×
Ad

ಜೂ.28ಕ್ಕೆ ಸಿಇಟಿ ಸೀಟು ಹಂಚಿಕೆ ಮಂಥನ : ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್

Update: 2025-06-25 20:27 IST

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಸುಗಮಗೊಳಿಸುವುದರ ಭಾಗವಾಗಿ ಪ್ರಸಕ್ತ ವರ್ಷದ ಸಿಇಟಿ ಅಭ್ಯರ್ಥಿಗಳು ಹಾಗೂ ಪೋಷಕರಿಗೆ ಸೀಟು ಹಂಚಿಕೆ ವಿಧಾನದ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ಜೂ.28ರಂದು ರಾಜ್ಯದ ಎಲ್ಲ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 'ಯಜಿಸಿಇಟಿ-2025: ಸೀಟು ಹಂಚಿಕೆ ಮಂಥನ' ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ 16 ಸರಕಾರಿ ಇಂಜಿನಿಯರಿಂಗ್ ಕಾಲೇಜು, 8 ಅನುದಾನಿತ, 6 ವಿಟಿಯು ಸಂಯೋಜಿತ ಇಂಜಿನಿಯರಿಂಗ್ ಕಾಲೇಜುಗಳು ಹಾಗೂ 9 ಜಿಲ್ಲೆಗಳ ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪೋಷಕರು/ವಿದ್ಯಾರ್ಥಿಗಳ ಎಲ್ಲ ರೀತಿಯ ಅನುಮಾನಗಳಿಗೆ ಪರಿಹಾರ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳು ಇಲ್ಲದ ಚಿಕ್ಕಮಗಳೂರು, ಹುಬ್ಬಳ್ಳಿ (ಧಾರವಾಡ ಜಿಲ್ಲೆ), ಕೆ.ಜಿ.ಎಫ್ (ಕೋಲಾರ), ಮಂಗಳೂರು, ಶಿವಮೊಗ್ಗ, ತುಮಕೂರು, ಉಡುಪಿ, ವಿಜಯಪುರ, ಸುರಪುರ (ಯಾದಗಿರಿ)ದ ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಈ ಮಂಥನ ಕಾರ್ಯಕ್ರಮ ನಡೆಯಲಿದೆ ಎಂದು ಸುಧಾಕರ್ ವಿವರಿಸಿದ್ದಾರೆ.

ಕೌನ್ಸೆಲಿಂಗ್ ಹೇಗೆ ನಡೆಯುತ್ತದೆ? ಕಾಲೇಜು ಆಯ್ಕೆ ಹೇಗೆ? ಆಪ್ಷನ್ ಎಂಟ್ರಿ ಯಾವ ರೀತಿ ಮಾಡಬೇಕು? ಇಂತಹ ಪದೇ ಪದೇ ಕೇಳಿಬರುವ ಪ್ರಶ್ನೆಗಳಿಗೆ ಈ ಕಾರ್ಯಕ್ರಮದಲ್ಲಿ ಉತ್ತರ ದೊರೆಯಲಿದೆ. ಮುಖ್ಯವಾಗಿ, ಕೆಲವರು ಸೀಟು ಹಂಚಿಕೆ ಪ್ರಕ್ರಿಯೆ ಕಬ್ಬಿಣದ ಕಡಲೆ ಎಂದು ಭಾವಿಸಿದ್ದಾರೆ. ಇದನ್ನೇ ಕೆಲವರು ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ಪೋಷಕರು/ ವಿದ್ಯಾರ್ಥಿಗಳನ್ನು ಸುಲಿಗೆ ಮಾಡಿರುವ ಪ್ರಕರಣಗಳೂ ನಡೆದಿವೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಅಂತಹ ಮೋಸದ ಜಾಲಗಳು ಈಗಲೂ ಸಕ್ರಿಯವಾಗಿರಬಹುದು. ಇದನ್ನು ತಪ್ಪಿಸುವ ದಿಸೆಯಲ್ಲಿ ಪೋಷಕರು ಹಾಗೂ ವಿದ್ಯಾರ್ಥಿ ಸಮುದಾಯದಕ್ಕೆ ಸ್ಪಷ್ಟ ಹಾಗೂ ನಿಖರ ಮಾಹಿತಿಯನ್ನು ಕಾರ್ಯಕ್ರಮದ ಮೂಲಕ ನೀಡಲಾಗುವುದು. ವಿದ್ಯಾರ್ಥಿಗಳು ಮತ್ತು ಪೋಷಕರು ತಮಗೆ ಹತ್ತಿರದಲ್ಲಿರುವ ಕಾಲೇಜಿಗೆ ಭೇಟಿ ನೀಡಿ ಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆಯಬಹುದು ಎಂದು ಸುಧಾಕರ್ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ಮನಮುಟ್ಟುವಂತೆ ವಿವರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ನಮ್ಮ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಶೈಕ್ಷಣಿಕ ಪ್ರಗತಿ ಬಗ್ಗೆಯೂ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಮಾಹಿತಿ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಪಾರದರ್ಶಕತೆಗೆ ಒತ್ತು ನೀಡುತ್ತಾ ಕಾಲಕಾಲಕ್ಕೆ ಹೊಸ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುತ್ತಾ ಸಾಗಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಈ ಯುಜಿಸಿಇಟಿ ಸೀಟು ಹಂಚಿಕೆ ಮಂಥನ ಉಪಕ್ರಮವು ಒಟ್ಟಾರೆ ಸಿಇಟಿ ಪ್ರಕ್ರಿಯೆ ಇನ್ನಷ್ಟು ಸುಗಮಗೊಳಿಸಲಿದೆ ಎಂಬ ವಿಶ್ವಾಸವಿದೆ ಎಂದು ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News