ಸಿದ್ದರಾಮಯ್ಯ

ಬೆಂಗಳೂರು : ಸದ್ಯ ರಾಜ್ಯ ರಾಜಕೀಯದಲ್ಲಿ 'ಸ್ಟಿಂಗ್ ಆಪರೇಶನ್ʼ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಇದರ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನ ಪ್ರತಿ ಲಭ್ಯವಾಗಿದೆ. ಐದು ಪುಟಗಳ ಈ ದೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಟ್ಟು 12 ಅಂಶಗಳನ್ನು ಉಲ್ಲೇಖ ಮಾಡಿದ್ದಾರೆ. ಹೀಗೆ ಮಾಜಿ ಸಿಎಂ ದೂರಿನ ಒಟ್ಟು 12 ಅಂಶಗಳು ಈ ಕೆಳಗಿನಂತಿವೆ.

1. ನನ್ನ ವೈಯಕ್ತಿಕ ಘನತೆ, ಸಾರ್ವಜನಿಕ ಪ್ರತಿಷ್ಠೆ ಹಾಗೂ ರಾಜಕೀಯ ಜೀವನಕ್ಕೆ ಹಾನಿ ಮತ್ತು ಮಾನ ಹಾನಿ ಮಾಡುವ ಸ್ಪಷ್ಟ ಉದ್ದೇಶದಿಂದ ಸುಳ್ಳು ದೋಷಪೋರಿತ ಹಾಗೂ ಅತ್ಯಂತ ಮಾನಹಾನಿಕರ ವಿಷಯವನ್ನು ಸೃಷ್ಟಿಸಿ ಪ್ರಕಟಿಸಿ ವ್ಯಾಪಕವಾಗಿ ಪ್ರಸಾರ ಮಾಡುತ್ತಿರುವ ಕೆಲವು ವ್ಯಕ್ತಿಗಳ ವಿರುದ್ದ ತಕ್ಷಣ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಕೋರುತ್ತಿದ್ದೇನೆ.

2. ಸೆಪ್ಟೆಂಬರ್ 27 ರಂದು Karnataka honey trap ಎಂಬ ಯೂಟ್ಯೂಬ್ ವಾಹಿನಿಯಲ್ಲಿ KARNATAKA HONEYTRAP NEXUS PART 1 ಎಂದು ವಿಡೀಯೋವನ್ನು ಬಿತ್ತರಿಸಲಾಗಿದೆ. ಸದರಿ ವಿಡಿಯೋದಲ್ಲಿ ನನ್ನ ವಿರುದ್ಧ ಗಂಭೀರ ಮಾನಹಾನಿಕರವಾದ ಆರೋಪಗಳನ್ನು ಪ್ರಚಾರಕ್ಕೆ ತರಲು ಪ್ರಯತ್ನಿಸಲಾಗಿದೆ.

3. ಸದರಿ ವಿಡಿಯೋವನ್ನು ಚಿತ್ರೀಕರಿಸಿರುವ ರೀತಿ, ಅದರಲ್ಲಿ ಭಾಗವಹಿಸಿರುವ ವ್ಯಕ್ತಿಗಳಿಗೆ ಕೇಳಲಾಗಿರುವ ಪ್ರಶ್ನೆಗಳ ಸ್ವರೂಪ , ಸಂಭಾಷಣೆಯ್ನ ನಿರ್ದಿಷ್ಡ ದಿಕ್ಕಿನಲ್ಲಿ ಮುನ್ನಡೆಸಿರುವ ವಿಧಾನ ಅದರ ಪ್ರಸ್ತುತಿ, ನಂತರ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ರೀತಿ ಎಲ್ಲವನ್ನೂ ಒಟ್ಟಾಗಿ ನೋಡಿದರೆ ಇದೊಂದು ಪೂರ್ವ ನಿಯೋಜಿತವಾಗಿ ರೂಪಿಸಿ, ಸಂಯೋಜಿಸಿ ಪ್ರಸಾರ ಮಾಡಲಾಗಿದೆ ಎಂಬ ಗಂಭೀರ ಅನುಮಾನ ಉಂಟಾಗುತ್ತದೆ.

4. 02/10/2026 ರಂದು ಯೂಟ್ಯೂಬ್ ವಾಹಿನಿ ಒಂದರಲ್ಲಿ " ಬಿಗ್ಗೆಸ್ಟ್ ಸಿಡಿ ಸ್ಪೋಟ" ಎಂಬ ಶೀರ್ಷಿಕೆಯಲ್ಲಿ ಕಾರ್ಯಕ್ರಮ‌ ಪ್ರಸಾರ ಮಾಡಲಾಗಿದೆ. ಹೀಗೆ ಪ್ರಸಾರ ಮಾಡುವ ಮೂಲಕ ಮೇಲ್ಕಂಡ ವಿಡೀಯೋಗೆ ಮತ್ತಷ್ಟು ಪ್ರಚಾರ ನೀಡಲಾಗಿದೆ.

