Bengaluru | ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿವಾಸದ ಮೇಲೆ ಈ.ಡಿ ದಾಳಿ

Update: 2026-08-23 20:18 IST

ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್

ಬೆಂಗಳೂರು : ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಪರೀಕ್ಷಾ ಉಸ್ತುವಾರಿ ವಹಿಸಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಬೆಂಗಳೂರಿನ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ಈ.ಡಿ.) ಅಧಿಕಾರಿಗಳು ರವಿವಾರ ದಾಳಿ ನಡೆಸಿ, ತೀವ್ರ ಶೋಧ ನಡೆಸಿದ್ದಾರೆ.

ಸಿಆರ್‍ಪಿಎಫ್ ಭದ್ರತಾ ಸಿಬ್ಬಂದಿಯೊಂದಿಗೆ ಆಗಮಿಸಿದ ಈ.ಡಿ. ಅಧಿಕಾರಿಗಳನ್ನು ಜ್ಞಾನೇಂದ್ರ ಕುಮಾರ್ ಅವರ ನಿವಾಸದ ಭದ್ರತಾ ಸಿಬ್ಬಂದಿ ಮುಖ್ಯದ್ವಾರದಲ್ಲೇ ತಡೆದು ನಿಲ್ಲಿಸಿದ್ದಲ್ಲದೆ, ಮುಖ್ಯದ್ವಾರಕ್ಕೆ ಬೀಗ ಹಾಕಿದರು. ಮನೆಯವರ ಅನುಮತಿ ಇಲ್ಲದೆ ಯಾರನ್ನೂ ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಈ.ಡಿ. ಅಧಿಕಾರಿಗಳಿಗೆ ತಿಳಿಸಿದರು. ಇದರಿಂದಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಈ.ಡಿ. ಅಧಿಕಾರಿಗಳು ಅಪಾರ್ಟ್‍ಮೆಂಟ್ ಹೊರಭಾಗದಲ್ಲೇ ಕಾಯುವಂತಾಯಿತು.

ಈ ವೇಳೆ ಈ.ಡಿ. ಅಧಿಕಾರಿಗಳು ದೂರವಾಣಿ ಮೂಲಕ ಜ್ಞಾನೇಂದ್ರ ಕುಮಾರ್ ಅವರನ್ನು ಸಂಪರ್ಕಿಸಿದ್ದಾರೆ. ಜ್ಞಾನೇಂದ್ರ ಕುಮಾರ್ ಸೂಚನೆ ನೀಡಿದ ನಂತರ ಮುಖ್ಯದ್ವಾರವನ್ನು ತೆರೆಯಲಾಯಿತು. ನಂತರ ನಿವಾಸದಲ್ಲಿನ ದಾಖಲೆಗಳ ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‍ಸಿ) ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಈ.ಡಿ. ಅಧಿಕಾರಿಗಳು ಕೆಪಿಎಸ್‍ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಕೆಲವು ಸದಸ್ಯರ ಮನೆಗಳು ಸೇರಿ 21 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ತನಿಖೆಯ ಮುಂದುವರಿದ ಭಾಗವಾಗಿ, ಪರೀಕ್ಷಾ ಉಸ್ತುವಾರಿ ವಹಿಸಿದ್ದ ಜ್ಞಾನೇಂದ್ರ ಕುಮಾರ್ ಅವರ ಮನೆ ಮೇಲೂ ದಾಳಿ ನಡೆಸಿ, ದಾಖಲೆ ಪರಿಶೀಲನೆ ಮಾಡಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News