×
Ad

ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿನ ಜನೌಷಧ ಕೇಂದ್ರಗಳನ್ನು ಮುಚ್ಚುವಂತೆ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

Update: 2025-07-08 23:06 IST

ಸಾಂದರ್ಭಿಕ ಚಿತ್ರ 

ಬೆಂಗಳೂರು :ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಜನೌಷಧ ಕೇಂದ್ರಗಳನ್ನು ಮುಚ್ಚುವಂತೆ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಬಾಲ್ಕಿ ಮೂಲದ ಶ್ರೀಕಾಂತ್‌ ಅನಂತಾಚಾರ್ಯ ಜೋಶಿ ಸೇರಿದಂತೆ ಜನೌಷಧ ಕೇಂದ್ರಗಳ 16 ಮಾಲೀಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರಿದ್ದ ಪೀಠ, ಅರ್ಜಿದಾರರಿಗೆ ಸೀಮಿತವಾಗಿ ಮಧ್ಯಂತರ ತಡೆ ನೀಡಿ ಆದೇಶಿದೆ.

ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ವೈದ್ಯಕೀಯ ಆಡಳಿಯಾಧಿಕಾರಿಗಳು ಆಸ್ಪತ್ರೆಗಳಲ್ಲಿ ಔಷಧಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದಕ್ಕೆ ನೀಡಿರುವ ಅನುಮತಿ ರದ್ದು ಗೊಳಿಸುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟನೆ ನೀಡಿದೆ.

ಸರ್ಕಾರ ತಮ್ಮ ವಾದವನ್ನು ಆಲಿಸದೆ, ವಿಚಾರಣೆ ನಡೆಸಿ ಮತ್ತು ಗಮನಕ್ಕೆ ತಾರದೆ, ತರಾತುರಿಯಲ್ಲಿ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ. ಈ ಬೆಳವಣಿಗೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಈ ಔಷಧ ಮಳಿಗೆ ಮೂಲಸೌಲಭ್ಯಗಳು, ಸಿಬ್ಬಂದಿ ವೇತನ, ಪೀಠೋ ಪಕರಣಗಳು, ಔಷಧಗಳ ದಾಸ್ತಾನು, ಕೇಂದ್ರದ ಕಾರ್ಯಚರಣೆಗೆ ಸಾಕಷ್ಟು ಬಂದವಾಳ ಹೂಡಿಕೆ ಮಾಡಿದ್ದಾರೆ. ಕಾನೂನು ಬದ್ಧವಾಗಿ ಪರವಾನಿಗೆ ಪಡೆದುಕೊಳ್ಳಲಾಗಿದೆ. ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸಲು ಹೊರಡಿಸಿರುವ ಆದೇಶ ಸಂವಿಧಾನ ಪರಿಚ್ಛೇದ 19(1)(ಜಿ)ರ ಅಡಿಯಲ್ಲಿ ಲಭ್ಯವಿರುವ ಜೀವಿಸುವ ಹಕ್ಕು, ಪರಿಚ್ಚೇದ 19ರ ಅಡಿಯಲ್ಲಿ ಬದುಕುವ ಹಕ್ಕುಗೆ ವಿರುದ್ಧವಾಗಿದೆ ಎಂದು ಅರ್ಜಿದಾರರ ಪರ ವಕೀಲರು ಪೀಠಕ್ಕೆ ವಿವರಿಸಿದರು.

ವಾದ ಆಲಿಸಿದ ಪೀಠ ಮೇಲಿನ ಆದೇಶ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News