5. ಮೇಲ್ಕಂಡ ಪ್ರಕಟಣೆಗಳು ಪ್ರತ್ಯೇಕವಾಗಿ ಅಥವಾ ಆಕಸ್ಮಿಕವಾಗಿ ನಡೆದ ಕೃತ್ಯಗಳೆಂದು ನಂಬಲು ಯಾವುದೇ ಕಾರಣವಿಲ್ಲ. ವಿಷಯವನ್ನು ಸೃಷ್ಠಿಸಿರುವ ಸಮಯ ಅದನ್ನು ದಾಖಲಿಸಿರುವ ಮತ್ತು ಪ್ರಸಾರ ಮಾಡಿರುವ ವಿಧಾನ ಅದನ್ನು ವಿವಿಧ ವೇದಿಕೆಗಳ ಮೂಲಕ‌ ಪ್ರಚಾರಕ್ಕೆ ತರುವ ಪ್ರಯತ್ನ ಹಾಗೂ ಸಂಪೂರ್ಣವಾಗಿ ಪರಿಶೀಲಿಸದ ಮತ್ತು ಅಧಾರ ರಹಿತ ಆರೋಪಗಳಿಗೆ ವ್ಯಾಪಕ‌ ಪ್ರಚಾರ ನೀಡುವುದನ್ನು ನೋಡಿದರೆ ಕೆಲವು ಪರದೆಯ ಹಿಂದಿರುವ ವ್ಯಕ್ತಿಗಳು ಮತ್ತು ಸ್ವಾರ್ಥ ಹಿತಾಸಕ್ತಿಗಳು ಒಟ್ಟಾಗಿ ನನ್ನ ವೈಯಕ್ತಿಕ ಘನತೆ, ರಾಜಕೀಯ ಪ್ರತಿಷ್ಠೆಗೆ ಹಾನಿ ಉಂಟು ಮಾಡುವ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಗಂಭೀರ ಅನುಮಾನ ಉಂಟಾಗುತ್ತಿದೆ.

6. ಸಂಪೂರ್ಣ ಕೃತ್ಯವನ್ನು ಯಾರು ರೂಪಿಸಿದರು, ಯಾರು ಸಂಯೋಜಿಸಿದರು, ಯಾರು ಪ್ರಸಾರ ಮಾಡಿದರು, ಅದಕ್ಕೆ ಯಾರು ಹಣಕಾಸು ಹಾಗೂ ಇತರೆ ನೆರವು ಒದಗಿಸಿದರು ಎಂಬುದು ನನಗೆ ತಿಳಿದಿಲ್ಲ. ಇದರ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚುವುದು ಅತ್ಯವಶ್ಯಕವಾಗಿದೆ.

7.  ಪ್ರಕರಣವೂ ವಿದ್ಯುನ್ಮಾನ ವಿಚಾರಕ್ಕೆ ಸಂಬಂಧಿಸಿರುವುದರಿಂದ ಮೂಲ ವಿಡಿಯೋ, ವಿಡೀಯೋ ಮಾಡಲು ಬಳಸಿದ ಸಾಧನಗಳು, ಮೂಲ ಕಡತಗಳು, ಕಡತಗಳಿಗೆ ಸಂಬಂಧಿಸಿದ ತಾಂತ್ರಿಕ ದತ್ತಾಂಶಗಳು, ವಾಹಿನಿ ಮತ್ತು ಖಾತೆಯ ವಿವರಗಳು ಐಪಿ ಅಡ್ರೆಸ್ ಎಲ್ಲವನ್ನೂ ಸಂರಕ್ಷಿಸಬೇಕಾಗಿದೆ.ತಡ ಮಾಡಿದರೆ ನಾಶ ಮಾಡುವ ಬದಲಾಯಿಸುವ ಸಾಧ್ಯತೆ ಇದೆ.

8. ನಾನು ಹಲವು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ಇದ್ದು ಜವಾಬ್ದಾರಿಯುತ ಸಂವಿಧಾನಿಕ ಹುದ್ದೆಗಳನ್ನು ನಿರ್ವಹಿಸಿದ್ದೆನೆ. ರಾಜಕೀಯ ಟೀಕೆ ಮತ್ತು ಸಾರ್ವಜನಿಕ ಪರಿಶೀಲನೆ ಪ್ರಜಾಪ್ರಭುತ್ವದ ಅಂಗವಾಗಿದೆ. ಆದರೆ ಕೆಲವು ವ್ಯಕ್ತಿಗಳು ಪೂರ್ವನಿಯೋಜಿತವಾಗಿ ಕೃತಕ ವಿಷಯಗಳನ್ನು ಸೃಷ್ಟಿಸಿ ಅದಕ್ಕೆ ನೈಜತೆಯ ರೂಪ ನೀಡಿ ನನ್ನ ಘನತೆಗೆ ಧಕ್ಕೆ ಉಂಟು ಮಾಡಲು ಪ್ರಯತ್ನ ಮಾಡುತ್ತಿರುವುದನ್ನು ಕಾನೂನಿನ ವ್ಯಾಪ್ತಿಯಿಂದ ಬಿಡಲು ಸಾಧ್ಯವಿಲ್ಲ.

9. ಮೇಲ್ಕಂಡ ಸಂದರ್ಭಗಳು ಈ ಸಂಪೂರ್ಣ ಕೃತ್ಯವನ್ನು ಯಾರು ರೂಪಿಸಿದರು, ಯಾರು ಅದರಲ್ಲಿ ಭಾಗವಹಿಸಿದರು, ಚಿತ್ರೀಕರಣ ಮತ್ತು ಪ್ರಕಟಣೆಗೆ ಯಾರು ನೆರವಾದರು, ಯಾವ ವಿಷಯವನ್ನು ಸೃಷ್ಟಿಸಲಾಯಿತು. ಅಥವಾ ಯಾವುದನ್ನು ಬದಲಾಯಿಸಲಾಯಿತು. ಇದನ್ನು ಹೇಗೆ ಪ್ರಸಾರ ಮಾಡಲಾಯಿತು? ಈ ಕಾರ್ಯಾಚರಣೆಯ ಹಿಂದಿನ ಉದ್ದೇಶವೇನು?. ಎಂಬುದನ್ನು ಪತ್ತೆ ಹಚ್ಚಲು ತಕ್ಷಣ ಸಮಗ್ರ ತನಿಖೆಯ ಅವಶ್ಯಕತೆಯನ್ನು ಸ್ಪಷ್ಟಪಡಿಸುತ್ತದೆ.

10.  ಮೇಲ್ಕಂಡ ಕೃತ್ಯಗಳು ಐಟಿ ಆ್ಯಕ್ಟ್ 66 (c ) , ಬಿ ಎನ್ ಎಸ್ 61,3(5) , ಸೇರಿ ವಿವಿಧ ವಿಧಿಗಳ ಅಡಿ ಅಪರಾಧವಾಗಿರುತ್ತೆ. ಹಾಗಾಗಿ ಇದರ ಹಿಂದಿರುವ ವ್ಯಕ್ತಿಗಳ ವಿರುದ್ದ ಇದರ ಕ್ರಮ ಅನಿವಾರ್ಯವಾಗಿರುತ್ತೆ.

11. ನಾನು ಮುಖ್ಯಮಂತ್ರಿಯಾಗಿದ್ದಾಗ ತದನಂತರವೂ ಸಾಕಷ್ಟು ಜನ ಶಾಸಕಾಂಗ ಹಾಗೂ ಪಕ್ಷದ ಹುದ್ದೆಗಳನ್ನು ಹರಸಿ ನನ್ನ ಸಹಾಯವನ್ನು ಕೇಳಿಕೊಂಡು ಬಂದಿರುತ್ತಾರೆ. ಆದರೆ ಎಲ್ಲರಿಗೂ ಸಹಾಯ ಮಾಡುವ ಅವಕಾಶ ಅಥವಾ ಅಧಿಕಾರ ಇಲ್ಲದಿದ್ದ ಸಮಯದಲ್ಲಿ ನಿರಾಸೆಗೊಂಡವರು ಇಂತಹ ಕೃತ್ಯವನ್ನು ಮಾಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

12. ಹೀಗೆ ಮೇಲ್ಕಂಡ ಕೃತ್ಯವನ್ನು ಎಸಗಿದ ವ್ಯಕ್ತಿಗಳ ಬಗ್ಗೆ ಸಮಗ್ರ ತನಿಖೆ ಮಾಡಿ ಕಾನೂನಿನ‌ ಪ್ರಕಾರ ಶಿಕ್ಷೆಗೆ ಒಳಪಡಿಸಬೇಕಾಗಿ ವಿನಂತಿಸಿಕೊಳ್ಳುತ್ತೆನೆ

ಹೀಗೆ 12 ಅಂಶಗಳನ್ನು ಒಳಗೊಂಡ ದೂರನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಗೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor