ಎಸ್ಸಿ-ಎಸ್ಟಿ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಗೆ ಪ್ರತ್ಯೇಕ ಅಧಿಸೂಚನೆ: ಸಂಪುಟ ಉಪ ಸಮಿತಿ ನಿರ್ಧಾರ
ಬೆಂಗಳೂರು : ರಾಜ್ಯ ಸರಕಾರದ ವಿವಿಧ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬ್ಯಾಕ್ಲಾಗ್ (ಹಿಂಬಾಕಿ) ಹುದ್ದೆಗಳ ನೇಮಕಾತಿಗೆ ಪ್ರತ್ಯೇಕವಾಗಿ ಅಧಿಸೂಚನೆ(ನೋಟಿಫಿಕೇಷನ್) ಹೊರಡಿಸಬೇಕು. ಅದರಲ್ಲಿಯೂ ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಜತೆಗೆ ವಿಲೀನ ಮಾಡದೆ ಪ್ರತ್ಯೇಕವಾಗಿ ಇಡೀ ರಾಜ್ಯಕ್ಕೆ ಒಮ್ಮೆ ಅಧಿಸೂಚನೆ ಹೊರಡಿಸಬೇಕೆಂಬ ನಿರ್ಧಾರಕ್ಕೆ ಸಂಪುಟ ಉಪಸಮಿತಿ ನಿರ್ಧಾರಕ್ಕೆ ಬಂದಿದೆ.
ಎಸ್ಸಿ/ಎಸ್ಟಿ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಪರಾಮರ್ಶಿಸಲು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ರಚಿಸಲಾದ ಸಂಪುಟ ಉಪಸಮಿತಿ ಸಭೆಯೂ ಗುರುವಾರ ವಿಕಾಸಸೌಧದಲ್ಲಿ ನಡೆಯಿತು.
ಈ ವೇಳೆ ವಿವಿಧ ಇಲಾಖೆಯಲ್ಲಿ ಬಾಕಿ ಇರುವ ಎಸ್ಸಿ/ಎಸ್ಟಿ ಬ್ಯಾಕ್ಲಾಗ್ ಹುದ್ದೆಗಳ ಮಾಹಿತಿಯನ್ನು ಪಡೆದ ಸಮಿತಿ, ಕೂಡಲೆ ನೇಮಕಾತಿಗೆ ಚಾಲನೆ ನೀಡಬೇಕು. ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಜತೆಗೆ ಸೇರಿಸದೆ ಪ್ರತ್ಯೇಕವಾಗಿ ಇಡೀ ರಾಜ್ಯಕ್ಕೆ ಒಂದು ಅಧಿಸೂಚನೆ ಹೊರಡಿಸಿ ಆನಂತರ ಯಾವ ಜಿಲ್ಲೆಗೆ ಎಷ್ಟು ಹುದ್ದೆಗಳನ್ನು ಹಂಚಬೇಕು ಎಂಬುದನ್ನು ನಿರ್ಧಾರ ಮಾಡಿಕೊಳ್ಳಬೇಕು. ಜಿಲ್ಲೆಗೊಂದು ಅಧಿಸೂಚನೆ ಹೊರಡಿಸುವ ಅಗತ್ಯ ಇಲ್ಲವೆಂದು ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.
ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಎಸ್ಸಿ/ಎಸ್ಟಿ ನೇಮಕಾತಿ ಹಿಂಬಾಕಿ ಹೆಚ್ಚು ಪ್ರಮಾಣದಲ್ಲಿ ಉಳಿದಿರುವುದು ಗಮನಿಸಿದ ಉಪಸಮಿತಿ ಸದಸ್ಯರು, ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಹಿಂಬಾಕಿ ಉಳಿದಿರುವ ನೇಮಕಾತಿ ಮಾಡಿಕೊಳ್ಳಬೇಕು. ಯಾವ ಶಿಕ್ಷಣ ಸಂಸ್ಥೆಗಳು ನಿರ್ಲಕ್ಷ್ಯ ವಹಿಸುತ್ತಾರೋ ಅಂತವರಿಗೆ ಸರಕಾರದಿಂದ ಕೊಡಲಾಗುತ್ತಿರುವ ಅನುದಾನವನ್ನು ಸ್ಥಗಿತ ಮಾಡುವಂತೆ ಸಮಿತಿ ಸದಸ್ಯರು ಸೂಚನೆ ನೀಡಿದರು.
ಇದಲ್ಲದೆ, ಇಲಾಖೆಯಿಂದ ಎಸ್ಸಿ/ಎಸ್ಟಿ ಬ್ಯಾಕ್ಲಾಗ್ ಹುದ್ದೆಗಳ ಮಾಹಿತಿ ಪಡೆದು ವಿಶೇಷ ಕಾರ್ಯಾಚರಣೆ ನಡೆಸಬೇಕೆಂದು ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ. ಈ ಮೂಲಕ ಒಂದೂವರೆ ವರ್ಷದಲ್ಲಿ ಎಲ್ಲ ಹಿಂಬಾಕಿ ಹುದ್ದೆಗಳ ಭರ್ತಿ ಮಾಡಬೇಕು. ನೇಮಕಾತಿ ವೇಳೆ ಕೇವಲ ಅಂಕ ಮತ್ತು ವಯಸ್ಸು ಮಾತ್ರ ಪರಿಗಣಿಸಬೇಕು. ಇವು ಹಿಂಬಾಕಿ ಉಳಿದ ಹುದ್ದೆಗಳು ಆಗಿರುವ ಕಾರಣಕ್ಕೆ ಹಣಕಾಸು ಇಲಾಖೆಯಿಂದ ಮತ್ತೆ ಒಪ್ಪಿಗೆ ಪಡೆಯುವ ಅಗತ್ಯ ಇಲ್ಲ. ನೇರವಾಗಿ ನೇಮಕಾತಿ ನಡೆಸಬಹುದು ಎಂದು ಸಭೆಯಲ್ಲಿ ಚರ್ಚೆಗಳು ನಡೆಸಲಾಯಿತು.
ಸಭೆಯಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಟಿ.ರಘುಮೂರ್ತಿ, ಕೆ.ಎಸ್. ಬಸವಂತಪ್ಪ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಎಸ್ಸಿಎಸ್ಪಿ ಮತ್ತು ಟಿಎಸ್ಪಿ ನೋಡಲ್ ಏಜೆನ್ಸಿ ಸಲಹೆಗಾರ ಡಾ.ಇ.ವೆಂಕಟಯ್ಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಅಧಿಕಾರಿಗಳಿಗೆ ತರಾಟೆ, ನೋಟಿಸ್ ಜಾರಿ: ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಹಿಂಬಾಕಿ ಉಳಿದಿರುವ ಹುದ್ದೆಗಳ ನೇಮಕಾತಿಗೆ ಆಡಳಿತ ಮಂಡಳಿ ಆಸಕ್ತಿ ವಹಿಸಿದರೂ ಸರಕಾರದ ಅಧಿಕಾರಿಗಳು ಒಪ್ಪಿಗೆ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಒಪ್ಪಿಗೆ ಕೊಡಲು ನೀವು ಯಾಕೇ ಅಡ್ಡಿ ಮಾಡುತ್ತೀರಾ ಎಂದು ಸಚಿವರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಗೈರು ಆಗಿರುವ ವಿಚಾರಕ್ಕೆ ಸದನ ಸಮಿತಿ ಅಸಮಧಾನ ವ್ಯಕ್ತಪಡಿಸಿ ನೋಟಿಸ್ ಜಾರಿ ಮಾಡಲು ಸೂಚನೆ ನೀಡಲಾಯಿತು.