ನಟ ದರ್ಶನ್‌ಗೆ ಜಾಮೀನು ನೀಡಿದ ಹೈಕೋರ್ಟ್ ಕ್ರಮಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ
ನಟ ದರ್ಶನ್
ಹೊಸದಿಲ್ಲಿ: ನಟ ದರ್ಶನ್ ಮತ್ತು ಇತರರಿಗೆ ನೀಡಿದ ಜಾಮೀನಿನ ಕುರಿತು, ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್‌ನ ಕ್ರಮವನ್ನು ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 13, 2024ರಂದು ಹೈಕೋರ್ಟ್ ನೀಡಿದ್ದ ಜಾಮೀನು ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠವು ತೀಕ್ಷ್ಣ ಪ್ರತಿಕ್ರಿಯೆ ನೀಡಿತು.
“ಎಲ್ಲಾ ಜಾಮೀನು ಅರ್ಜಿಗಳಿಗೂ ಹೈಕೋರ್ಟ್ ಒಂದೇ ರೀತಿಯ ಆದೇಶ ನೀಡುತ್ತದೆಯೇ?” ಎಂದು ಪ್ರಶ್ನಿಸಿದ ಪೀಠ, “ಈ ರೀತಿಯ ಪ್ರಕರಣದಲ್ಲಿ ಜಾಮೀನು ನೀಡಿರುವ ಕ್ರಮದಿಂದ ನಮಗೆ ತೊಂದರೆಯಾಗುತ್ತಿದೆ. ಹೈಕೋರ್ಟ್ ನ್ಯಾಯಾಧೀಶರಿಂದ ಈ ರೀತಿಯ ತಪ್ಪನ್ನು ನಿರೀಕ್ಷಿಸಿರಲಿಲ್ಲ. ಸೆಷನ್ಸ್ ನ್ಯಾಯಾಲಯದಿಂದ ಈ ತಪ್ಪಾಗಿದ್ದರೆ ಸುಮ್ಮನಿರಬಹುದಿತ್ತು. ಹೈಕೋರ್ಟ್ ನ್ಯಾಯಾಧೀಶರು ಈ ರೀತಿಯ ತಪ್ಪು ಮಾಡುತ್ತಾರೆಯೇ?” ಎಂದು ವಿಷಾದ ವ್ಯಕ್ತಪಡಿಸಿತು.
ಪೀಠವು, ಈ ಮಾದರಿಯ ತೀರ್ಪು ನೀಡುವ ಮೊದಲು ಹೈಕೋರ್ಟ್ ತನಿಖಾ ಅಂಶಗಳನ್ನು ಸಮರ್ಪಕವಾಗಿ ಪರಿಗಣಿಸಿದೆಯೇ ಎಂಬುದರ ಕುರಿತು ಅನುಮಾನ ವ್ಯಕ್ತಪಡಿಸಿದೆ. "ಇದು ಕೊಲೆ ಮತ್ತು ಪಿತೂರಿ ಪ್ರಕರಣವಾಗಿರುವುದರಿಂದ ನಾವು ಹೆಚ್ಚು ಗಂಭೀರವಾಗಿ ವಿಚಾರಿಸುತ್ತೇವೆ," ಎಂದು ಸ್ಪಷ್ಟಪಡಿಸಿತು.
ವಿಚಾರಣೆಯ ವೇಳೆ, ಆರೋಪಿ ಪವಿತ್ರಾ ಗೌಡ ಪರ ವಕೀಲರಿಗೆ ಉದ್ದೇಶಿಸಿ ಪೀಠವು, "ನೀವು ಈ ಪ್ರಕರಣಕ್ಕೆ ಮೂಲ ಕಾರಣ. ನೀವು ಪ್ರಚೋದನೆ ನೀಡಿದ್ದರಿಂದ ಇತರರು ಆಕ್ರಮಣಕ್ಕೆ ಇಳಿದಿದ್ದಾರೆ," ಎಂದು ಗಂಭೀರ ಆರೋಪ ಮಾಡಿತು. ಪವಿತ್ರಾ ಗೌಡಗೆ ಬಂದ ಸಂದೇಶಗಳು ಮತ್ತು ಕರೆ ದಾಖಲೆಗಳ ವಿಚಾರದಲ್ಲಿ ವಕೀಲರು ನಿರಾಕರಣೆ ಮಾಡಿದರು. ಆಗ ಪ್ರತಿಕ್ರಿಯಿಸಿದ ಪೀಠವು, "ಇಲ್ಲಿ ಸೂಕ್ಷ್ಮವಾದ ತರ್ಕಗಳಿಗಲ್ಲ," ಎಂದು ಸ್ಪಷ್ಟಪಡಿಸಿತು.
ಆರೋಪಿಗಳಲ್ಲಿ ಒಬ್ಬರ ಮೊಬೈಲ್ ಫೋನ್‌ನಲ್ಲಿ ಕಂಡುಬಂದ ಹಲ್ಲೆ ಚಿತ್ರಗಳ ಕುರಿತು ಕೂಡ ಪೀಠ ಗಂಭೀರ ಪ್ರಶ್ನೆಗಳನ್ನು ಹೊರಹಾಕಿತು. "ಈ ಜನರು ಹಲ್ಲೆ ವೇಳೆ ಫೋಟೋಗೆ ಪೋಸ್ ನೀಡುತ್ತಿದ್ದರೇನು?" ಎಂದು ಆಘಾತಕಾರಿಯಾಗಿ ಪ್ರಶ್ನಿಸಿತು.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, "ನಾವು ಖುಲಾಸೆ ಅಥವಾ ಶಿಕ್ಷೆಯ ತೀರ್ಪು ನೀಡುವುದಿಲ್ಲ. ಆದರೆ ಹೈಕೋರ್ಟ್‌ನ ನ್ಯಾಯಾಂಗ ಕ್ರಮವನ್ನು ಪರಿಶೀಲಿಸಿ ಅಂತಿಮ ತೀರ್ಮಾನಕ್ಕೆ ಬರುವೆವು" ಎಂದು ಹೇಳಿ ವಿಚಾರಣೆಯನ್ನು ಪೀಠ ಮುಕ್ತಾಯಗೊಳಿಸಿತು.