ವಿಶಾಲಕುಮಾರ್ ಮೇತ್ರೆ 

ಬೀದರ್: ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾನೆ ಎಂಬ ಶಂಕೆಯ ಮೇರೆಗೆ ಭಾಲ್ಕಿ ತಾಲೂಕಿನ ಯಣಕೂರ್ ಗ್ರಾಮದ ವಿಶಾಲಕುಮಾರ್ ಮೇತ್ರೆ (24) ಎಂಬಾತನನ್ನು ಎನ್‌ಐಎ ತಂಡ ಬಂಧಿಸಿದ್ದು, ಈ ಸಂಬಂಧ ಖಟಕಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶಾಲಕುಮಾರ್ ಮೇತ್ರೆ ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸದಸ್ಯರು ಹಾಗೂ ಅಕ್ರಮ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮತ್ತು ಮಾರಾಟದಲ್ಲಿ ತೊಡಗಿರುವ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ, ಅಕ್ರಮ ಶಸ್ತ್ರಾಸ್ತ್ರ ಖರೀದಿ ಹಾಗೂ ಕಳ್ಳಸಾಗಣೆ ಕುರಿತು ನಿರಂತರವಾಗಿ ಸಂಭಾಷಣೆ ನಡೆಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಭಾರತ ಸರ್ಕಾರ ನಿಷೇಧಿಸಿರುವ ಹಾಗೂ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿರುವ ಪಾಕಿಸ್ತಾನ ಮೂಲದ ಶಹಝಾದ್ ಭಟ್ಟಿ ಹಾಗೂ ಆತನ ಸಹಚರರಾದ ರಾಣಾ ಹುನೈನ್ ಮತ್ತು ನೋಮಿ ಖಾನ್ ನೊಂದಿಗೆ ವಿಶಾಲಕುಮಾರ್ ವಾಟ್ಸ್‌ಆ್ಯಪ್ ಮೂಲಕ ಅಕ್ರಮ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮತ್ತು ಮಾರಾಟದ ಕುರಿತು ಸಂಭಾಷಣೆ ನಡೆಸಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಅ.1ರಂದು ಎನ್‌ಐಎ ತಂಡ ವಿಶಾಲಕುಮಾರ್‌ನನ್ನು ಯುಎಪಿಎ ಕಾಯ್ದೆಯಡಿ ಬಂಧಿಸಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor