿ ಅಥವಾ ಒಬಿಸಿ ಮೀಸಲಾತಿ ಅನ್ವಯಿಸುವಂತೆ ನ್ಯಾಯಾಲಯ ಹೊಸ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲ. ಅರ್ಜಿದಾರರು ಎನ್‌ಆರ್‌ಐ ಕೋಟಾಕ್ಕೆ ಅಗತ್ಯವಾದ ಕನಿಷ್ಠ ಅಂಕಗಳ ಮಿತಿಯನ್ನೂ ದಾಟಿಲ್ಲ ಎಂದಿರುವ ನ್ಯಾಯಪೀಠ, ಅರ್ಜಿಯಲ್ಲಿ ಯಾವುದೇ ಮೆರಿಟ್ (ವಿಚಾರಣಾ ಅರ್ಹತೆ) ಇಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.

ಪ್ರಕರಣವೇನು?

ಅರ್ಜಿದಾರ ವಿದ್ಯಾರ್ಥಿನಿ ತಮ್ಮ ತಂದೆಯ ಸಹೋದರಿಯ ಎನ್‌ಆರ್‌ಐ ಪ್ರಾಯೋಜಕತ್ವದ ಆಧಾರದಲ್ಲಿ ನೀಟ್‌-ಯುಜಿ 2026ರ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದ್ದರು. ಎನ್‌ಆರ್‌ಐ ಕೋಟಾದಡಿ ಅರ್ಜಿ ಸಲ್ಲಿಸಿದ ಕಾರಣಕ್ಕೆ ತಮ್ಮನ್ನು ಸಾಮಾನ್ಯ ವರ್ಗದಲ್ಲಿ ಪರಿಗಣಿಸಲಾಗಿದೆ. ಆದರೆ, ತಾವು ಒಬಿಸಿ ವರ್ಗಕ್ಕೆ ಸೇರಿದವರಾಗಿರುವುದರಿಂದ ಎನ್‌ಆರ್‌ಐ ಕೋಟಾದಲ್ಲಿಯೂ ಒಬಿಸಿ ಮೀಸಲಾತಿಯ ಪ್ರಯೋಜನ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ್ದ ವಿದ್ಯಾರ್ಥಿನಿಯ ಪರ ವಕೀಲರು, ಒಬಿಸಿ ಸ್ಥಾನಮಾನವು ಜನ್ಮ ಮತ್ತು ಶಾಸನಬದ್ಧ ಪ್ರಮಾಣಪತ್ರಕ್ಕೆ ಸಂಬಂಧಿಸಿದ್ದಾಗಿದ್ದು, ಎನ್‌ಆರ್‌ಐ ಪ್ರಾಯೋಜಿತ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಅದು ರದ್ದಾಗುವುದಿಲ್ಲ. ಆದ್ದರಿಂದ, ಉಳಿದ ಕೌನ್ಸೆಲಿಂಗ್‌ ಸುತ್ತುಗಳಲ್ಲಿ ಅರ್ಜಿದಾರೆಗೆ ಎನ್‌ಆರ್‌ಐ-ಒಬಿಸಿ ಅಭ್ಯರ್ಥಿಯಾಗಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಪ್ರತಿವಾದಿಗಳ ಪರ ವಕೀಲರು, ಅರ್ಜಿದಾರರು ಶೇ 48.33 ಅಂಕ ಗಳಿಸಿದ್ದು, ಎನ್‌ಆರ್‌ಐ ಕೋಟಾದಡಿ ಪರಿಗಣಿಸಲು ಅಗತ್ಯವಾದ ಕನಿಷ್ಠ ಅರ್ಹತೆಯನ್ನೂ ಪಡೆದಿಲ್ಲ ಎಂದು ನ್ಯಾಯಾಲಯದ ಗ‌ಮನಕ್ಕೆ ತಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor