ಬೆಂಗಳೂರು : ಹೊಸ ಕನಿಷ್ಠ ವೇತನ ಪರಿಷ್ಕರಣೆಯನ್ನು ತಡೆ ಹಿಡಿದು ಹಳೆಯ ಕನಿಷ್ಠ ವೇತನವನ್ನು ಮುಂದುವರಿಸುವ ಸಂಬಂಧ ನಗರಾಭಿವೃದ್ದಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ ಹೊರಡಿಸಿದ್ದ ಸುತ್ತೋಲೆಗೆ ಹೈಕೋರ್ಟ್ ತಡೆ ನೀಡಿದೆ.

ಸುತ್ತೋಲೆ ಪ್ರಶ್ನಿಸಿ ಆಯುಕ್ತಾಲಯದ ನೌಕರರ ಪರವಾಗಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರಕರಣವನ್ನು ವಿಚಾರಣೆ ನಡೆಸುವ ಅಗತ್ಯವಿದ್ದು, ಸರ್ಕಾರದ ವಾದ ಆಲಿಸಬೇಕಿದೆ ಎಂದು ಹೇಳಿ ಮುಂದಿನ ವಿಚಾರಣೆವರೆಗೆ ನಗರಾಭಿವೃದ್ದಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ 2026ರ ಅಕ್ಟೋಬರ್ 9ರಂದು ಹೊರಡಿಸಿರುವ ಸುತ್ತೋಲೆಗೆ ತಡೆ ನೀಡಿತು. ಜತೆಗೆ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಕಾರ್ಮಿಕ ಇಲಾಖೆ, ಆಯುಕ್ತಾಲಯದ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?

ರಾಜ್ಯ ಸರ್ಕಾರ 2026ರ ಮೇ 22ರಂದು ರಾಜ್ಯದ 83 ನಿಗದಿತ ಉದ್ಯೋಗಗಳಿಗೆ ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಿತ್ತು. ಹಲವು ಇಲಾಖೆಗಳು ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ತಂದಿದ್ದವು. ಈ ಮಧ್ಯೆ ವೇತನ ಪರಿಷ್ಕರಣೆ ಮಾಡಿ ಕಾರ್ಮಿಕ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆ-2019ರ ಅಂಶಗಳಿಗೆ ಪೂರಕವಾಗಿದೆಯೇ ಎಂಬುದನ್ನು ಪರಿಶೀಲಿಸಲು ರಾಜ್ಯ ಸರ್ಕಾರ ಸಚಿವ ಸಂಪುಟದ ಉಪ ಸಮಿತಿ ರಚಿಸಿತ್ತು.

ಆದ್ದರಿಂದ, 2026ರ ಮೇ 22ರ ಅಧಿಸೂಚನೆಯ ಕನಿಷ್ಠ ವೇತನ ದರಗಳ ಬದಲಿಗೆ 2025ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರಲ್ಲಿ ನಿಗದಿಪಡಿಸಿ ಕನಿಷ್ಠ ವೇತನ ಹಾಗೂ ವ್ಯತ್ಯಸ್ಥ ತುಟ್ಟಿ ಭತ್ಯೆಗೆ (ವಿಡಿಎ) ಸಂಬಂಧಿಸಿದ 2022ರ ಜುಲೈ 28ರಂದು ಹೊರಡಿಸಿರುವ ಅಧಿಸೂಚನೆಯಂತೆ ಕನಿಷ್ಠ ವೇತನ ಪಾವತಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಈ ಸುತ್ತೋಲೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ಸುತ್ತೋಲೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿರುವುದರಿಂದ ಆಯುಕ್ತಾಲಯದ ನೌಕರರಿಗೆ 2026ರ ಮೇ 22ರ ಅಧಿಸೂಚನೆಯಂತೆ ಕನಿಷ್ಠ ವೇತನ ಪಾವತಿಸಬೇಕಾಗುತ್ತದೆ. ಈ ಹಿಂದೆಯೂ 2026ರ ಮೇ 22 ಕನಿಷ್ಠ ವೇತನ ಹೆಚ್ಚಳ ಅಧಿಸೂಚನೆ ತಡೆ ಹಿಡಿದು ರಾಜ್ಯ ಲೆಕ್ಕಪರಿಶೋಧನಾ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಸೇರಿದಂತೆ ಕಲವು ಇಲಾಖೆ, ಸಂಸ್ಥೆಗಳು ಸಹ ಸುತ್ತೋಲೆಗಳನ್ನು ಹೊರಡಿಸಿದ್ದವು. ಆ ಸುತ್ತೋಲೆಗಳಿಗೂ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor